ಜ.22ರಂದು ರಾಮಲಲ್ಲಾ ಪ್ರಾಣಪ್ರತಿಷ್ಠೆ – ವಿಶ್ವದ ದೊಡ್ಡಣ್ಣ ಅಮೆರಿಕದಲ್ಲೂ ನೇರಪ್ರಸಾರ

Public TV
2 Min Read
Ram Mandir 01

ವಾಷಿಂಗ್ಟನ್‌: ಇದೇ ಜನವರಿ 22ರಂದು ಐತಿಹಾಸಿಕ ರಾಮಮಂದಿರ ಉದ್ಘಾಟನೆ ನೆರವೇರಲಿದೆ. ಜೊತೆಗೆ ರಾಮಮಂದಿರದ ಗರ್ಭಗುಡಿಯಲ್ಲಿ ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠೆ (Shri Ramalalla Pran-Pratishtha) ನಡೆಯಲಿದೆ. ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಇಡೀ ವಿಶ್ವವೇ ಕಾದುಕುಳಿತಿದೆ.

ram mandir 1

ಅಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಸೇರಿದಂತೆ ಗಣ್ಯಾತಿಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಐತಿಹಾಸಿಕ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ವಿದೇಶಗಳಲ್ಲೂ ನೇರ ಪ್ರಸಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಿಶ್ವದ ದೊಡ್ಡಣ್ಣ ಎಂದೇ ಕರೆಸಿಕೊಳ್ಳುವ ಅಮೆರಿಕ (USA) ಸಹ ನ್ಯೂಯಾರ್ಕ್ ನಗರದ ಐಕಾನಿಕ್ ಟೈಮ್ಸ್ ಸ್ಕ್ವೇರ್‌ನಲ್ಲಿ (Times Square) ಲೈವ್‌ಸ್ಟ್ರೀಮ್ ಮಾಡಲಿದೆ. ಜೊತೆಗೆ ಅಮೆರಿಕದಲ್ಲಿರುವ ವಿವಿಧ ಭಾರತೀಯ ರಾಯಭಾರಿ ಕಚೇರಿಗಳು ನೇರಪ್ರಸಾರ ಮಾಡುವ ಮೂಲಕ ಶ್ರೀರಾಮನ ಕೀರ್ತಿಯನ್ನು ಪಸರಿಸಲು ಸಜ್ಜಾಗಿವೆ ಎಂದು ಮೂಲಗಳು ತಿಳಿಸಿವೆ.

USA

ಥೈಲ್ಯಾಂಡ್‌ನಲ್ಲೂ ನೇರ ಪ್ರಸಾರ:
ಅಯೋಧ್ಯೆಯಲ್ಲಿ (Ayodhya) ಶ್ರೀರಾಮನ ಪ್ರತಿಷ್ಠಾಪನೆಗೆ ಸಾಕ್ಷಿಯಾಗುವ 51 ದೇಶಗಳನ್ನು ಗುರುತಿಸಲಾಗಿದೆ. ಈ ಪೈಕಿ ಥೈಲ್ಯಾಂಡ್‌ ಸಹ ಒಂದಾಗಿದ್ದು, ಇಲ್ಲಿನ ರಾಜಧಾನಿ ಬ್ಯಾಂಕಾಕ್‌ನಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆ ಕಾರ್ಯಕ್ರಮ ನೇರ ಪ್ರಸಾರವಾಗಲಿದೆ. ಥೈಲ್ಯಾಂಡ್‌ ರಾಜಧಾನಿ ಬ್ಯಾಂಕಾಕ್ ಶ್ರೀಮಂತ ಹಿಂದೂ ಸಾಂಸ್ಕೃತಿಕ ಪರಂಪರೆಗೆ ನೆಲೆಯಾಗಿದೆ. ಭಾರತ ಮತ್ತು ಥೈಲ್ಯಾಂಡ್ ಬಲವಾದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಸಂಬಂಧಗಳನ್ನು ಹೊಂದಿವೆ. ಥೈಲ್ಯಾಂಡ್‌ನ ಹಲವಾರು ರಾಜರು ರಾಮನ ವಂಶಸ್ಥರ ಭಾಗವಾಗಿದ್ದಾರೆ ಎಂದೇ ಹೇಳಲಾಗುತ್ತದೆ. ಇಲ್ಲಿರುವ ಪ್ರತಿಯೊಬ್ಬ ರಾಜನಿಗೂ ಅವರ ಹೆಸರಿನಲ್ಲಿ ರಾಮನ ಬಿರುದು ಇದೆ, ಇದು ಇಲ್ಲಿನ ಹಳೆಯ ಸಂಪ್ರದಾಯವಾಗಿದೆ ಎಂದು ವಿಶ್ವ ಹಿಂದೂ ಫೌಂಡೇಶನ್ ಸ್ಥಾಪಕ ಮತ್ತು ಜಾಗತಿಕ ಅಧ್ಯಕ್ಷರಾದ ಸ್ವಾಮಿ ವಿಜ್ಞಾನಾನಂದ ತಿಳಿಸಿದ್ದಾರೆ.

ಉತ್ತರ ಪ್ರದೇಶದ ಜೈಲುಗಳಲ್ಲಿ ನೇರಪ್ರಸಾರ:
ಉತ್ತರ ಪ್ರದೇಶದ (Uttar Pradesh) ಎಲ್ಲಾ ಜೈಲುಗಳಲ್ಲಿಯೂ ಜನವರಿ 22 ರಂದು ರಾಮಮಂದಿರ ಉದ್ಘಾಟನೆ ಸಮಾರಂಭದ ನೇರಪ್ರಸಾರ ಮಾಡಲಾಗುವುದು ಎಂದು ಸಚಿವ ಧರ್ಮವೀರ್ ಪ್ರಜಾಪತಿ ತಿಳಿಸಿದ್ದಾರೆ. ಕೈದಿಗಳು ಸಹ ಕಾರ್ಯಕ್ರಮದ ನೇರಪ್ರಸಾರ ವೀಕ್ಷಿಸಲು ಸಾಧ್ಯವಾಗುತ್ತದೆ. ಸದ್ಯ ರಾಜ್ಯದಲ್ಲಿ 1.05 ಲಕ್ಷಕ್ಕೂ ಹೆಚ್ಚು ಕೈದಿಗಳಿದ್ದಾರೆ. ಅವರೂ ಈ ದೇಶದ ಪ್ರಜೆಗಳು. ಅವರು ಈ ಸಂದರ್ಭದಿಂದ ದೂರ ಉಳಿಯದಂತೆ ನೋಡಿಕೊಳ್ಳಲು, ರಾಜ್ಯದ ಎಲ್ಲಾ ಜೈಲುಗಳಲ್ಲಿ ಲೈವ್ ಸ್ಟ್ರೀಮಿಂಗ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Share This Article