ಮನೆಯಲ್ಲಿ ಕುಳಿತು ಇಷ್ಟೆಲ್ಲಾ ಮಾಡ್ತಾರಾ ರಕ್ಷಿತ್ ಶೆಟ್ಟಿ

Public TV
2 Min Read
AvaneSrimannarayana

ಬೆಂಗಳೂರು: ಬೆಂಗಳೂರಿನಲ್ಲಿರುವ ಬ್ಯಾಚ್ಯುಲರ್ ಹುಡುಗರ ರೀತಿಯೇ ಕಿರಿಕ್ ಹುಡುಗ ರಕ್ಷಿತ್ ಶೆಟ್ಟಿ ಸಹ ಸ್ವಯಂ ದಿಗ್ಬಂಧನ ವಿಧಿಸಿಕೊಂಡು ಸಿಲಿಕಾನ್ ಸಿಟಿಯಲ್ಲಿಯೇ ಕಾಲ ಕಳೆಯುತ್ತಿದ್ದು, ಈ ವೇಳೆ ಹತ್ತು ಹಲವು ಕೆಲಸಗಳನ್ನು ಮಾಡುತ್ತಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಪೆರಿಸ್ಕೋಪ್‍ನಲ್ಲಿ ಲೈವ್ ವಿಡಿಯೋ ಮಾಡಿರುವ ಅವರು, ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿ ಹಲವು ವಿಚಾರಗಳ ಕುರಿತು ಹಂಚಿಕೊಂಡಿದ್ದಾರೆ.

ತಮ್ಮ ಮೂವರು ರೂಮ್ ಮೇಟ್ಸ್ ಜೊತೆಗೆ ಬೆಂಗಳೂರಿನ ಮನೆಯಲ್ಲಿ ಬ್ಯಾಚ್ಯುಲರ್ ಲೈಫ್ ಕಳೆಯುತ್ತಿದ್ದಾರೆ. ಈ ಮಧ್ಯೆ ಹತ್ತು ಹಲವು ಕೆಲಸಗಳಲ್ಲಿ ಭಾಗಿಯಾಗಿದ್ದು, ರಿಚ್ಚಿ ಹಾಗೂ ಪುಣ್ಯಕೋಟಿ ಕಥೆಗಳನ್ನು ಬರೆಯುತ್ತಿದ್ದಾರಂತೆ. ಇದರ ಜೊತೆಗೆ ಚಾರ್ಲಿ ಸಿನಿಮಾದ ಕೆಲಸಗಳನ್ನು ಸಹ ಮಾಡುತ್ತಿದ್ದಾರಂತೆ. ಪುಸ್ತಕ ಓದುವುದು, ಕಥೆ ಬರೆಯುವುದು ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿದ್ದಾರಂತೆ.

ಚಂದ್ರಜೀತ್ ಹಾಗೂ ರಾಹುಲ್ ಅವರು ಮನೆಯಲ್ಲೇ ಕುಳಿತುಕೊಂಡು ರಿಚ್ಚಿ ಸಿನಿಮಾ ಕಥೆ ಬರೆಯುತ್ತಿದ್ದಾರೆ. ನಾನೂ ಸಹ ಅವರೊಂದಿಗೆ ಚರ್ಚೆ ನಡೆಸಿ ಮೂವರೂ ಕಥೆ ಬರೆಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.

rakshit shetty1

ಚಾರ್ಲಿ ಚಿತ್ರೀಕರಣವನ್ನು ಸಧ್ಯಕ್ಕೆ ನಿಲ್ಲಿಸಿದ್ದೇವೆ. ಯಾವಾಗ ಪ್ರಾರಂಭವಾಗುತ್ತದೆ ತಿಳಿದಿಲ್ಲ. ವಾತಾವರಣ ಸರಿಯಾಗಿದೆ ಎಂದು ಸರ್ಕಾರ ಹೇಳುವವರೆಗೆ ಚಿತ್ರೀಕರಣ ಪ್ರಾರಂಭಿಸುವುದಿಲ್ಲ. ನಾವೂ ಬೆಂಗಳೂರಿಗೆ ಬಂದಾಗಿನಿಂದ ಚಿತ್ರೀಕರಣವನ್ನು ನಿಲ್ಲಿಸಿದ್ದೇವೆ. ನಮ್ಮ ಪಿನಾಕಾ, ಪರಂಭೋ ಸ್ಟುಡಿಯೋಗಳನ್ನು ಸಹ ಬಂದ್ ಮಾಡಿದ್ದೇವೆ. ಎಲ್ಲರೂ ಅವರ ಮನೆಯಲ್ಲೇ ಕುಳಿತು ಕೆಲಸ ಮಾಡುತ್ತಿದ್ದೇವೆ. ಕಿರಣ್ ರಾಜ್ ಅವರು ಚಾರ್ಲಿ ಸಿನಿಮಾದ ಫಸ್ಟ್ ಹಾಫ್‍ನ್ನು ಎಡಿಟ್ ಮಾಡಿ, ಬ್ಯಾಗ್ರೌಂಡ್ ಸ್ಕೋರ್ ಮಾಡುತ್ತಿದ್ದಾರೆ. ಡಬ್ಬಿಂಗ್ ಸಹ ಅರ್ಧ ಆಗಿದ್ದು, ಇನ್ನೂ ಅರ್ಧ ಬಾಕಿ ಇದೆ. ಇದೀಗ ಡಬ್ಬಿಂಗ್ ಮಾಡುವ ಹಾಗಿಲ್ಲ ಹೀಗಾಗಿ ಚಾರ್ಲಿ ಸಿನಿಮಾದ ಬ್ಯಾಗ್ರೌಂಡ್ ಸ್ಕೋರ್ ಕೆಲಸವನ್ನು ಮುಂದುವರಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

