ರಾಜ್ಯಾದ್ಯಂತ ರಂಜಾನ್‌ ಆಚರಣೆ – ಮುಸ್ಲಿಂ ಬಾಂಧವರಿಗೆ ಶುಭಕೋರಿದ ಸಿಎಂ

Public TV
2 Min Read
Siddaramaiah

ಬೆಂಗಳೂರು: ಹಿಂದೂಗಳ ಹೊಸ ವರ್ಷ ಎಂದೇ ಕರೆಯಲ್ಪಡುವ ಯುಗಾದಿಹಬ್ಬ ಮುಗಿಯುತ್ತಿದ್ದಂತೆ ಮುಸ್ಲಿಮರ ಪವಿತ್ರ ಆಚರಿಸಲಾಗುತ್ತಿದೆ. ಯುಗಾದಿ ಹಬ್ಬದಂದೇ ದೇಶಾದ್ಯಂತ ರಂಜಾನ್ ಚಾಂದ್ (ಚಂದ್ರ ದರ್ಶನ) ಕಾಣಿಸಿಕೊಂಡಿದ್ದು, ಮರುದಿನವೇ ಮುಸ್ಲಿಂ ಬಾಂಧವರು ಪವಿತ್ರ ರಂಜಾನ್‌ ಆಚರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮುಸ್ಲಿಂ ಬಾಂಧವರಿಗೆ ಶುಭ ಕೋರಿದ್ದಾರೆ.

ಶ್ರದ್ಧಾ ಭಕ್ತಿಯ ಪ್ರತೀಕವಾದ ರಂಜಾನ್ ಹಬ್ಬವು ನಾಡಿನ‌ಲ್ಲಿ ಸುಖ, ಶಾಂತಿ, ಸೌಹಾರ್ದತೆಯು ನೆಲೆಗೊಳ್ಳಲು ಪ್ರೇರಣೆಯಾಗಲಿ ಎಂದು ಹಾರೈಸುತ್ತೇನೆ. ಸಮಸ್ತ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯಗಳು ಎಂದು ತಮ್ಮ ಸೋಶಿಯಲ್‌ ಮೀಡಿಯಾ ಎಕ್ಸ್‌ ಖಾತೆಯಲ್ಲಿ ಶುಭಕೋರಿದ್ದಾರೆ.

Ramadan

ಈದ್ಗಾ ಮೈದಾನ ಸುತ್ತಮುತ್ತ ಪೊಲೀಸ್ ಭದ್ರತೆ:
ರಂಜಾನ್ ಹಿನ್ನೆಲೆ ಬೆಂಗಳೂರಿನ ಚಾಮರಾಚಪೇಟೆಯಲ್ಲಿರೋ ಈದ್ಗಾ ಮೈದಾನದ ಸುತ್ತಮುತ್ತ ಬಿಗಿ ಪೊಲೀಸ್‌ ಭದ್ರತೆಯ ವ್ಯವಸ್ಥೆ ಮಾಡಲಾಗಿದೆ. ಸುಮಾರು 5 ಸಾವಿರಕ್ಕೂ ಅಧಿಕ ಮಂದಿ ಮುಸ್ಲಿಂ ಬಾಂಧವರು ನಮಾಜ್‌ ಮಾಡುತ್ತಿದ್ದಾರೆ. ಅಲ್ಲದೇ ಸಿಎಂ ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈದ್ಗಾ ಮೈದಾನದ ಸುತ್ತಮುತ್ತ ಒಬ್ಬ ಡಿಸಿಪಿ ಹಾಗೂ ನಾಲ್ಕು ಮಂದಿ ಎಸಿಪಿ ಎರಡು ಕೆಎಸ್‌ಆರ್‌ಪಿ ತುಕಡಿ ಸೇರಿ ಮುನ್ನೂರಕ್ಕೂ ಹೆಚ್ಚು ಪೊಲೀಸರನ್ನ ಭದ್ರತೆಗೆ ನಿಯೋಜನೆ ಮಾಡಲಾಗಿದೆ.

ರಂಜಾನ್ ಉಪವಾಸ ಆಚರಣೆ ಏಕೆ?
ರಂಜಾನ್‌ ಆಚರಣೆಗೂ ಮುನ್ನ ಈ ಮಾಸದಲ್ಲಿ ಮುಸ್ಲಿಮರು 30 ದಿನ ಉಪವಾಸ ಆಚರಿಸುವ ಜೊತೆಗೆ ದಾನ-ಧರ್ಮ, ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುತ್ತಾರೆ. ಇಸ್ಲಾಮಿನ ತರಾವೀಹ್, ನಮಾಜ್, ಉಪವಾಸ, ಝಕಾತ್ (ದಾನ), ಹಜ್ ಎಂಬ ಪಂಚಕರ್ಮಗಳನ್ನು ನೇರವೇರಿಸುವ ರಂಜಾನ್ ಪುಣ್ಯ ಸಂಪಾದಿಸುವ ಮಾಸವೂ ಎನಿಸಿಕೊಂಡಿದೆ.

Ramadan 02

ಈ ಸಮಯದಲ್ಲಿ ಆತ್ಮನಿಯಂತ್ರಣದ ಜತೆಗೆ ಸಂಯಮ ರೂಢಿಸಿಕೊಳ್ಳುವುದನ್ನು ಕಲಿಯುತ್ತಾರೆ. ಬಡವರ ಹಸಿವು ಅರಿಯುವ ಜೊತೆಗೆ ಒಂದು ಹೊತ್ತಿನ ಊಟಕ್ಕೆ ಕಷ್ಟಪಡುವವರ ಜೀವನ ಹೇಗಿರಬಹುದು? ಎಂಬ ಪಾಠವನ್ನೂ ಉಪವಾಸ ಕಲಿಸುತ್ತದೆ. ಅಲ್ಲದೆ ರಾತ್ರಿ ವೇಳೆ ನಡೆಯುವ ವಿಶೇಷ ತರಾವೀಹ್ ನಮಾಜ್‌ಗಳಲ್ಲಿ ಪವಿತ್ರ ಕುರಾನ್ ಪಠಿಸಲಾಗುತ್ತದೆ. ಕುರಾನ್‌ನನ್ನು ಸಂಪೂರ್ಣವಾಗಿ ಬಾಯಿಪಾಠ ಮಾಡಿರುವವರು ಈ ನಮಾಜ್‌ಗೆ ನೇತೃತ್ವ ವಹಿಸುತ್ತಾರೆ. ಮನುಷ್ಯನನ್ನು ಅನ್ಯಚಿತ್ತದೆಡೆಗೆ ಕೊಂಡೊಯ್ಯುವ ಮಾರ್ಗವನ್ನು ಮುಚ್ಚಿ, ಒಳಿತಿನ ಬಗ್ಗೆ ಮಾತ್ರ ಚಿಂತಿಸುವಂತೆ ಮಾಡುವುದು ರಂಜಾನ್ ಮಾಸದ ವಿಶೇಷ. ಹಾಗಾಗಿಯೇ ಈ ಮಾಸದಲ್ಲಿ ಅಲ್ಲಾನ ಪ್ರೀತಿಗಳಿಸುವ ಇಚ್ಛೆಯೊಂದಿಗೆ ಆಹಾರ, ಮದ್ಯ ಸೇವನೆಯನ್ನೂ ತ್ಯಜಿಸುತ್ತಾರೆ. ಕಾಮಾಸಕ್ತಿ, ಮನರಂಜನೆಯಿಂದ ದೂರವಿದ್ದು, ದುಡಿಮೆ ನಂಬಿ ಬದುಕುತ್ತಾರೆ.

ಈ ಮಾಹೆಯಲ್ಲಿ ದಾನ-ಧರ್ಮಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ದಾನ ಮಾಡುವುದರಿಂದ ಹೆಚ್ಚಿನ ಪುಣ್ಯ ಲಭಿಸುತ್ತದೆ. ಶ್ರೀಮಂತರು ಮತ್ತು ಉಳ್ಳವರು ತಮ್ಮ ಸಂಪತ್ತಿನ ಶೇ 2.5 ಪಾಲನ್ನು ಝಕಾತ್ (ದಾನ) ರೂಪದಲ್ಲಿ ಬಡವರಿಗೆ ನೀಡುವುದನ್ನು ಇಸ್ಲಾಂ ಕಡ್ಡಾಯಗೊಳಿಸಿದೆ.

ಸಹ್ರಿಯಿಂದ ಇಫ್ತಾರ್ ವರೆಗೆ:
ಉಪವಾಸವೂ ಸಹ್ರಿಯಿಂದ ಆರಂಭವಾಗಿ ಇಫ್ತಾರ್‌ನೊಂದಿಗೆ ಕೊನೆಗೊಳ್ಳುತ್ತದೆ. ಸೂರ್ಯೋದಯಕ್ಕೆ ಸುಮಾರು ಒಂದು ಗಂಟೆ ಮುನ್ನ ಸೇವಿಸುವ ಆಹಾರಕ್ಕೆ ಸಹ್ರಿ ಎನ್ನುವರು. ಮನೆಗಳಲ್ಲಿ ಇಫ್ತಾರ್‌ಗೆ ಖರ್ಜೂರ, ಹಣ್ಣುಗಳು ಮತ್ತು ಹಣ್ಣಿನ ರಸ ಸೇರಿದಂತೆ ವಿವಿಧ ರೀತಿಯ ಭಕ್ಷ್ಯಗಳನ್ನು ಸಿದ್ಧಪಡಿಸಲಾಗುತ್ತದೆ. ಮಸೀದಿಗಳಲ್ಲೂ ಸಾಮೂಹಿಕ ಇಫ್ತಾರ್ ಆಯೋಜನೆ ನಡೆಯುತ್ತದೆ. ಇದರೊಂದಿಗೆ ಈ ಮಾಹೆಯಲ್ಲಿ ಅಲ್ಲಲ್ಲಿ ಸೌಹಾರ್ದ ಇಫ್ತಾರ್ ಕೂಟಗಳೂ ನಡೆಯುತ್ತವೆ. ಆದರೆ ಕೆಲಸ ಮಾಡುವ ಬೆರಳೆಣಿಕೆಯ ಮಂದಿ ಮಾತ್ರ ಉಪವಾಸವನ್ನು ರದ್ದುಗೊಳಿಸಿ, ಸಂಜೆ ವೇಳೆ ಪ್ರಾರಂಭವಾಗುವ ಸಾಮೂಹಿಕ ಪ್ರಾರ್ಥನೆಗಳಲ್ಲಿ ಪಾಲ್ಗೊಳ್ಳುತ್ತಾರೆ.

Share This Article