ರಾಮನಗರ: ಎಟಿಂಎ ಕೇಂದ್ರಗಳಲ್ಲಿ ಸ್ಕಿಮ್ಮಿಂಗ್ ಮಷೀನ್ ಅಳವಡಿಸಿ ಎಟಿಎಂ ಕಾರ್ಡ್‌ಗಳ ಮಾಹಿತಿ ಕದ್ದು, ನಕಲಿ ಕಾರ್ಡ್ ಮೂಲಕ ಹಣ ಕದಿಯುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ರಾಮನಗರ ಜಿಲ್ಲೆಯ ಕುದೂರು ಪೊಲೀಸರು ಬಂಧಿಸಿದ್ದಾರೆ.
ಸಾರ್ವಜನಿಕರು ಎಟಿಎಂಗಳಲ್ಲಿ ಹಣ ಡ್ರಾ ಮಾಡುವ ವೇಳೆ ಎಟಿಎಂ ಕಾರ್ಡ್‌ಗಳ ಮಾಹಿತಿ ಕಳ್ಳತನ ಮಾಡಿ, ನಂತರ ನಕಲಿ ಎಟಿಎಂ ಕಾರ್ಡ್ ಮೂಲಕ ಹಣ ಡ್ರಾ ಮಾಡಿಕೊಳ್ಳುತ್ತಿದ್ದ ಇಬ್ಬರು ತಾಂಜೇನಿಯಾ ವಿದ್ಯಾರ್ಥಿಗಳನ್ನ ರಾಮನಗರ ಜಿಲ್ಲೆಯ ಕುದೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ತಾಂಜೇನಿಯಾ ದೇಶದ ಅಲೆಕ್ಸ್ ಮೆಂಡ್ರಾಡ್ ಮ್ಸೆಕೆ(24), ಜಾರ್ಜ್ ಜೆನೆಸ್ ಅಸ್ಸೆಯ್(24) ಎಂದು ಗುರುತಿಸಲಾಗಿದೆ.
ಕಳ್ಳತನ ಮಾಡಿದ್ದು ಹೇಗೆ?
ಬಂಧಿತ ಆರೋಪಿಗಳು ಸೆಕ್ಯೂರಿಟಿ ಗಾರ್ಡ್‌ಗಳಿಲ್ಲದ ಎಟಿಎಂ ಕೇಂದ್ರಗಳನ್ನ ಗುರಿಯಾಗಿಸಿಕೊಂಡು, ಎಟಿಎಂನಲ್ಲಿ ಸ್ಕಿಮ್ಮಿಂಗ್ ಮಷೀನ್ ಅಳವಡಿಸುತ್ತಿದ್ದರು. ನಂತರ ಎಟಿಎಂ ಕೇಂದ್ರಗಳಿಗೆ ಬಂದ ಸಾರ್ವಜನಿಕರು ಹಣ ಡ್ರಾ ಮಾಡುವ ವೇಳೆ ಎಟಿಎಂ ಮಾಹಿತಿ ಹಾಗೂ ಸೀಕ್ರೆಟ್ ಪಿನ್ ಎಲ್ಲವೂ ಸಹ ಸ್ಕಿಮ್ಮಿಂಗ್ ಮಷೀನಿನಲ್ಲಿ ರೆಕಾರ್ಡ್ ಆಗುತ್ತಿತ್ತು. ನಂತರ ನಕಲಿ ಎಟಿಎಂಗಳಿಗೆ ಮಾಹಿತಿಯನ್ನ ತುಂಬಿ ಬೇರೆ ಎಟಿಎಂಗಳಲ್ಲಿ ನಕಲಿ ಎಟಿಎಂ ಕಾರ್ಡ್‌ಗಳನ್ನು ಬಳಸಿ ಖದೀಮರು ಹಣ ಡ್ರಾ ಮಾಡಿಕೊಳ್ಳುತ್ತಿದ್ದರು.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಹೀಗೆ ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯ ಗೊಲ್ಲಹಳಿ ಗ್ರಾಮದ ಶಿವಕುಮಾರ್ ಎಂಬವರ ಕೆನರಾ ಬ್ಯಾಂಕ್ ಎಟಿಎಂನ ಮಾಹಿತಿ ಕದ್ದು, ಆರೋಪಿಗಳು ಹಣ ಡ್ರಾ ಮಾಡುತ್ತಿದ್ದರು. ಎಟಿಎಂ ತಮ್ಮ ಬಳಿಯೇ ಇದ್ದರೂ ಹಣ ಡ್ರಾ ಆಗುತ್ತಿರುವ ಬಗ್ಗೆ ಮಾಹಿತಿ ತಿಳಿದ ಶಿವಕುಮಾರ್ ಅವರು ಕುದೂರು ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದರು. ಈ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡಿದ್ದ ಕುದೂರು ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.
ಅಲೆಕ್ಸ್ ಮೆಂಡ್ರಾಡ್ ಮ್ಸೆಕೆ ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದು, ಯಲಹಂಕದ ಫ್ಲಾಟ್‍ವೊಂದರಲ್ಲಿ ವಾಸವಿದ್ದನು. ಇತ್ತ ಮತ್ತೊಬ್ಬ ಆರೋಪಿ ಜಾರ್ಜ್ ಕುಮಾರಸ್ವಾಮಿ ಲೇಔಟ್‍ನ ರಾಜ್ಯೋತ್ಸವ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದನು.
ಬಂಧಿತರಿಂದ 1 ಕಾರು, 2 ಬೈಕ್, 1 ಲ್ಯಾಪ್ ಟಾಪ್, 4 ಮೊಬೈಲ್ ಫೋನ್‍ಗಳು, ನಕಲಿ ಎಟಿಎಂ ಕಾರ್ಡ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಕುದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.