ಬೆಂಗಳೂರು: ಬಿಜೆಪಿಯ ಚಾರ್ಜ್ ಶೀಟ್ ಕಸದ ಬುಟ್ಟಿಗೆ ಹಾಕುವುದಕ್ಕೆ ಲಾಯಕ್ಕಾಗಿರೋ ಪೇಪರ್ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ಕಾಲದಲ್ಲಿ ಬೆಂಗಳೂರಿನ ಕಸದ ಸಮಸ್ಯೆಯ ಸುದ್ದಿ ನ್ಯೂಯಾರ್ಕ್ ಟೈಮ್ಸ್ ನಲ್ಲೂ ಪ್ರಕಟವಾಗಿದೆ ಎಂದು ಬಿಜೆಪಿ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಚಾರ್ಜ್ ಶೀಟ್ ನಲ್ಲಿನ ಆರೋಪಗಳ ಕುರಿತು ಬಿಜೆಪಿಯವರಿಗೆ ಕ್ಲಾರಿಟಿ ಇಲ್ಲ ಎಂದು ಕಿಡಿಕಾರಿದ್ದಾರೆ.
ಬೆಂಗಳೂರಿನ ಮಾನ ಮರ್ಯಾದೆ ಕಳೆದಿದ್ದು ಬಿಜೆಪಿಯವರು. 2012ರ ಅಕ್ಟೋಬರ್ ನಲ್ಲಿ ನ್ಯೂಯಾರ್ಕ್ ಟೈಮ್ಸ್ ಗಾರ್ಡನ್ ಸಿಟಿಯನ್ನು ಗಾರ್ಬೆಜ್ ಸಿಟಿ ಅನ್ನೋದಾಗಿ ವರದಿ ಮಾಡಿತ್ತು. ಆಗ ಇದ್ದದ್ದು ಬಿಜೆಪಿ ಸರ್ಕಾರ. ಅಧಿಕಾರಕ್ಕೆ ಬಂದು ಮೂರು ವರ್ಷವಾಗಿದ್ದರೂ ಬಿಜೆಪಿಯವರು ಬೆಂಗಳೂರಿನ ಕಸದ ಸಮಸ್ಯೆಗೆ ಪರಿಹಾರ ಹುಡುಕುವಲ್ಲಿ ಸೋತಿದ್ದರು ಎಂದು ಟೀಕಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರ ವಿರುದ್ಧದ ಚಾರ್ಜ್ ಶೀಟ್ ನಲ್ಲಿ ಮತ್ತೆ ಎಡವಟ್ಟು ಮಾಡಿಕೊಂಡ ಬಿಜೆಪಿ
ಕಾಂಗ್ರೆಸ್ ಸರ್ಕಾರ ಬಂದ ನಂತರ ಬೆಂಗಳೂರಿನಲ್ಲಿ ಏಳು ತ್ಯಾಜ್ಯ ಸಂಸ್ಕರಣಾ ಘಟಕ ಮಾಡಲಾಗಿದೆ. ತ್ಯಾಜ್ಯ ವಿಂಗಡಣೆ, ಸಂಸ್ಕರಣೆ ಸರಿಯಾಗಿಯೇ ನಡೆದಿದೆ. 2012ರ ಬಿಜೆಪಿಯವರ ಅವಧಿಯಲ್ಲಿ ನಡೆದಿದ್ದನ್ನು ನಮ್ಮ ಸರ್ಕಾರ ಬಂದ ಮೇಲೆ ಅಂತ ತಿರುಗಿಸಿ ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.