ಬೆಂಗಳೂರು: ಕರ್ನಾಟಕದಲ್ಲಿ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದರೂ ಅಧಿಕಾರ ಸ್ಥಾಪನೆ ಮಾಡಲು ಶತಾಯಗತಾಯ ಪ್ರಯತ್ನ ನಡೆಸುತ್ತಿದೆ. ಇತ್ತ ಜೆಡಿಎಸ್ ಮತ್ತು ಕಾಂಗ್ರೆಸ್ ಒಂದಾಗಿ ಸರ್ಕಾರ ಸ್ಥಾಪನೆಗೆ ಮುಂದಾಗುತ್ತಿದೆ.
ಈ ನಡುವೆ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ವಾಟ್ಸಪ್ ನಲ್ಲಿ ಬಂದಿರುವ ಒಂದು ಮೆಸೇಜ್ ಅನ್ನು ಫೇಸ್‍ಬುಕ್‍ನಲ್ಲಿ ಪ್ರಕಟಿಸಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Advertisement
ಪೋಸ್ಟ್ ನಲ್ಲಿ ಏನಿದೆ?
1996ರಲ್ಲಿ ಗುಜರಾತಿನಲ್ಲಿ ಆಡಳಿತರೂಢ ಬಿಜೆಪಿ ಸರ್ಕಾರ ಅಧಿಕಾರವನ್ನು ಕಳೆದುಕೊಂಡಿತ್ತು. ನಾಯಕರಾದ ಶಂಕರ್ ಸಿಂಗ್ ವಘೇಲಾ ಮತ್ತು ದಿಲೀಪ್ ಫಾರೀಕ್ ಅವರು ಬಹಿರಂಗವಾಗಿ ಕಾಂಗ್ರೆಸ್ ಬೆಂಬಲಿಸಿದ ಪರಿಣಾಮ ಬಿಜೆಪಿ ಇಬ್ಭಾಗವಾಗಿತ್ತು.
Advertisement
ವಿಶ್ವಾಸ ಮತಯಾಚನೆಯ ವೇಳೆ ಕಾಂಗ್ರೆಸ್ ವಿಧಾನಸಭೆಯಲ್ಲಿ ಗದ್ದಲ, ಗಲಾಟೆ ಎಬ್ಬಿಸಿತ್ತು. ಗದ್ದಲ ಎಬ್ಬಿಸಿದ್ದಕ್ಕೆ ವಿರೋಧ ಪಕ್ಷದ ಸದಸ್ಯರನ್ನು ಸ್ಪೀಕರ್ ಒಂದು ದಿನ ಅಮಾನತುಗೊಳಿಸಿದರು. ನಂತರ ನಡೆದ ವಿಶ್ವಾಸಮತ ಯಾಚನೆ ಪರೀಕ್ಷೆಯಲ್ಲಿ ಸರ್ಕಾರ ತನ್ನ ಬಹುಮತವನ್ನು ತೋರಿಸಿ ಪಾಸ್ ಆಗಿತ್ತು.
Advertisement
Advertisement
ನಂತರ ನಡೆದ ರೋಚಕ ವಿದ್ಯಮಾನದಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯಸ್ಥೆ ಹದಗೆಟ್ಟಿದೆ. ಅಷ್ಟೇ ಅಲ್ಲದೇ ಸಾಂವಿಧಾನಿಕ ಬಿಕ್ಕಟ್ಟು ಎದುರಾಗಿದೆ ಎಂದು ಹೇಳಿ ರಾಜ್ಯಪಾಲರಾದ ಕೃಷ್ಣಪಾಲ್ ಸಿಂಗ್ ಅವರು ತುರ್ತು ಪರಿಸ್ಥಿತಿ ಇರುವ ಕಾರಣ ರಾಷ್ಟ್ರಪತಿ ಆಡಳಿತವನ್ನು ಹೇರುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿದರು.
ಪ್ರಧಾನಿ ಕಚೇರಿಗೆ ಶಿಫಾರಸು ತಲುಪಿದ 15 ನಿಮಿಷದ ಒಳಗಡೆ ಗುಜರಾತ್ ರಾಜ್ಯ ಸರ್ಕಾರವನ್ನು ವಜಾ ಮಾಡಿ, ರಾಷ್ಟ್ರಪತಿ ಆಡಳಿತವನ್ನು ಹೇರಲಾಯಿತು. ವಿಶೇಷ ಏನೆಂದರೆ ಸದನದಲ್ಲಿ ಬಹುಮತ ಸಾಬೀತು ಪಡಿಸಿದರೂ ರಾಷ್ಟ್ರಪತಿ ಆಳ್ವಿಕೆ ಬಂದಿತ್ತು.
ನಂತರ ವಘೇಲಾ ಒಂದು ವರ್ಷಕ್ಕೆ, ಫರೀಕ್ 5 ತಿಂಗಳು ಮುಖ್ಯಮಂತ್ರಿಯಾಗಿ ಸರ್ಕಾರ ನಡೆಸುತ್ತಿದ್ದಾಗ ಕಾಂಗ್ರೆಸ್ ತಾನು ನೀಡಿದ್ದ ಬೆಂಬಲವನ್ನು ಹಿಂದಕ್ಕೆ ಪಡೆದುಕೊಂಡಿತು. ಇದಾದ ನಂತರ ನಡೆದ ಚುನಾವಣೆಯಲ್ಲಿ ವಘೇಲಾ ಅವರು ಹೊಂದಿದ್ದ ಶಾಸಕರ ಸಂಖ್ಯಾಬಲ 47 ರಿಂದ 4ಕ್ಕೆ ಇಳಿಯಿತು ಅಷ್ಟೇ ಅಲ್ಲದೇ ಕಾಂಗ್ರೆಸ್ಸಿಗೆ ಸೋಲಾಯಿತು. ಕೇಶುಭಾಯಿ ಪಟೇಲ್ ಮತ್ತೆ ಮುಖ್ಯಮಂತ್ರಿಯಾಗಿ ಗದ್ದುಗೆ ಏರಿದರು.
22 ವರ್ಷಗಳ ನಂತರವೂ ಈ ಘಟನೆ ಈಗ ಪ್ರಸ್ತುತ ಯಾಕೆಂದರೆ ಚುನಾಯಿತ ಸರ್ಕಾರಗಳು ಹೇಗೆ ಕೆಲವೊಮ್ಮೆ ಪ್ರಜಾಪ್ರಭುತ್ವವನ್ನು ಕೊಲೆ ಮಾಡುತ್ತವೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ನೆಹರೂ ಅವರ ಕಾಲದಿಂದಲೂ ಸಂವಿಧಾನ ಉಲ್ಲಂಘನೆಯಾಗುತ್ತಲೇ ಇದೆ.
1996 ರಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಿದ್ದಾಗ ವಜುಭಾಯಿ ವಾಲಾ ಗುಜರಾತ್ ಬಿಜೆಪಿಯ ಅಧ್ಯಕ್ಷರಾಗಿದ್ದರು. ಈಗ ವಿ.ಆರ್. ವಾಲಾ ಕರ್ನಾಟಕದ ರಾಜ್ಯಪಾಲರಾಗಿದ್ದಾರೆ. ರಾಜ್ಯಪಾಲರ ಶಿಫಾರಸಿಗೆ ರಾಷ್ಟ್ರಪತಿ ಆಡಳಿತವನ್ನು ಗುಜರಾತ್ ನಲ್ಲಿ ಹೇರಿದ ವ್ಯಕ್ತಿ ಬೇರೆ ಯಾರೂ ಅಲ್ಲ. ಅಂದಿನ ಪ್ರಧಾನಿ ಎಚ್‍ಡಿ ದೇವೇಗೌಡರೇ ರಾಷ್ಟ್ರಪತಿ ಆಡಳಿತವನ್ನು ಹೇರಿದ್ದರು. ಈಗ ಕಾಂಗ್ರೆಸ್ ಮತ್ತು ಜೆಡಿಎಸ್ ರಾಜ್ಯಪಾಲರು ಅವರ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುವಂತೆ ಕೇಳಿಕೊಳ್ಳುತ್ತಿವೆ. ಅದಕ್ಕೆ ಹೇಳೋದು ಕರ್ಮ ಯಾರನ್ನು ಬಿಡವುದಿಲ್ಲ ಹಿಂಬಾಲಿಸುತ್ತಲೇ ಇರುತ್ತದೆ ಅಂತ.