ರಾಯಚೂರು: ಜಿಲ್ಲೆಯ ಲಿಂಗಸುಗೂರಿನ ಯುವಕರು ರಾಮ್ ರಹೀಮ್ ಗಣೇಶನನ್ನ ಪ್ರತಿಷ್ಠಾಪಿಸಿ, ಗಣೇಶ ಉತ್ಸವದಲ್ಲಿ ಭಾವೈಕ್ಯತೆ ಮೆರೆದು ಎಲ್ಲರಿಗೂ ಮಾದರಿಯಾಗಿದ್ದಾರೆ.
ಪಟ್ಟಣ ರಾಮ್ ರಹೀಮ್ ಯುವಕ ಮಂಡಳಿಯ ಹಿಂದೂ, ಮುಸ್ಲಿಂ ಯುವಕರು ಕಳೆದ ಮೂರು ವರ್ಷಗಳಿಂದ ಭಾವೈಕತೆಯ ಗಣೇಶನನ್ನು ಗಣಪತಿ ಹಬ್ಬದ ಪ್ರಯುಕ್ತ ಪ್ರತಿಷ್ಠಾಪಿಸುತ್ತಾ ಬಂದಿದ್ದಾರೆ. ಈ ಸಮಿತಿಯಲ್ಲಿ ಹಿಂದೂಗಳಿಗಿಂತ ಮುಸ್ಲಿಂ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮೊದಲ ಎರಡು ವರ್ಷ ಗಣಪನನ್ನು ಪಟ್ಟಣದ ಓಣಿಗಳಲ್ಲಿ ಕೂರಿಸುತ್ತಿದ್ದ ಯುವಕರು, ಈ ಬಾರಿ ಗಣೇಶ್ ಚೌಕ್ ಉದ್ಯಾನವನದಲ್ಲಿ ಗಣೇಶನನ್ನ ಪ್ರತಿಷ್ಠಾಪಿಸಿದ್ದಾರೆ.
Advertisement
Advertisement
ಇಲ್ಲಿ ಯಾವುದೇ ಧರ್ಮ ಬೇಧಕ್ಕೆ ಆಸ್ಪದ ಕೊಡದೆ, ಹಿಂದೂ-ಮುಸ್ಲಿಂ ಎಲ್ಲರೂ ಒಂದೇ ಎಂದು ಸಾರಲು ರಾಮ್ ರಹೀಮ್ ಗಣೇಶನನ್ನ ಯುವಕರು ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿದ್ದಾರೆ. ಇತ್ತೀಚೆಗೆ ಲಿಂಗಸುಗೂರಿನಲ್ಲಿ ನಡೆದ ಗಲಾಟೆ ಆತಂಕ ಸೃಷ್ಟಿ ಮಾಡಿತ್ತು. ಆದರೆ ಅದನ್ನೆಲ್ಲ ಬದಿಗೊತ್ತಿ ನಾವೆಲ್ಲರೂ ಒಂದೇ ಎಂದು ಸಾರಲು ರಾಮ್ ರಹೀಮ್ ಹೆಸರಿನ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ.
Advertisement
ಈ ಅಪರೂಪದ ಗಣಪನನ್ನು ನೋಡಿ ಭಕ್ತರು ಪೂಜೆ ಸಲ್ಲಿಸಿದ್ದಾರೆ. ಜೊತೆಗೆ ಧರ್ಮ, ಜಾತಿ ಎಂದು ಹೊಡೆದಾಡುವವರ ಮಧ್ಯೆ ಎಲ್ಲರೂ ಒಂದೇ ಎಂದು ಹಿಂದೂ- ಮುಸ್ಲಿಂ ಯುವಕರು ಗಣೇಶ ಹಬ್ಬವನ್ನು ಆಚರಿಸುತ್ತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.