ರಾಮನಗರ: ತುಮಕೂರು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ ಹುಟ್ಟೂರು ವೀರಾಪುರ ಗ್ರಾಮವನ್ನು ದತ್ತು ಪಡೆಯುವುದಾಗಿ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ. ಶಿವಕುಮಾರ ಸ್ವಾಮೀಜಿಗಳ ಹುಟ್ಟೂರಾದ ವೀರಾಪುರವನ್ನ ದತ್ತು ಪಡೆಯುತ್ತೇವೆ. ಈ ಹಿಂದೆ ಆ ಗ್ರಾಮದಲ್ಲಿ ಸಣ್ಣ ಪುಟ್ಟ ಅಭಿವೃದ್ಧಿಯಾಗಿತ್ತು. ಇದೀಗ ಮತ್ತೆ ಅದರ ಅಭಿವೃದ್ಧಿ ಮಾಡಲು ತೀರ್ಮಾನ ಮಾಡಿರುವುದಾಗಿ ಅವರು ಹೇಳಿದ್ರು.
ಬಾಲಗಂಗಾಧರನಾಥ್ ಸ್ವಾಮೀಜಿ ಬಾಣಂದೂರು ಹಾಗೂ ವೀರಾಪುರ ಈ ಎರಡು ಗ್ರಾಮಗಳು ಮಹಾಪುರುಷರು ಜನ್ಮತಾಳಿದ ಗ್ರಾಮಗಳಾಗಿದ್ದು, ನಮ್ಮ ರಾಜ್ಯಕ್ಕೆ ಎರಡು ಕಣ್ಣುಗಳಿದ್ದಂತೆ. ಹೀಗಾಗಿ ಈ ಎರಡೂ ಗ್ರಾಮಗಳ ಸಮಗ್ರ ಅಭಿವೃದ್ಧಿ ಮಾಡಲು ಚಿಂತನೆ ಮಾಡಲಾಗಿದೆ ಅಂದ್ರು.
ಡಾ. ಶಿವಕುಮಾರ ಸ್ವಾಮೀಜಿಗಳಿಗೆ ಭಾರತ ರತ್ನ ಪ್ರಶಸ್ತಿ ನೀಡುವ ವಿಚಾರದ ಕುರಿತು ವಿಧಾನಸಭೆಯಲ್ಲಿ ಒಂದು ನಿರ್ಣಯ ಮಾಡುತ್ತವೆ. ಈ ಬಗ್ಗೆ ಮುಖ್ಯಮಂತ್ರಿಗಳು ಈಗಾಗಲೇ ಘೋಷಣೆ ಮಾಡಿದ್ದಾರೆ. ಸಂಸದರು ಕೂಡ ಮನವಿ ಮಾಡಿದ್ದಾರೆ. ಕೇಂದ್ರ ಸರ್ಕಾರ ಭಾರತ ರತ್ನ ನೀಡಬೇಕು, ಅವರ ಮೇಲೆ ಒತ್ತಡ ತರಲಾಗುವುದು ಎಂದರು.
ಈಗಲ್ ಟನ್ ರೆಸಾರ್ಟ್ ನಲ್ಲಿ ಶಾಸಕರು ಹೊಡೆದಾಡಿಕೊಂಡ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಶಾಸಕ ಆನಂದ್ ಸಿಂಗ್ ಆರೋಗ್ಯವಾಗಿದ್ದಾರೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ಈ ಘಟನೆ ನಡೆಯಬಾರದಾಗಿತ್ತು ನಡೆದು ಹೋಗಿದೆ. ಈ ಪ್ರಕರಣ ಸಂಬಂಧ ಕಾನೂನು ವ್ಯವಸ್ಥೆ ನಡೆಯುತ್ತಿದೆ. ಶಾಸಕ ಗಣೇಶ್ ಎಲ್ಲಿದ್ದಾರೆ ಅಂತಾ ನನಗೆ ಗೊತ್ತಿಲ್ಲ ಎಂದು ತಿಳಿಸಿದರು.
ಮೇಕೆದಾಟು ಯೋಜನೆಗೆ ಡಿಪಿಆರ್ ತಯಾರು ಮಾಡಲಾಗಿದೆ. 9 ಸಾವಿರಕ್ಕೂ ಅಧಿಕ ಕೋಟಿ ರೂಪಾಯಿಗಳ ಡಿಪಿಆರ್ ಆಗಿದ್ದು ಕೇಂದ್ರಕ್ಕೆ ನೀಡಿದ್ದೇವೆ ಎಂದು ಅವರು ಹೇಳಿದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv