– ಬೆಳ್ಳಂಬೆಳಗ್ಗೆ ಮನೆಬಿಟ್ಟ ಶಾಸಕ
ಬೆಂಗಳೂರು: ಶಾಸಕ ರಾಮಲಿಂಗಾ ರೆಡ್ಡಿ ಮನವೊಲಿಕೆಗೆ ಭಾನುವಾರ ರಾತ್ರಿ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಅವರ ಸಹೋದರ ಡಿ.ಕೆ.ಸುರೇಶ್ ಶತ ಪ್ರಯತ್ನ ಪಟ್ಟರೂ ಪ್ರಯೋಜನವಾಗಿಲ್ಲ. ಇಂದು ಬೆಳ್ಳಂಬೆಳಗ್ಗೆ ರಾಮಲಿಂಗಾ ರೆಡ್ಡಿ ಮನೆ ಬಿಟ್ಟಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ನಾನು ಎಳೆಯ ವಯಸ್ಸಿನವನಲ್ಲ. ಹೀಗಾಗಿ ನನ್ನ ಮನೆಗೆ ಬರಬೇಡಿ. ಒಂದು ತಿಂಗಳು ಯೋಚಿಸಿ ಈ ತೀರ್ಮಾನ ಕೈಗೊಂಡಿದ್ದೇನೆ. ನಾನಲ್ಲ, ನನ್ನ ಮಗಳು ಕೂಡ ನಾಳೆ ರಾಜೀನಾಮೆ ಕೊಡುತ್ತಾಳೆ. ನನ್ನ ಮನೆಗೆ ಯಾರು ಬರಲೇಬೇಡಿ. ನೀವು ಮಾಡಿದ ಅವಮಾನ ನನಗೆ ಸಾಕಾಗಿದೆ. ಈ ಹಿಂದೆ ನನ್ನ ನೆನಪು ನಿಮಗೆ ಆಗಿರಲಿಲ್ವಾ ಎಂದು ಪ್ರಶ್ನಿಸುವ ಮೂಲಕ ಕಾಂಗ್ರೆಸ್ ನಾಯಕರ ವಿರುದ್ಧ ರಾಮಲಿಂಗಾರೆಡ್ಡಿ ಗರಂ ಆಗಿದ್ದಾರೆ ಎನ್ನಲಾಗಿದೆ.
ಮತ್ತೆ ಕುರುಕ್ಷೇತ್ರ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ರಾಮಲಿಂಗಾರೆಡ್ಡಿಯನ್ನ ಭೇಟಿಯಾಗಿ ಮಾತನಾಡಿದ ಡಿಕೆಶಿಗೆ ಈಗ ಬರುವುದಲ್ಲ. ಬರುವಾಗ ಬರಬೇಕಿತ್ತು. ತಾರತಮ್ಯ ಸರಿಪಡಿಸಲು ಸಮಯ ಮೀರಿದೆ ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂದೆ ಪಡೆಯುವ ಪ್ರಶ್ನೆಯೇ ಇಲ್ಲ. ನಾನು ರಾಜೀನಾಮೆ ಕೊಟ್ಟಿರುವುದು ಶಾಸಕ ಸ್ಥಾನಕ್ಕೆ, ಪಕ್ಷಕ್ಕೆ ಅಲ್ಲ. ಹೀಗಾಗಿ ಮುಂದೆ ಏನಾಗುತ್ತದೆ ಎಂಬುದನ್ನು ನೊಡೋಣ. ನಾವು ಈಗಾಗಲೇ ಬಹಳ ದೂರ ಸಾಗಿಬಿಟ್ಟಿದ್ದೇವೆ. ನನ್ನ ಹಾಗೂ ನನ್ನ ಮಗಳ ನಿರ್ಧಾರ ಅಚಲ ಎಂದು ರಾಮಲಿಂಗಾ ರೆಡ್ಡಿ ಖಡಕ್ ಸಂದೇಶ ನೀಡಿದ್ದಾರೆ.
ಸಿಎಂ ಅವರು ಕಳೆದ ದಿನವೂ ಮಾತನಾಡಿದ್ದರು. ಅವರಿಗೂ ನಾನು ಏನು ಹೇಳಬೇಕೋ ಹೇಳಿದ್ದೇನೆ. ಸಮ್ಮಿಶ್ರ ಸರ್ಕಾರ ಉಳಿಸುವ ಪ್ರಯತ್ನ ಮಾಡುತ್ತಿದ್ದಾರೆ, ಮಾಡಲೇಬೇಕು. ನಾನು ಆ ಜಾಗದಲ್ಲಿದಿದ್ದರೆ ಅದೇ ಮಾಡುತ್ತಿದ್ದೆ. ಆದರೆ ಈಗ ಕಾಲ ಮೀರಿ ಹೋಗಿದೆ ಎಂದು ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಇಂದು ಬೆಳ್ಳಂಬೆಳಗ್ಗೆ ರಾಮಲಿಂಗಾರೆಡ್ಡಿ ಮನೆಬಿಟ್ಟಿದ್ದು, ತಮ್ಮ ಲಕ್ಕಸಂಧ್ರದ ನಿವಾಸದಲ್ಲಿ ಇಲ್ಲ. ಕಳೆದ ರಾತ್ರಿ ಕೈ ನಾಯಕ ಸಭೆಯಲ್ಲಿ ರಾಮಲಿಂಗಾ ರೆಡ್ಡಿ ಭಾಗಿಯಾಗಿದ್ದರು. ಈ ವೇಳೆ ಕಾಂಗ್ರೆಸ್ ನಾಯಕರ ಸಂಧಾನಕ್ಕೆ ರಾಮಲಿಂಗಾ ರೆಡ್ಡಿ ಒಪ್ಪಲಿಲ್ಲ. ಇಂದು ಮುಂಬೈನಲ್ಲಿರುವ ಅತೃಪ್ತರನ್ನ ಸೇರ್ತಾರೆ ಎನ್ನಲಾಗುತ್ತಿದೆ. ಹೀಗಾಗಿ ಮುಂಬೈಗೆ ಹೋಗದಂತೆ ರಾಮಲಿಂಗಾ ರೆಡ್ಡಿಯನ್ನ ದೋಸ್ತಿ ಸರ್ಕಾರದ ನಾಯಕರು ತಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.