ಪರಿಹಾರ ವಿಚಾರದಲ್ಲಿ ಯಾವ ಕಾರಣಕ್ಕೂ ತಾರತಮ್ಯ ಮಾಡಲ್ಲ- ಸಿ.ಟಿ ರವಿ

Public TV
2 Min Read
ct ravi 2

ರಾಮನಗರ: ನೆರೆ ಪರಿಹಾರ ವಿಚಾರಕ್ಕೆ ಸಂಬಂಧಿಸಿದಂತೆ ಯಾವ ಕಾರಣಕ್ಕೂ ತಾರತಮ್ಯ ಮಾಡಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಹೇಳಿದ್ದಾರೆ.

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಥಮವಾಗಿ 1 ಲಕ್ಷ ರೂ. ಹಾಗೂ 10 ಸಾವಿರ ರೂ. ತಲುಪಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‍ಡಿಆರ್ ಎಫ್) ಹಾಗೂ ರಾಜ್ಯ ವಿಪತ್ತು ಪರಿಹಾರ ನಿಧಿ (ಎಸ್‍ಟಿಆರ್ ಎಫ್‍) ನಿಂದ 4,138 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಎನ್‍ಡಿಎ ಸರ್ಕಾರದಲ್ಲಿ 5 ವರ್ಷದಲ್ಲಿ 7,200 ಕೋಟಿ ರೂ. ಸಿಕ್ಕಿದೆ. ಅದರ ಅಂಕಿ-ಅಂಶ ಬೇಕಾದರೆ ವಿಧಾನಸೌಧದಲ್ಲೂ ಮುಂದಿಡುತ್ತೇವೆ. ಯಾವುದೇ ಕಾರಣಕ್ಕೂ ಪರಿಹಾರ ವಿಚಾರದಲ್ಲಿ ತಾರತಮ್ಯ ಮಾಡಲ್ಲ ಎಂದು ಹೇಳಿದ್ದಾರೆ.

blg ramadhurga flood

ಎನ್‍ಡಿಆರ್‍ಎಫ್ ಗೈಡ್‍ಲೈನ್ಸ್ ಪ್ರಕಾರ ಎಷ್ಟು ನೀಡಬೇಕೋ ಅಷ್ಟನ್ನು ನೀಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ರಾಜಕಾರಣ ಮಾಡೋದಕ್ಕೆ ಬೇರೆ ಬೇರೆ ವೇದಿಕೆಗಳಿವೆ. ಅಲ್ಲಿ ರಾಜಕಾರಣ ಮಾಡೋಣ. ಆದರೆ ಬರದ ವಿಚಾರದಲ್ಲಿ, ಅತಿವೃಷ್ಟಿ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಸಿದ್ದರಾಮಯ್ಯ, ಹೆಚ್‍ಡಿಕೆ ಸಿಎಂ ಆಗಿದ್ದಾಗ ಒಂದು ಮನೆಗೆ 96 ಸಾವಿರ ರೂ. ಕೊಡುತ್ತಿದ್ದರು. ನಾವು 5 ಲಕ್ಷ ರೂ. ಕೊಡುತ್ತಿದ್ದೇವೆ. ಅದು ನಮ್ಮ ತಪ್ಪಾ ಎಂದು ಸಚಿವರು ಪ್ರಶ್ನಿಸಿದರು.

ಜಾಸ್ತಿ ಹಾನಿಯಾದವರಿಗೆ 1 ಲಕ್ಷ, ಕಡಿಮೆ ಹಾನಿಯಾದವರಿಗೆ 25 ಸಾವಿರದಿಂದ 50 ಸಾವಿರ ಬಿಡುಗಡೆ ಮಾಡಿದ್ದೇವೆ. ಯಾರಿಗೆ ತಲುಪಿಲ್ಲ ಅಂದರೆ ಅದು ದಾಖಲೆಗಳ ತಪ್ಪಿನಿಂದ ಆಗಿರಬಹುದು. 100 ಕೋಟಿ ಬೆಲೆ ಬಾಳಿದ್ರು 95,100 ರೂ. ಅಷ್ಟೇ ಕೇಂದ್ರ ಕೊಡುವುದು. ನಾವು ಉಳಿದ ಹಣ ಸೇರಿಸಿ 5 ಲಕ್ಷ ರೂ. ಕೊಡಲು ಮುಂದಾಗಿದ್ದೇವೆ ಎಂದರು.