rakshith shetty 2

ಹೇಮಂತ್ ರಾವ್ ಅವರು ”ಸಪ್ತಸಾಗರದಾಚೆ ಎಲ್ಲೋ” ಸಿನಿಮಾಗೆ ಕಥೆ ಬರೆಯುತ್ತಿದ್ದಾರೆ. ಇದೊಂದು ರೊಮ್ಯಾಂಟಿಕ್ ಸಿನಿಮಾ ಆಗಿದ್ದು, ಒಳ್ಳೆಯ ಸಿನಿಮಾ ಆಗಲಿದೆ ಎಂದು ಭರವಸೆ ನೀಡಿದ್ದಾರೆ. ಇದೇ ವೇಳೆ ಕೊರೊನಾ ಬಗ್ಗೆ ಸಿನಿಮಾ ಮಾಡಲು ಅಭಿಮಾನಿಗಳು ಪ್ರಶ್ನೆ ಕೇಳಿದ್ದು, ನನ್ನ ಸ್ನೇಹಿತರು ಈ ಕುರಿತು ಕೆಲ ಐಡಿಯಾ ಹೇಳಿದರು ಆದರೆ ಈ ಬಗ್ಗೆ ನಾನು ಮಾಡುವುದಿಲ್ಲ. ಕೆಲವರು ಈಗಾಗಲೇ ಈ ಕುರಿತು ಸಿನಿಮಾ ಮಾಡಲು ಪ್ರಯತ್ನ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.

ಚಾರ್ಲಿ, ರಿಚ್ಚಿ, ನಂತರ ಪುಣ್ಯಕೋಟಿ ಮಾಡುವ ಕುರಿತು ಯೋಚನೆ ಇದೆ. ಈ ಸಿನಿಮಾಗಳ ಕುರಿತು ಪ್ಲಾನ್ ಮಾಡಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ. ವೆಬ್ ಸಿರೀಸ್ ಮಾಡುವ ಪ್ಲಾನ್ ಇದೆ ಆದರೆ, ಇನ್ನೂ ಸ್ವಲ್ಪ ಸಮಯ ಬೇಕು ಎಂದಿದ್ದಾರೆ.

RAKSHITH SHETTY

ತಮ್ಮ ಎಲ್ಲ ಕಾರ್ಯಗಳ ಜೊತೆಗೆ ಅಭಿಮಾನಿಗಳಿಗೆ ಸಲಹೆಯನ್ನೂ ನೀಡಿದ್ದು, ಯಾರೂ ಮನೆಯಿಂದ ಹೊರಗೆ ಹೋಗಬೇಡಿ. ಕಟ್ಟೆಚ್ಚರ ವಹಿಸಿ, ನಾನು ಉಡುಪಿಗೆ ಹೋಗಬೇಕು ಎಂದುಕೊಂಡಿದ್ದೆ. ಅಷ್ಟೊತ್ತಿಗಾಗಲೇ ಲಾಕ್‍ಡೌನ್ ಮಾಡಲಾಗಿತ್ತು. ಹೀಗಾಗಿ ಬೆಂಗಳೂರಿನಲ್ಲಿಯೇ ಉಳಿದುಕೊಂಡೆ. ಹೀಗಾಗಿ ನೀವೂ ಸಹ ಬೆಂಗಳೂರಿನಿಂದ ಆಚೆ ಹೋಗುವ ಪ್ರಯತ್ನ ಮಾಡಬೇಡಿ ಎಂದಿದ್ದಾರೆ. ಅಲ್ಲದೆ ಮರೆತಿರುವ ನಿಮ್ಮ ಹವ್ಯಾಸಗಳನ್ನು ನೆನಪಿಸಿಕೊಳ್ಳಿ. ಅದರಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ಪುಸ್ತಕ ಓದುವುದು, ಬರೆಯುವುದು ಸೇರಿದಂತೆ ಇತರೆ ಚಟುವಟಿಕೆಗಳಲ್ಲಿ ತೊಡಗಿ ಎಂದು ಸಲಹೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *