ಬೆಂಗಳೂರು: ಕಾಂತರಾಜು ಕಮಿಟಿ ವರದಿ ಸಂಬಂಧ ಶಾಸಕರ ಭವನದಲ್ಲಿ ನಡೆದ ಹಿಂದುಳಿದ ಜಾತಿ ಹಾಗೂ ಸಮುದಾಯಗಳ ಹಿಂದುಳಿದ ವರ್ಗಗಳ ಒಕ್ಕೂಟದ ಸಭೆಯಲ್ಲಿ ಡಿಸಿಎಂ ಡಿಕೆಶಿ (DK Shivakumar) ರಾಜೀನಾಮೆ ಪಡೆಯಬೇಕು ಎಂಬ ಆಕ್ರೋಶ ವ್ಯಕ್ತವಾಗಿದೆ. ಸಭೆಯಲ್ಲಿ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ ಡಿಕೆಶಿ ಹಾಗೂ ಶಾಮನೂರು ಶಿವಶಂಕರಪ್ಪ (Shamanur Shivshankarappa) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಶಾಮನೂರು ಶಿವಶಂಕರಪ್ಪ ಲಿಂಗಾಯತ ಸಂಖ್ಯೆ ಕಡಿಮೆ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ ಎನ್ನುತ್ತಾರೆ. ಲಿಂಗಾಯತರು ಉಪ ಜಾತಿಯಲ್ಲಿ ಗುರುತಿಸಿಕೊಂಡು ಬೇರೆ ಬೇರೆ ಸೌಲಭ್ಯ ಪಡೆಯುತ್ತಿದ್ದಾರೆ. ಅದಕ್ಕೆ ನಾವಾ ಹೊಣೆ? ಅದು ಯಾಕೆ ಗೊತ್ತಾಗಿಲ್ಲ ಅವರಿಗೆ. ಈಗ ಲಿಂಗವಂತ ಅಂತ ಹಾಕ್ತಾರಾ ಇಲ್ಲವಾ ಎಂದು ಅವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಶಾಮನೂರಿಗೆ ಓದೋಕೆ ಬರುತ್ತಾ? ಸುಮ್ನೆ ಬೂಟಾಟಿಕೆ ಮಾತಾಡ್ತಾರೆ: ಹೆಚ್.ವಿಶ್ವನಾಥ್
ಈ ರಾಜ್ಯದ ಉಪ ಮುಖ್ಯಮಂತ್ರಿ ಸಹ ಕಾಂತರಾಜು ಆಯೋಗದ ವರದಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅವರು ರಾಜ್ಯದ ಉಪ ಮುಖ್ಯಮಂತ್ರಿ ಅಲ್ಲ, ಅವರ ಜನಾಂಗದ ಉಪ ಮುಖ್ಯಮಂತ್ರಿ ಎನ್ನುವ ರೀತಿ ಆಡುತ್ತಿದ್ದಾರೆ. ನೀವು ಯಾವ ಉಪ ಮುಖ್ಯಮಂತ್ರಿ ಎಂದು ಅವರನ್ನ ಕೇಳಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.
ಸಂವಿಧಾನ ಇಟ್ಟುಕೊಂಡು ಸ್ವಜನ ಪಕ್ಷಪಾತ ಮಾಡಲ್ಲ, ಜಾತಿ ಮಾಡಲ್ಲ ಎಂದು ಪ್ರಮಾಣ ಮಾಡಿರುತ್ತಾರೆ. ಯಾವ ನೈತಿಕತೆ ಇಟ್ಟುಕೊಂಡು ಡಿಸಿಎಂ ಹುದ್ದೆಯಲ್ಲಿ ಮುಂದುವರಿಯುತ್ತಾರೆ? ಅವರು ರಾಜೀನಾಮೆ ನೀಡಬೇಕು. ಅದಕ್ಕೆ ನಾವು ಒತ್ತಾಯಿಸಬೇಕು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ವಿಶ್ವವಿದ್ಯಾಲಯದಲ್ಲಿ ಕಾಲ್ತುಳಿತಕ್ಕೆ ನಾಲ್ವರು ಬಲಿ, 55 ಮಂದಿಗೆ ಗಾಯ