SIDDU HDK

ಇದೇ ವೇಳೆ ಪರಿಹಾರದ ವಿಚಾರವಾಗಿ ರೈತರ ಆತ್ಮಹತ್ಯೆ ಕುರಿತು ಪ್ರತಿಕ್ರಿಯಿಸಿದ ಅವರು, ತಾತ್ಕಾಲಿಕ ಪರಿಹಾರವನ್ನು ಕೊಟ್ಟಿದ್ದೇವೆ. ಚನ್ನಪ್ಪಗೌಡ ಹಾಗೂ ಚಂದ್ರಪ್ಪಗೌಡ ತೀರಿಕೊಂಡಿದ್ದಾರೆ. ನಾನು ಸಾವಿನ ವಿಚಾರದಲ್ಲಿ ವಿವಾದ ಮಾಡಲು ಬಯಸುವುದಿಲ್ಲ, ಸ್ಪಂದಿಸುವಂತಹ ಕೆಲಸ ನಮ್ಮದು. ಒಬ್ಬರದ್ದು ಅರ್ಧ ಎಕರೆ ಲ್ಯಾಂಡ್ ಸ್ಲೈಡ್‍ನಲ್ಲಿ ಹೋಗಿದೆ. ಅದಕ್ಕೆ ಕೇಂದ್ರದಿಂದ 1 ಹೆಕ್ಟೇರ್‍ಗೆ 38 ಸಾವಿರ ಪರಿಹಾರ ಬರುತ್ತದೆ. ಅದೇ ರೀತಿ ಕೆಲವು ಜಿಲ್ಲೆಗಳಲ್ಲಿ ಲ್ಯಾಂಡ್ ಸ್ಲೈಡಿಂಗ್ ಆಗಿದ್ದಕ್ಕೆ ಪರಿಹಾರ ಕೊಡಬೇಕೆಂದು ಸಿಎಂರಲ್ಲಿ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

ಸಿಎಂ ತಂತಿ ಮೇಲಿನ ನಡಿಗೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅವರು ಹೇಳಿದ್ದು ಬೇರೆ ಕಾರ್ಯಕ್ಕೆ ಹಣವಿಲ್ಲ, ಎಲ್ಲವನ್ನೂ ಪರಿಹಾರ ಕಾರ್ಯಕ್ಕೆ ವಿನಿಯೋಗಿಸಬೇಕಿದೆ. ನಾನು ಚಿಕ್ಕಮಗಳೂರಿಗೆ ಸ್ಪೆಷಲ್ ಪ್ಯಾಕೇಜ್ 100 ಕೋಟಿ ಕೊಡುವಂತೆ ಮನವಿ ಮಾಡಿದ್ದೇನೆ. ಅವರು 10 ಕೋಟಿ ರೂ. ಕೊಡುತ್ತೇನೆ ಅಂದಿದ್ದರು. ಅದು ಸಾಲಲ್ಲ ಅಂದಿದ್ದಕ್ಕೆ ಮೊದಲು ಪರಿಹಾರದ ಬಗ್ಗೆ ಗಮನ ಕೊಡೋಣ ಅಂದರು. ಅನ್ಯ ಕಾರ್ಯಕ್ಕೆ ವಿನಿಯೋಗಿಸಲು ದುಡ್ಡಿಲ್ಲ ಅಂದಿದ್ದಾರೆ ಅಷ್ಟೇ ಎಂದು ಸಚಿವರು ಸ್ಪಷ್ಟಪಡಿಸಿದರು.

yeddy aa

ರಾಜ್ಯ ಬಿಜೆಪಿ ಸರ್ಕಾರದಲ್ಲಿ ಸಿಎಂ ಬದಲಾವಣೆ ಸಂಬಂಧ ಮಾತನಾಡಿದ ಅವರು, ಯಡಿಯೂರಪ್ಪನವರಿಗೆ ದೇಶದ ಇತಿಹಾಸದಲ್ಲಿ 75 ವರ್ಷ ಕ್ರಾಸ್ ಆದರೂ ಅಧಿಕಾರ ಕೊಟ್ಟಿದ್ದಾರೆ. ಚುನಾವಣೆಯ ಪೂರ್ವದಲ್ಲಿಯೇ ಅವರೇ ನಮ್ಮ ಸಿಎಂ ಎಂದು ಘೋಷಣೆ ಮಾಡಿದ್ದೆವು. ನಾವು ಬಹುಮತದಿಂದ ಆಯ್ಕೆ ಮಾಡಿರಲಿಲ್ಲ, ಸರ್ವಾನುಮತದಿಂದ ಆಯ್ಕೆ ಮಾಡಿದ್ದೆವು. ಆದರೆ ಕಾಂಗ್ರೆಸ್ಸಿನಲ್ಲಿ ಸರ್ವಾನುಮತವಿಲ್ಲ ಅಂದರು.

ವಿಪಕ್ಷ ಸ್ಥಾನದ ಆಯ್ಕೆಯಲ್ಲಿ ಕಾಂಗ್ರೆಸ್ ಒಡೆದ ಮನೆಯಾಗಿದ್ದು, ಒಡೆದ ಮನಸ್ಸುಗಳಾಗಿವೆ. ಸಿದ್ದರಾಮಯ್ಯ ಸರ್ವಾನುಮತದ ನಾಯಕರಾಗುವ ಸ್ಥಿತಿಯಲ್ಲಿಲ್ಲ. ಒಂದು ವೇಳೆ ಅವರೇ ವಿಪಕ್ಷ ನಾಯಕರಾದ್ರೆ ಒಂದು ಗುಂಪಿನ ನಾಯಕರಾಗುತ್ತಾರೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *