ಸಾಹಸ ನಿರ್ದೇಶಕರಾಗಿ ಭಾರತದಾದ್ಯಂತ ಜನಪ್ರಿಯರಾಗಿರುವ ಕನ್ನಡದ ಹೆಮ್ಮೆಯ ಸಾಹಸ ನಿರ್ದೇಶಕ ಕೆ.ರವಿವರ್ಮ ಅವರ ಪ್ರಥಮ ನಿರ್ಮಾಣದ, ರವಿ ಸಾರಂಗ ಚೊಚ್ಚಲ ನಿರ್ದೇಶನದ ಹಾಗೂ ತಮ್ಮ ಅಮೋಘ ಅಭಿನಯದ ಮೂಲಕ ಖ್ಯಾತರಾಗಿರುವ ರಾಜ್ ಬಿ ಶೆಟ್ಟಿ (Raj B Shetty) ನಾಯಕರಾಗಿ ನಟಿಸುತ್ತಿರುವ ‘ರಕ್ಕಸಪುರದೋಳ್’ (Rakkasapuradol) ಚಿತ್ರದ ಮುಹೂರ್ತ ಸಮಾರಂಭ ನೆಟಕಲ್ಲಪ್ಪ ಸರ್ಕಲ್ ನಲ್ಲಿರುವ ವರಸಿದ್ದಿ ವಿನಾಯಕ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಹಬ್ಬದಂದು ಅದ್ದೂರಿಯಾಗಿ ನೆರವೇರಿತು. ನಟಿ ರಕ್ಷಿತ ಹಾಗೂ ನಿರ್ದೇಶಕ ಪ್ರೇಮ್ ಚಿತ್ರದ ಮೊದಲ ಸನ್ನಿವೇಶಕ್ಕೆ ಚಾಲನೆ ನೀಡಿ, ಶೀರ್ಷಿಕೆ ಅನಾವರಣ ಮಾಡಿದರು. ಕೆ.ವಿ.ಎನ್ ಸಂಸ್ಥೆಯ ಸುಪ್ರೀತ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
Advertisement
ಸಾಹಸ ನಿರ್ದೇಶಕರಾಗಿ ಜನಪ್ರಿರಾಗಿರುವ ರವಿವರ್ಮ ಅವರು ಈ ಚಿತ್ರದ ಮೂಲಕ ನಿರ್ಮಾಪಕರಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ದಿ ವಿಲನ್, ಏಕ್ ಲವ್ ಯಾ , ಕೆಡಿ ಮುಂತಾದ ಚಿತ್ರಗಳಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದ ರವಿ ಸಾರಂಗ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಜನಪ್ರಿಯ ನಟ ರಾಜ್ ಬಿ ಶೆಟ್ಟಿ ನಾಯಕರಾಗಿ ನಟಿಸುತ್ತಿದ್ದಾರೆ. ರಕ್ಕಸಪುರದೋಳ್ ಚಿತ್ರ ಚಂದನವನದಲ್ಲಿ ಭರ್ಜರಿ ಯಶಸ್ಸು ಕಾಣಲಿ ಎಂದು ರಕ್ಷಿತ – ಪ್ರೇಮ್ ದಂಪತಿ ಹಾರೈಸಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. ರಕ್ಕಸಪುರದೋಳ್ ಚಿತ್ರದ ಕಥೆ ತುಂಬಾ ಚೆನ್ನಾಗಿದೆ. ಜನರನ್ನು ಚಿತ್ರಮಂದಿರಕ್ಕೆ ಕರೆತರಲು ಬೇಕಾಗಿರುವಂತಹ ಕಥೆಯನ್ನು ನಿರ್ದೇಶಕ ರವಿ ಮಾಡಿಕೊಂಡಿದ್ದಾರೆ. ನಾನು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಹಿಂದಿನ ಚಿತ್ರಗಳಿಗಿಂತ ಭಿನ್ನ ಪಾತ್ರ ಎಂದರು ರಾಜ್ ಬಿ ಶೆಟ್ಟಿ.
Advertisement
Advertisement
ಕಳೆದ ಹತ್ತು ವರ್ಷಗಳಿಂದ ಪ್ರೇಮ್ ಸರ್ ಬಳಿ ಕಥೆ, ಚಿತ್ರಕಥೆ ಹಾಗೂ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಅವರ ಸಹಕಾರ ನನಗೆ ಎಂದಿಗೂ ಇರುತ್ತದೆ. ಪ್ರೇಮ್ ಮತ್ತು ರಕ್ಷಿತ ಅವರಿಗೆ ಧನ್ಯವಾದ. “ರಕ್ಕಸ” ಎಂದರೆ ರಾಕ್ಷಸ. “ಪುರ” ಎಂದರೆ ಊರು. ರಾಕ್ಷಸರೆ ಇರುವ ಊರು ಎಂಬುದು ಈ ಶೀರ್ಷಿಕೆಯ ಅರ್ಥ. ಮನುಷ್ಯನಲ್ಲಿ ಎರಡು ಗುಣಗಳಿರುತ್ತದೆ. ಒಂದು ಒಳ್ಳೆಯದು. ಮತ್ತೊಂದು ಕೆಟ್ಟದ್ದು. ಆ ಕೆಟ್ಟ ಗುಣಗಳನ್ನು “ರಕ್ಕಸ” ಎನ್ನಬಹುದು. ನಿರ್ಮಾಪಕ ರವಿವರ್ಮ ಹಾಗೂ ನಾಯಕ ರಾಜ್ ಬಿ ಶೆಟ್ಟಿ ಅವರು ಕಥೆ ಮೆಚ್ಚಿಕೊಂಡದ್ದು ಸಂತೋಷವಾಗಿದೆ. ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ ಎಂದರು ನಿರ್ದೇಶಕ ರವಿ ಸಾರಂಗ.
Advertisement
ರವಿ ಸಾರಂಗ ಅವರು ನನಗೆ ಎರಡು ವರ್ಷಗಳ ಪರಿಚಯ ಎಂದು ಮಾತು ಆರಂಭಿಸಿದ ನಿರ್ಮಾಪಕ ಕೆ.ರವಿವರ್ಮ, ಸಾಹಸ ನಿರ್ದೇಶಕನಾಗಿ ನನಗೆ ಎಲ್ಲರೂ ಪ್ರೋತ್ಸಾಹ ನೀಡಿದ್ದೀರಿ. ನಿರ್ಮಾಪಕನಾಗಿ ಇದು ಮೊದಲ ಚಿತ್ರ. ರವಿ ಸಾರಂಗ ಒಳ್ಳೆಯ ಕಥೆ ಮಾಡಿದ್ದಾರೆ. ರಾಜ್ ಬಿ ಶೆಟ್ಟಿ ಆ ಕಥೆಯನ್ನು ಒಪ್ಪಿ ನಟಿಸುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ವಿಲಿಯಂ ಡೇವಿಡ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಮೋಹನ್ ಬಿ ಕೆರೆ ಕಲಾ ನಿರ್ದೇಶನವಿರುವ ಹಾಗೂ ನರಸಿಂಹ ಜಾಲಹಳ್ಳಿ ಅವರ ನಿರ್ಮಾಣ ನಿರ್ವಹಣೆಯಿರುವ “ರಕ್ಕಸಪುರದೋಳ್” ಚಿತ್ರಕ್ಕೆ ಕ್ರಾಂತಿ ಕುಮಾರ್ ಸಂಭಾಷಣೆ ಬರೆಯತ್ತಿದ್ದಾರೆ. ವರಮಹಾಲಕ್ಷ್ಮೀ ಹಬ್ಬದ ಶುಭ ದಿನದಂದು ರಕ್ಷಿತ – ಪ್ರೇಮ್ ಅವರು ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ಒಂದೊಳ್ಳೆ ಚಿತ್ರ ನಿರ್ಮಾಣ ಮಾಡುತ್ತಿರುವ ಖುಷಿಯಿದೆ ಎಂದರು.
ರವಿವರ್ಮ ಅವರು ಸಾಹಸ ನಿರ್ದೇಶಕರಾಗಿ ನನ್ನ ನಿರ್ದೇಶನದ ಚಿತ್ರದಲ್ಲೂ ಕಾರ್ಯ ನಿರ್ವಹಿಸಿದ್ದಾರೆ. ಈ ಚಿತ್ರದ ಮೂಲಕ ನಿರ್ಮಾಪಕರಾಗುತ್ತಿದ್ದಾರೆ. ರಾಜ್ ಬಿ ಶೆಟ್ಟಿ ಅವರ ನಟನೆಯನ್ನು ಹತ್ತಿರದಿಂದ ನೋಡಿದ್ದೇನೆ. ಅವರೊಬ್ಬ ಉತ್ತಮ ಕಲಾವಿದ. ಇನ್ನು ರವಿ ಸಾರಂಗ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಇದು ಕನ್ನಡದ “ಆರ್ ಆರ್ ಆರ್” ಚಿತ್ರ. ತ್ರಿಬಲ್ ಆರ್ ತರಹ ಈ ಚಿತ್ರ ಕೂಡ ಯಶಸ್ವಿಯಾಗಲಿ ಎಂದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾರೈಸಿದರು. ನಾಯಕಿ ಸ್ವಾತಿಷ್ಟ ಕೃಷ್ಣ, ನಟ ಬಿ.ಸುರೇಶ್, ನಟಿ ಅರ್ಚನಾ ಕೊಟ್ಟಿಗೆ, ಚಿತ್ರದಲ್ಲಿ ಅಭಿನಯಿಸುತ್ತಿರುವ ಗೌರವ್ ಶೆಟ್ಟಿ, ಸಿದ್ದಣ್ಣ, ಸುಮ, ಅನಿರುದ್ದ್ ಭಟ್, ಛಾಯಾಗ್ರಾಹಕ ವಿಲಿಯಂ ಡೇವಿಡ್, ಸಂಭಾಷಣೆಕಾರ ಕ್ರಾಂತಿ ಕುಮಾರ್ ಹಾಗೂ ನರಸಿಂಹ ಜಾಲಹಳ್ಳಿ ಮುಂತಾದವರು “ರಕ್ಕಸಪುರದೋಳ್” ಚಿತ್ರದ ಕುರಿತು ಮಾತನಾಡಿದರು.