ರಾಮನಗರ: ನಿಮಗೆ ಇದು ಕಡೆಯ ಎಚ್ಚರಿಕೆ. ಪಕ್ಷಕ್ಕೆ ಬನ್ನಿ ಎಂದು ನೀಡಿದ್ದ ಆಹ್ವಾನವನ್ನು ನಿರಾಕರಿಸಿದ್ದರ ಪರಿಣಾಮ ಜೈಲಿನಲ್ಲಿ ಇರಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಸಂಸದ ಡಿ.ಕೆ.ಸುರೇಶ್ ಅಸಮಾಧಾನ ಹೊರ ಹಾಕಿದ್ದಾರೆ.
ಕನಕಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, 2018 ವಿಧಾನಸಭಾ ಚುನಾವಣೆಗೂ ಮುನ್ನ ತಮ್ಮ ಪಕ್ಷಕ್ಕೆ ಬರುವಂತೆ ಆಫರ್ ನೀಡಿದ್ದರು. ಚುನಾವಣೆ ಬಳಿಕವೂ ಪಕ್ಷ ಸೇರುವಂತೆ ಒತ್ತಡ ಹೇರಿದ್ದರು. ಅಷ್ಟೇ ಅಲ್ಲದೆ ಅನರ್ಹ ಶಾಸಕರು ರಾಜೀನಾಮೆ ನೀಡಿದಾಗ ಕೆಲ ಅಧಿಕಾರಿಗಳು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಫೋನ್ ಮಾಡಿ, ನೀವು ಇದರಲ್ಲಿ ಭಾಗಿಯಾಗಬೇಡಿ ಅಂತ ಎಚ್ಚರಿಕೆ ನೀಡಿದ್ದರು. ಫೋನ್ ಮಾಡಿದ್ದು ಯಾರು ಅಂತ ವಿಚಾರಿಸಿದಾಗ ಅದು ಆದಾಯ ತೆರಿಗೆ ಅಧಿಕಾರಿಗಳದ್ದು ಎನ್ನುವ ತಿಳಿಯಿತು ಎಂದು ಹೇಳಿದರು.
ಜಾರಿ ನಿರ್ದೇಶನಾಲಯ ಅಧಿಕಾರಿಗಳು ನಮ್ಮನ್ನು ಬಂಧಿಸುತ್ತಾರೆ ಎನ್ನುವ ಅನುಮಾನ ನಮಗೆ ಬಂದಿತ್ತು. ಅದನ್ನು ಎದುರಿಸಲು ನಾವು ಮಾನಸಿಕವಾಗಿ ಸಿದ್ಧರಾಗಿದ್ದೇವು. ನ್ಯಾಯಾಲಯದಲ್ಲಿ ನಮಗೆ ಗೆಲುವು ಸಿಗುತ್ತದೆ ಎನ್ನುವ ವಿಶ್ವಾಸವಿದೆ ಎಂದರು.
ಇಡಿ, ಐಟಿ, ಸಿಬಿಐ ಸೇರಿದಂತೆ ದೇಶದ ಇಡೀ ಆಡಳಿತವೇ ಬಿಜೆಪಿಯ ಕಪಿಮುಷ್ಠಿಯಲ್ಲಿದೆ. ಯಾರು ಯಾರನ್ನ ನಂಬಬೇಕು? ಯಾವ ಸಂಸ್ಥೆಯ ಮೇಲೆ ನಂಬಿಕೆ ಇಡಬೇಕು? ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಯಾವ ತಪ್ಪನ್ನು ಮಾಡಿಲ್ಲ, ಮಾಡುವುದೂ ಇಲ್ಲ. ಆದಷ್ಟು ಬೇಗ ಅವರಿಗೆ ಜಾಮೀನು ಸಿಗುವ ನಿರೀಕ್ಷೆ ಇದೆ ಎಂದು ಹೇಳಿದರು.
ಡಿಕೆ ಶಿವಕುಮಾರ್ ಕಥೆ ಮುಗಿಯಿತು, 10 ವರ್ಷ ಜೈಲಿನಲ್ಲಿ ಇರುತ್ತಾರೆ, 20 ವರ್ಷ ಜೈಲಂತೆ ಎಂದು ಸುದ್ದಿ ಮಾಡುತ್ತಿದ್ದಾರೆ. ಅದೆಲ್ಲವೂ ಸುಳ್ಳು, ಶೀಘ್ರದಲ್ಲೇ ಡಿಕೆ ಶಿವಕುಮಾರ್ ಅವರಿಗೆ ಜಾಮೀನು ಸಿಗುತ್ತದೆ. ಕನಕಪುರಕ್ಕೆ ಬರುತ್ತಾರೆ. ನಿಮ್ಮ ಮುಂದೆ ನಿಲ್ಲುತ್ತಾರೆ ಎಂದು ಕಾರ್ಯಕರ್ತರಿಗೆ ತಿಳಿಸಿದರು.
ನಮ್ಮ ಎಲ್ಲ ವ್ಯವಹಾರಗಳು ಪಾರದರ್ಶಕವಾಗಿವೆ. ನಾನು, ನಮ್ಮ ಅಣ್ಣ ಕೆ.ಶಿವಕುಮಾರ್ ಹಾಗೂ ನಮ್ಮ ಕುಟುಂಬದವರು ಯಾರೂ ಅವ್ಯವಹಾರ ನಡೆಸಿಲ್ಲ. ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ನೀನು ಹೊರಗೆ ತಲೆ ಕೆಡಿಸ್ಕೋಬೇಡ ಅಂತ ಅಣ್ಣ ಹೇಳಿದ್ದಾರೆ. ನಿಮ್ಮ ಒಗ್ಗಟ್ಟು ಅಣ್ಣನ ಮನಸ್ಸಿಗೆ ಧೈರ್ಯ ತುಂಬಿದೆ ಎಂದು ಬೆಂಬಲಿಗರನ್ನು ಹೊಗಳಿದರು.