ರಾಮನಗರ: ಆದಿವಾಸಿ ಇರುಳಿಗ ಜನಾಂಗದವರು ಅರಣ್ಯ ಹಕ್ಕು ಕಾಯಿದೆ ಪ್ರಕಾರ ಭೂಮಿಯ ಹಕ್ಕು ಪತ್ರಕ್ಕಾಗಿ ನಡೆಸಿಸುತ್ತಿರುವ ಅನಿರ್ಧಿಷ್ಟಾವಧಿ ಹಾಗೂ ಆಹೋರಾತ್ರಿ ಪ್ರತಿಭಟನೆ ಎರಡೇ ದಿನಕ್ಕೆ ಕಾಲಿಟ್ಟಿದೆ.
ಕನಕಪುರ ತಾಲೂಕಿನ ಮರಳವಾಡಿ ಹೋಬಳಿಯ ಬುಡಗಯ್ಯನದೊಡ್ಡಿ ಸಮೀಪದ ಬನ್ನೇರುಘಟ್ಟ ರಾಷ್ಟ್ರೀಯ ಅರಣ್ಯ ಪ್ರದೇಶದಲ್ಲಿ ಆದಿವಾಸಿ ಇರುಳಿಗರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಮನಗರ ಉಪ ವಿಭಾಗಧಿಕಾರಿ ದಾಕ್ಷಾಯಿಣಿ ಸ್ಥಳಕ್ಕೆ ಭೇಟಿ ನೀಡಿ, ಹೋರಾಟಗಾರರ ಮನವೊಲಿಕೆಗೆ ಪ್ರಯತ್ನಿಸಿದರೂ ಸಫಲವಾಗಿಲ್ಲ. ಹೀಗಾಗಿ ಪ್ರತಿಭಟನಾಕಾರರು ಅರಣ್ಯದಲ್ಲೇ ಪ್ರತಿಭಟನೆ ಮುಂದುವರಿಸಿದ್ದಾರೆ.
Advertisement
Advertisement
ರಾಮನಗರ ಜಿಲ್ಲಾಡಳಿತ ಅರಣ್ಯ ಹಕ್ಕು ಕಾಯಿದೆ ಪ್ರಕಾರ ಭೂಮಿಯ ಹಕ್ಕು ಪತ್ರ ನೀಡದೆ ಪದೇ ಪದೇ ಮರುಪರಿಶೀಲನೆ ಮಾಡುತ್ತೇವೆ ಎಂದು ದಿಕ್ಕು ತಪ್ಪಿಸುತ್ತಿದೆ. ನಮಗೆ ಕೂಡಲೇ ಹಕ್ಕು ಪತ್ರ ನೀಡಬೇಕು ಎಂದು ಆಗ್ರಹಿಸಿ ಇರುಳಿಗ ಸಮುದಾಯದ ಜನರು ಕಳೆದ ಎರಡು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
Advertisement
ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ವಿಫಲವಾದ ಬಳಿಕ ಮಾತನಾಡಿದ ಉಪವಿಭಾಗಧಿಕಾರಿ ದಾಕ್ಷಾಯಿಣಿ ಅವರು, ಹಕ್ಕುಪತ್ರಕ್ಕೆ ಆಗ್ರಹಿಸಿ ಇರುಳಿಗ ಜನಾಂಗದವರು ಧರಣಿ ಕುಳಿತುಕೊಂಡಿದ್ದಾರೆ. ಸರ್ವೇ ಮಾಡಿಸಿ ಹಕ್ಕು ಪತ್ರ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಈಗಾಗಲೇ ಸರ್ವೇ ಕಾರ್ಯ ಮಾಡಲಾಗಿದೆ ಅಂತ ತಾಲೂಕು ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಹೇಳುತ್ತಿದ್ದಾರೆ. ಈ ಕುರಿತು ದೂರವಾಣಿ ಕರೆಯ ಮೂಲಕ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ವಲಯ ಅರಣ್ಯಾಧಿಕಾರಿ (ಆರ್‌ಎಫ್‌ಓ) ಮನ್ಸೂರ್ ಅವರನ್ನು ವಿಚಾರಿಸಿ ಮಾಹಿತಿ ಪಡೆದಿದ್ದೇನೆ. ಹಂತ ಹಂತವಾಗಿ ಹಕ್ಕು ಪತ್ರ ವಿತರಣೆಗೆ ಈಗಾಗಲೇ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
Advertisement
ಅರಣ್ಯದಲ್ಲಿ ಜನತೆ ಇರುವುದು ಕಷ್ಟವಾಗುತ್ತದೆ. ಪ್ರತಿಭಟನೆ ಕೈಬಿಡಬೇಕು ಎಂದು ಉಪವಿಭಾಗಧಿಕಾರಿ ಮನವಿ ಮಾಡಿಕೊಂಡರು. ಸರ್ವೇ ನೀಲ ನಕ್ಷೆ ಬಂದ ಕೂಡಲೇ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ಪ್ರತಿಭಟನಾ ನಿರತರಿಗೆ ತಿಳಿಸಿದರು. ಆದರೆ ಅಧಿಕಾರಿಗಳ ಮನವಿಗೆ ಸೊಪ್ಪು ಹಾಕದ ಇರುಳಿಗರು ಅರಣ್ಯದಲ್ಲೇ ಮಕ್ಕಳು, ಮನೆಯವರ ಜೊತೆ ಟೆಂಟ್‍ಗಳನ್ನು ಹಾಕಿಕೊಂಡು ಪ್ರತಿಭಟನೆ ಮುಂದುವರಿಸಿದ್ದಾರೆ.