ಬೆಂಗಳೂರು: ಕೇಂದ್ರ ಸರ್ಕಾರ ರಾಜ್ಯಗಳು ಜಿಎಸ್‍ಟಿ ಪಾಲು ಕೇಳಿದರೆ ಕೂಡುತ್ತೇವೆ ಎನ್ನುತ್ತಾರೆ. ಕೇಂದ್ರ ಸರ್ಕಾರ 8 ವರ್ಷಗಳಲ್ಲಿ 100 ಲಕ್ಷ ಕೋಟಿ ರೂ. ಸಾಲ ಮಾಡಿ ಎಲ್ಲಾ ಜನರನ್ನು ಸಾಲಗಾರರನ್ನಾಗಿ ಮಾಡಿದೆ. ಈಗ ಅಗ್ನಿಪಥ್ ಯೋಜನೆ ಮೂಲಕ ಯುವಜನರ ದಾರಿ ತಪ್ಪಿಸುತ್ತಿದೆ ಎಂದು ಕಾಂಗ್ರೆಸ್ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಮುಖಂಡರ ಮಕ್ಕಳು ವಿದ್ಯಾವಂತರಾಗಿ ಉತ್ತಮ ಕೆಲಸ ಮಾಡಬೇಕು, ಬಡವರ ಮಕ್ಕಳು ಬಿಜೆಪಿ ಕಚೇರಿ ಗಾರ್ಡ್ ಆಗಬೇಕಾ? ಈ ಯೋಜನೆ ವಿರುದ್ಧ ಪ್ರತಿಭಟನೆ ಹೆಚ್ಚಿದ ಪರಿಣಾಮ, ಬಿಜೆಪಿ ಸರ್ಕಾರ ಹಾಗೂ ಬಿಜೆಪಿ ನಾಯಕರು, ಅಗ್ನಿಪಥ್ ಯೋಧರಿಗೆ ಕೆಲವು ಹೆಚ್ಚುವರಿ ಆಫರ್ ಕೊಟ್ಟಿದ್ದಾರೆ. ರಕ್ಷಣಾ ಇಲಾಖೆ ಹುದ್ದೆಗಳಲ್ಲಿ 10% ಮೀಸಲಾತಿ, ಅಸ್ಸಾಂ ರೈಫಲ್ಸ್ ಪಡೆಗಳಲ್ಲಿ 10% ಮೀಸಲಾತಿ. ಈ ಎರಡು ಪಡೆಗಳ ನೇಮಕಾತಿಯ ವಯೋಮಿತಿಯಲ್ಲಿ 3 ವರ್ಷ ಸಡಿಲಿಕೆ ಮಾಡಲಾಗಿದೆ. ನಾಗರಿಕ ವಿಮಾನಯಾನ ಸಚಿವಾಲಯದಲ್ಲಿ ಉದ್ಯೋಗ ಅವಕಾಶ ನೀಡಲಾಗುವುದು ಎಂದು ಹೇಳಿದೆ. ಸರ್ಕಾರ ಕಳೆದ 3 ವರ್ಷಗಳಿಂದ ಸರಿಯಾಗಿ ಸೇನಾ ನೇಮಕಾತಿಯನ್ನೇ ನಡೆಸಿಲ್ಲ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: BJP, RSS ನಾಯಕರು ತಮ್ಮ ಮಕ್ಕಳನ್ನು ಯಾಕೆ ಅಗ್ನಿಪಥ್ ಯೋಜನೆಯಡಿ ಸೈನ್ಯಕ್ಕೆ ಸೇರಿಸುತ್ತಿಲ್ಲ: ರೈತ ಮುಖಂಡರ ಕಿಡಿ
