ರಾಮನಗರ: ಗುಜರಾತಿನ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬಿಡದಿಯ ವಿವಾದಿತ ದೇವಮಾನವ ನಿತ್ಯಾನಂದನ ಶಿಷ್ಯರು ಇದೀಗ ಗಂಟು ಮೂಟೆ ಸಮೇತ ಅಹಮದಾಬಾದ್ ಆಶ್ರಮದಿಂದ ಜಾಗ ಖಾಲಿ ಮಾಡಿದ್ದಾರೆ.
ಗುಜರಾತ್ ಆಶ್ರಮದಲ್ಲಿದ್ದ ಎಲ್ಲಾ ಭಕ್ತರು, ಮಕ್ಕಳು ಇಂದು ಬೆಳಗ್ಗೆ ಆಶ್ರಮ ತೊರೆದಿದ್ದಾರೆ. ತಮ್ಮ ಸಾಮಾಗ್ರಿಗಳ ಸಮೇತ ಬಸ್ ಹತ್ತಿದ್ದು ರಾಮನಗರ ಜಿಲ್ಲೆಯ ಬಿಡದಿಯಲ್ಲಿನ ನಿತ್ಯಾನಂದ ಧ್ಯಾನಪೀಠದತ್ತ ಮುಖ ಮಾಡಿದ್ದಾರೆ.
Advertisement
ಎರಡು ತಿಂಗಳ ಹಿಂದೆಯೇ ಬಿಡದಿ ಆಶ್ರಮದಲ್ಲಿದ್ದ ನಿತ್ಯಾನಂದನ ಶಿಷ್ಯರು ಹಾಗೂ ಮಕ್ಕಳನ್ನು ಬಿಡದಿಯಿಂದ ಆಂಧ್ರ, ತಮಿಳುನಾಡು, ಗುಜರಾತಿಗೆ ಶಿಫ್ಟ್ ಮಾಡಲಾಗಿತ್ತು. ಅಲ್ಲದೇ ನಿತ್ಯಾನಂದ ತನ್ನ ಬಿಡದಿ ಆಶ್ರಮವನ್ನ ಖಾಲಿ ಮಾಡುತ್ತಾನೆ ಎನ್ನಲಾಗಿತ್ತು. ಆದರೆ ಇದೀಗ ಮತ್ತೆ ಬಿಡದಿ ಆಶ್ರಮಕ್ಕೆ ನಿತ್ಯಾನಂದನ ಶಿಷ್ಯರು ಹಾಗೂ ಮಕ್ಕಳು ಕಾಲಿಡುತ್ತಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಪಾಸ್‍ಪೋರ್ಟ್ ನವೀಕರಿಸದಿದ್ದರೂ ನಿತ್ಯಾನಂದ ಈಕ್ವೇಡಾರ್‌ಗೆ ಪರಾರಿ?
Advertisement
Advertisement
ಬಿಡದಿಯ ನಿತ್ಯಾನಂದ ಧ್ಯಾನಪೀಠ ಶಿಷ್ಯರಿಗೆ ಹಲವಾರು ವರ್ಷಗಳಿಂದ ಸೇಫ್ ಪ್ಲೇಸ್ ಆಗಿದೆ. ಯಾವುದೇ ಅಧಿಕಾರಿಗಳು ಬಂದರು ಸಹ ಸರ್ಚ್ ವಾರೆಂಟ್ ಇಲ್ಲದೇ ಒಳಗೆ ಬಿಟ್ಟುಕೊಳ್ಳುವುದಿಲ್ಲ. ಹೀಗಾಗಿ ಬಿಡದಿಯತ್ತ ನಿತ್ಯಾನಂದನ ಶಿಷ್ಯರು ಮುಖ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
Advertisement
ಈ ಹಿಂದೆ ಅಹಮದಾಬಾದ್‍ನ ಆಶ್ರಮದ ಜಾಗವನ್ನ ಶಾಲೆ ನಡೆಸುವುದಾಗಿ ಪಡೆದು ಆ ಸ್ಥಳದಲ್ಲಿ ಆಶ್ರಮ ನಡೆಸಲಾಗುತ್ತಿತ್ತು. ಇದರ ಜೊತೆಗೆ ಇತ್ತೀಚೆಗೆ ನಿತ್ಯಾನಂದನ ಮಾಜಿ ಶಿಷ್ಯ ಚೆನ್ನೈ ಮೂಲದ ಜನಾರ್ದನ ಶರ್ಮ ತನ್ನ ನಾಲ್ವರು ಮಕ್ಕಳ ವಿಚಾರವಾಗಿ ಅಹಮದಾಬಾದ್ ಪೊಲೀಸರಿಗೆ ದೂರು ನೀಡಿದ್ದರು. ಮಕ್ಕಳನ್ನ ಆಶ್ರಮದಲ್ಲಿ ಬಂಧಿಸಿಟ್ಟುಕೊಂಡು ಹಿಂಸೆ ನೀಡುತ್ತಿದ್ದಾರೆ. ತನ್ನ ಮಕ್ಕಳನ್ನು ನೋಡಲು ಕೂಡ ಬಿಡುತ್ತಿಲ್ಲ ಎಂದು ದೂರು ನೀಡಿದ್ದರು. ಈ ವಿಚಾರವಾಗಿ ಗುಜರಾತ್ ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳು ಆಶ್ರಮದ ಮೇಲೆ ದಾಳಿ ಮಾಡಿದ್ದರು. ಅಲ್ಲದೇ ನಿತ್ಯಾನಂದನ ನಾಲ್ವರು ಶಿಷ್ಯರನ್ನು ಕೂಡ ಬಂಧಿಸಿದ್ದಾರೆ.
ಜನಾರ್ದನ ಶರ್ಮ ಅಲ್ಲದೇ ನಾಲ್ವರು ಗುಜರಾತ್ ಹೈಕೋರ್ಟಿನಲ್ಲಿ ಹೇಬಿಯಸ್ ಕಾರ್ಪಸ್ ಕೂಡಾ ಸಲ್ಲಿಸಿದ್ದಾರೆ. ಈ ಎಲ್ಲ ಕಾರಣಗಳಿಂದ ಗುಜರಾತ್ ಹೈಕೋರ್ಟ್ ಆಶ್ರಮ ಜಾಗವನ್ನು ಖಾಲಿ ಮಾಡುವಂತೆ ಸೂಚಿಸಿತ್ತು. ಹಾಗಾಗಿ ಇಂದು ಬೆಳಿಗ್ಗೆ ಆಶ್ರಮದಲ್ಲಿದ್ದ ನಿತ್ಯಾನಂದನ ಶಿಷ್ಯರು ಗುರುಕುಲದಲ್ಲಿದ್ದ ಮಕ್ಕಳು ಎಲ್ಲರೂ ಬ್ಯಾಗ್ ಮತ್ತು ಸಾಮಾನು ಸರಂಜಾಮುಗಳೊಂದಿಗೆ ಆಶ್ರಮವನ್ನ ತೊರೆದು ಹೊರಟಿದ್ದಾರೆ.