ಸುಳ್ಳು ಹೇಳುವುದಕ್ಕೆ ನೊಬೆಲ್ ಪ್ರಶಸ್ತಿ ನೀಡಿದರೆ ಮೊದಲು ಮೋದಿಗೆ ಬರುತ್ತೆ- ರಾಮಲಿಂಗಾರೆಡ್ಡಿ

Public TV
1 Min Read
RAMALINGA REDDY 1

ಬೆಂಗಳೂರು: ಸುಳ್ಳು ಹೇಳುವರಿಗೆ ನೊಬೆಲ್ ಪ್ರಶಸ್ತಿ ಕೊಟ್ಟರೆ ಮೊದಲು ಪ್ರಧಾನಿ ನರೇಂದ್ರ ಮೋದಿಗೆ ನೀಡಬೇಕು. ಈ ಕುರಿತು ನಾವೆಲ್ಲ ಸೇರಿ ಶಿಫಾರಸು ಮಾಡೋಣ ಎಂದು ಮಾಜಿ ಸಚಿವ ರಾಮಲಿಂಗ ರೆಡ್ಡಿ ವ್ಯಂಗ್ಯವಾಡಿದ್ದಾರೆ.

ಎನ್‌ಆರ್‌ಸಿ, ಸಿಎಎ ಜಾರಿ ಖಂಡಿಸಿ ಮುಸ್ಲಿಂ ಸಂಘಟನೆಗಳು ನಗರದ ಜಯನಗರದ ಈದ್ಗಾ ಮೈದಾನದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕೇಂದ್ರ ಸರ್ಕಾರ, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ವಿರುದ್ಧ ಕಿಡಿಕಾರಿದರು. ಸ್ವಾತಂತ್ರ್ಯ ಬಂದ ನಂತರ ದೇಶದಲ್ಲಿ ಇದೇ ಮೊದಲ ಬಾರಿಗೆ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಜನರು, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಹೇಳಿದರು.

modi amit shah

ಎರಡನೇ ಬಾರಿಗೆ ದೇಶದ ಜನತೆ ದೊಡ್ಡ ಮಟ್ಟದಲ್ಲಿ ಮತ ಹಾಕಿ ಗೆಲ್ಲಿಸಿಕೊಟ್ಟರು. ಇದೇ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರಿಗೆ ತಲೆಗೇರಿದೆ. ಹೀಗಾಗಿ ಆನೆ ನಡೆದಿದ್ದೇ ದಾರಿ ಎಂಬಂತೆ ತಾವು ಮಾಡುವುದೇ ಸರಿ ಎಂದು ಇಷ್ಟ ಬಂದಂತೆ ಮಾಡುತ್ತಿದ್ದಾರೆ. ಹಿಂದೂಗಳಿಗೆ ಪೌರತ್ವ ಕೊಡುತ್ತೇವೆಂದು ಹೇಳುತ್ತಿದ್ದಾರೆ. ಅವರಿಗೂ ಪೌರತ್ವ ನೀಡಲಿ. ಆದರೆ ದೇಶದಲ್ಲಿ ನೂರಾರು ವರ್ಷಗಳಿಂದ ಇರುವ ಜನರಿಗೆ ತೊಂದರೆ ನೀಡಬೇಡಿ ಎಂದರು.

ಬಿಜೆಪಿ ಎಂದರೆ ಬುರುಡೆ ಜನರ ಪಕ್ಷ, ಬರೀ ಸುಳ್ಳು ಹೇಳುವುದು ಅವರ ನಿತ್ಯ ಕಾಯಕವಾಗಿ ಬಿಟ್ಟಿದೆ. ಬಿಜೆಪಿಯವರು ನೂರು ಸುಳ್ಳು ಹೇಳಿ ಒಂದು ನಿಜ ಮಾಡುವ ವಂಶಸ್ಥರು. ಬಿಜೆಪಿಯ ಯಾರೂ ಸಹ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ. ದೇಶದ ದುರದೃಷ್ಟ ಎಂದರೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗದವರ ಕೈಯಲ್ಲಿ ಅಧಿಕಾರ ಇದೆ. ಮಾತೆತ್ತಿದರೆ ಪಾಕಿಸ್ತಾನ ಎನ್ನುವ ಮೋದಿ ಯಾಕೆ ಪಾಕಿಸ್ತಾನಕ್ಕೆ ಹೋಗಿ ಬಿರಿಯಾನಿ ತಿಂದರು? ಮೋದಿ ಎಲ್ಲರ ಖಾತೆಗೆ 15 ಲಕ್ಷ ರೂ. ಹಾಕುತ್ತೇನೆ ಎಂದರು. ಆದರೆ ಯಾರ ಖಾತೆಗೆ ಹಣ ಬಂದಿದೆಯೇ ಎಂದು ಪ್ರಶ್ನಿಸಿ ವ್ಯಂಗ್ಯವಾಡಿದರು. ದೇಶದಲ್ಲಿ ಆರ್ಥಿಕ ಸ್ಥಿತಿ ಕುಂಠಿತವಾಗಿದೆ, ಗ್ಯಾಸ್, ಪೆಟ್ರೋಲ್ ಬೆಲೆ ಹೆಚ್ಚಾಗ್ತಿದೆ. ಇದನ್ನು ಮರೆ ಮಾಚಲು ಶಾ, ಮೋದಿ ಇಂತಹ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Share This Article
Leave a Comment

Leave a Reply

Your email address will not be published. Required fields are marked *