95 ಸಾವಿರ ಅಗ್ನಿವೀರರಿಗೆ ರಕ್ಷಣಾ ಇಲಾಖೆಯಲ್ಲಿ 10% ಮೀಸಲಾತಿಯ ಪ್ರಕಾರ ಎಷ್ಟು ಉದ್ಯೋಗ ನೀಡಲು ಸಾಧ್ಯ? ಸಶಸ್ತ್ರ ಪಡೆಗಳಲ್ಲಿ 10% ಮೀಸಲಾತಿಯಂತೆ ಎಷ್ಟು ಜನರ ನೇಮಕ ಮಾಡಲು ಸಾಧ್ಯ? ಈಗ ನಾಗರೀಕ ವಿಮಾನಯಾನ ಸಚಿವಾಲಯದಲ್ಲಿ ಉದ್ಯೋಗ ನೀಡುತ್ತೇವೆ ಎನ್ನುತ್ತಿದ್ದಾರೆ. ಇದುವರೆಗೂ ಎಷ್ಟು, ನಿವೃತ್ತ ಯೋಧರಿಗೆ ಸಚಿವಾಲಯದಲ್ಲಿ ಕೆಲಸ ಕೊಟ್ಟಿದ್ದಾರೆ? ನಾಲ್ಕು ವರ್ಷಗಳಲ್ಲಿ ಅಗ್ನಿವೀರರು ದೇಶ ಕಾಯಬೇಕೋ ಅಥವಾ ಮರ್ಚೆಂಟ್ ನೇವಿ ಸೇರಲು ತರಬೇತಿ ಪಡೆಯಬೇಕೂ. ಈ ಯೋಜನೆ ಆರಂಭಿಸುವ ಮುನ್ನ ಸರ್ಕಾರ ಯಾರ ಜೊತೆಗೂ ಚರ್ಚೆ ಮಾಡಿಲ್ಲ. ಈ ಯೋಜನೆ ಜಾರಿಗೆ ಮುನ್ನ ಪ್ರಾಯೋಗಿಕ ಅಧ್ಯಯನ ನಡೆಸಲಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.
ಯಾರೊಂದಿಗೆ ಚರ್ಚಿಸಿದೆ? ಯೋಜನೆಯ ಅನುಕೂಲ, ಅನಾನುಕೂಲ ತಿಳಿಯಲು ಸಮಿತಿ ರಚಿಸಿದ್ದಾರೆಯೇ? ಅಥವಾ ಸಂಸತ್ ಸದನದಲ್ಲಿ ಚರ್ಚೆ ಮಾಡಿದ್ರಾ ಯಾವುದೂ ಇಲ್ಲ. ಇದು ದೇಶ ಎಂಬುದನ್ನು ಮರೆತು, ಏನು ಮಾಡಿದರೂ ನಡೆಯುತ್ತದೆ, ನಾವು ಹೇಳಿದ ಹಾಗೆ ನಡೆಯಬೇಕು ಎನ್ನುವ ಸರ್ವಾಧಿಕಾರಿ ಮನಸ್ಥಿತಿಯಿಂದ ಈ ಯೋಜನೆ ತಂದಿದ್ದಾರೆ. ಈ ಮೊದಲು ಘೋಷಣೆ ಮಾಡಿದ್ದ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡಲಾಗದೆ ಯುವ ಸಮುದಾಯವನ್ನು ವಂಚಿಸಿದವರು. ಈಗ ಚುನಾವಣೆ ಹತ್ತಿರ ಬರುತ್ತಿದ್ದಂತೆ ಅವರ ಮೂಗಿಗೆ ತುಪ್ಪ ಸವರಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಭೂಕಂಪದಿಂದ ತೊಂದರೆಗೆ ಸಿಲುಕಿರುವ ಆಫ್ಘನ್ನರಿಗೆ ನೆರವು – ಭಾರತಕ್ಕೆ ಧನ್ಯವಾದ ತಿಳಿಸಿದ ತಾಲಿಬಾನ್
ಅಗ್ನಿಪಥ್ ಯೋಜನೆ ವಿರೋಧಿಸಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಜೂನ್ 27 ರಂದು ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.