ರಾಮನಗರ: ಹಾಡಹಗಲೇ ಮನೆಗೆ ನುಗ್ಗಿದ ನಾಲ್ವರು ದರೋಡೆಕೋರರು ತಾಯಿ-ಮಗಳ ಕುತ್ತಿಗೆ ಮೇಲೆ ಲಾಂಗ್‍ಗಳನ್ನಿಟ್ಟು ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಚನ್ನಪಟ್ಟಣದ ಕೆ.ಎಚ್.ಬಿ ಕಾಲೋನಿಯಲ್ಲಿ ನಡೆದಿದೆ.
ಕೆಎಚ್‍ಬಿ ಕಾಲೋನಿಯ ನಿವಾಸಿ ಶಿಕ್ಷಕ ಉತ್ತೇಶ್ ಎಂಬವರ ಮನೆಯಲ್ಲಿ ಘಟನೆ ನಡೆದಿದೆ. ದರೋಡೆಕೋರರು ಉತ್ತೇಶ್ ಅವರ ಪತ್ನಿ ಸುವರ್ಣ ಹಾಗೂ ಮಗಳು ಇಂಚರ ಅವರಿಗೆ ಹೆದರಿಸಿ ದರೋಡೆ ಮಾಡಿದ್ದಾರೆ.
ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಬಂದಿದ್ದ ನಾಲ್ವರು ದರೋಡೆಕೋರರು ಮನೆಗೆ ನುಗ್ಗಿ ಸುವರ್ಣ ಹಾಗೂ ಇಂಚರ ಅವರ ಕುತ್ತಿಗೆ ಮೇಲೆ ಲಾಂಗ್ ಇಟ್ಟು ಚಿನ್ನಾಭರಣ, ಹಣ ನೀಡುವಂತೆ ಹೆದರಿಸಿದ್ದರು. ಅಷ್ಟೇ ಅಲ್ಲದೆ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರ ಹಾಗೂ ಬೀರುವಿನಲ್ಲಿದ್ದ 10 ಸಾವಿರ ರೂ. ನಗದು ದೋಚಿದ್ದಾರೆ.
ದರೋಡೆ ವೇಳೆ ಮನೆಯ ಎಲ್ಲ ಕಡೆ ಹುಡುಕಾಟ ನಡೆಸುತ್ತಿದ್ದ ದರೋಡೆಕೋರರ ಕಣ್ಣಿಗೆ ಮನೆಯ ಹಾಲ್‍ನಲ್ಲಿ ಹಾಕಿದ್ದ ಮೈಸೂರು ಎಸಿಪಿ ಗೋಪಾಲ ಅವರ ಫೋಟೋ ನೋಡಿದ್ದರು. ಆಗ ಇದು ಪೊಲೀಸರ ಮನೆ ಎಂದು ಪರಾರಿಯಾಗಿದ್ದಾರೆ.
ಈ ಸಂಬಂಧ ಮಾಹಿತಿ ಸಿಗುತ್ತಿದ್ದಂತೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ಆರಂಭಿಸಿರುವ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.