ರಾಮನಗರ: ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಅವರನ್ನ ರಾಮನಗರ ಜಿಲ್ಲೆಯ ಜನ ಲೋಕಸಭಾ ಸದಸ್ಯ ಅಂತ ಕರೆಯುವುದಿಲ್ಲ. ಬದಲಾಗಿ ಗೂಂಡಾ ಸಂಸದ, ಗೂಂಡಾ ಮಂತ್ರಿಯ ಸಹೋದರನೆಂದು ಕರೆಯುತ್ತಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ರುದ್ರೇಶ್ ತಿರುಗೇಟು ನೀಡಿದ್ದಾರೆ.
ರಾಮನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯವರು ಗೂಂಡಾಗಳನ್ನಿಟ್ಟು ಶಾಸಕರನ್ನು ಕೂರಿಸಿದ್ದಾರೆ ಎಂದು ಇತ್ತೀಚೆಗೆ ದೆಹಲಿಯಲ್ಲಿ ಸಂಸದರು ಆರೋಪಿಸಿದ್ದಾರೆ. ಆದರೆ ಗೂಂಡಾಗಿರಿ ಬಿಜೆಪಿ ಸಂಸ್ಕøತಿಯಲ್ಲಿ ಇಲ್ಲ. ಕಾಂಗ್ರೆಸ್ ಹಾಗೂ ಮೈತ್ರಿ ಸರ್ಕಾರದಲ್ಲಿ ಗೂಂಡಾಗಿರಿ ನಡೆಯುತ್ತಿದೆ ಎಂದು ದೂರಿದರು.
ಇತ್ತೀಚೆಗೆ ನಡೆದ ರಾಮನಗರ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಹೈಜಾಕ್ ಮಾಡಿದ್ದು ಗೂಂಡಾಗಿರಿಯಲ್ಲವೇ? ನಮ್ಮ ಅಭ್ಯರ್ಥಿಯನ್ನು ಹಣ ನೀಡಿ ಖರೀದಿಸಿದ್ದಾರೆಯೇ? ಬಳ್ಳಾರಿಯಲ್ಲಿದ್ದ ಸಚಿವ ಡಿ.ಕೆ.ಶಿವಕುಮಾರ್ ಅವರು ರಾತ್ರೋರಾತ್ರಿ ಬೆಂಗಳೂರಿಗೆ ಸಿಎಂ ಕುಮಾರಸ್ವಾಮಿ ಅವರೊಂದಿಗೆ ಸೇರಿ ಬಿಜೆಪಿ ಅಭ್ಯರ್ಥಿಗೆ ಹಣ ನೀಡಿದ್ದಾರೆ ಎಂದು ಆರೋಪಿಸಿದರು.
ರಾಮನಗರ ಉಪಚುನಾವಣೆಯಲ್ಲಿ ಆಪರೇಷನ್ ಮಾಡಿದ್ದು ಕಾಂಗ್ರೆಸ್ ಹಾಗೂ ಜೆಡಿಎಸ್. ನೈತಿಕತೆ ಇರುವ ನೀವು ಹೈಜಾಕ್ ಮಾಡಿದ ಅಭ್ಯರ್ಥಿಗೆ ಎಷ್ಟು ಹಣ ಕೊಟ್ಟಿದ್ದಿರೀ? ರೌಡಿಸಂ ಮಾಡಿ ಹೇಗೆ ಹೆದರಿಸಿದ್ದೀರಿ ಎನ್ನುವುದನ್ನು ತಿಳಿಸಿ ಎಂದು ಗುಡುಗಿದರು.
ಸಂಸದ ಡಿ.ಕೆ.ಸುರೇಶ್ ಕೇಂದ್ರ ಸರ್ಕಾರದಿಂದ ಬಂದ ಯೋಜನೆ, ಅನುದಾನಗಳಲ್ಲಿ ಅವ್ಯವಹಾರ ಮಾಡಿದ್ದಾರೆ. ಟ್ರಸ್ಟ್ ಮೂಲಕ ಮಾಡಿರುವ ಅವ್ಯವಹಾರ ಎಲ್ಲವನ್ನೂ ಸಹ ದಾಖಲೆಗಳ ಸಹಿತವಾಗಿ ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುತ್ತೇನೆ ಎಂದು ಎಂ.ರುದ್ರೇಶ್ ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv