Connect with us

Bengaluru City

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯೋತ್ಸವ ಸಂಭ್ರಮ

Published

on

ಬೆಂಗಳೂರು: ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ 62ನೇ ಅದ್ಧೂರಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಸಿಎಂ ಅವರು ರಾಷ್ಟ್ರಧ್ವಜ ಹಾಗೂ ಶಿಕ್ಷಣ ಸಚಿವ ತನ್ವೀರ್ ಸೇಠ್ ನಾಡ ಧ್ವಜಾರೋಹಣ ಹಾರಿಸಿದರು.

ಸಿಎಂ ಅವರು ಬಿಳಿ ಬಣ್ಣದ ಪಾರಿವಾಳ, ರಾಜ್ಯೋತ್ಸವದ ಬಲೂನ್ ಹಾರಿ ಬಿಟ್ಟು ಸಮಾರಂಭಕ್ಕೆ ಚಾಲನೆ ನೀಡಿದರು. ಈ ವೇಳೆ ಭಾಗಿಯಾಗಿದ್ದ ಸಾವಿರಾರು ವಿದ್ಯಾರ್ಥಿಗಳು ಹಳದಿ, ಕೆಂಪು ಬಲೂನ್‍ಗಳನ್ನು ಹಾರಿಸಿದರು. ವಿವಿಧ ಶಾಲಾ ತಂಡಗಳು ಪಥ ಸಂಚಲನ ಮಾಡಿ ಸಿದ್ದರಾಮಯ್ಯ ಅವರಿಗೆ ಗೌರವ ವಂದನೆ ಸಲ್ಲಿಸಿದರು. ಇದೆ ವೇಳೆ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ ಕಾರ್ಯಕ್ರಮದಲ್ಲಿ “ಕನ್ನಡ ಸೌರಭ” ಸುಲಭ ಕನ್ನಡ ಕಲಿಗೆಗಾಗಿ ಇ ಕಲಿಕೆ ವೆಬ್ ಸೈಟ್ ಅನ್ನು ಸಿಎಂ ಅವರು ಬಿಡುಗಡೆ ಮಾಡಿದರು. ನಂತರ ಅರಬಿಂದೋ ಮೆಮೋರಿಯಲ್ ಶಾಲೆಯ 100 ವಿದ್ಯಾರ್ಥಿಗಳಿಂದ ನಾಡಗೀತೆ ಮತ್ತು ರೈತಗೀತೆ ಗಾಯನ ನಡೆಯಿತು.

ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಸಿಎಂ, ವಿಶಾಲ ಕರ್ನಾಟಕದ ದಿನವನ್ನು ಕನ್ನಡ ರಾಜ್ಯೋತ್ಸವ ದಿನವನ್ನಾಗಿ ಆಚರಣೆ ಮಾಡುತ್ತೇವೆ. ಕನ್ನಡ ಭಾಷೆಗೆ 2 ಸಾವಿರ ವರ್ಷಗಳ ಲಿಪಿ ಹಾಗೂ ದೀರ್ಘ ಇತಿಹಾಸ ಇದೆ. ಕನ್ನಡಿಗರು ಉದಾರಿಗಳು, ಬೇರೆ ಜನರನ್ನು ಪ್ರೀತಿಸುವ ಮನಸ್ಸು ಇರೋರು. ಭಾಷೆಯ ಬಗ್ಗೆ ಉದಾರವಾಗಿರಬೇಕಾಗಿಲ್ಲ, ಅಭಿಮಾನ ಬೆಳೆಸಿಕೊಳ್ಳಬೇಕು ಎಂದರು.

ಕಳೆದ 61 ವರ್ಷಗಳಲ್ಲಿ ನಾಡಿನ ಅಭಿವೃದ್ದಿ ಸಾಕಷ್ಟು ಆಗಿದೆ. ಆದರೆ ಕರ್ನಾಟಕದಲ್ಲಿ ಕನ್ನಡದ ವಾತಾವರಣ ನಿರ್ಮಾಣ ಮಾಡುವಲ್ಲಿ ಇನ್ನೂ ಯಶಸ್ಸು ಸಾಧಿಸಿಲ್ಲ. ಕರ್ನಾಟಕದಲ್ಲಿ ವಾಸಿಸುವವರೆಲ್ಲ ಕನ್ನಡಿಗರೇ, ಇಲ್ಲಿರುವವರೆಲ್ಲಾ ಕನ್ನಡ ಭಾಷೆ ಕಲಿಯಲೇಬೇಕು. ನಾನು ಮೊದಲು ಕನ್ನಡಿಗ ನಂತರ ಭಾರತೀಯ ಅನ್ನೋ ಭಾವನೆ ಬರಬೇಕು. ಯಾವ ಭಾಷೆಯಾದರೂ ಕಲಿಯಿರಿ. ಕನ್ನಡ ಕಲಿಯದೇ ಇರೋದು ಕನ್ನಡಕ್ಕೆ ಮಾಡಿದ ಅವಮಾನ ಆಗುತ್ತೆ. ಕನ್ನಡೇತರರಿಗೆ ಕನ್ನಡ ಕಲಿಯುವ ವಾತಾವರಣ ನಿರ್ಮಾಣ ಮಾಡಬೇಕಾದುದ್ದು, ಕನ್ನಡಿಗರ ಕರ್ತವ್ಯ ಎಂದರು.

ಇತ್ತೀಚೆಗೆ ಪೋಷಕರಲ್ಲಿ ಆಂಗ್ಲ ಭಾಷೆಯ ವ್ಯಾಮೋಹ ಹೆಚ್ಚಾಗಿದೆ. ಕನ್ನಡ ಭಾಷೆಯನ್ನು ಕಲಿಯೋದ್ರಿಂದ ಜ್ಞಾನ ಭಂಡಾರ ಜಾರಿ ಆಗುತ್ತೆ. ಪ್ರಾದೇಶಿಕ ಭಾಷೆ ಉಳಿವಿಗಾಗಿ ಪಿಎಂ ಸೇರಿದಂತೆ ಎಲ್ಲಾ ರಾಜ್ಯದ ಸಿಎಂಗಳಿಗೆ ಆಯಾ ರಾಜ್ಯಗಳ ಮಾತೃ ಭಾಷೆಯಲ್ಲೇ ಶಿಕ್ಷಣ ನೀಡುವ ತಿದ್ದುಪಡಿ ಬರುವಂತೆ ಪತ್ರ ಬರೆದಿದ್ದೇವೆ. ಆದರೆ ಪ್ರಧಾನಿಗಳು ಯಾವುದಕ್ಕೂ ಪ್ರತಿಕ್ರಿಯಿಸಿಲ್ಲ ಎಂದು ಹೇಳಿದರು.

ಶಿಕ್ಷಣ ಸಚಿವ ತನ್ವೀರ್ ಸೇಠ್ ಮಾತನಾಡಿ, ಕನ್ನಡ ನಾಡು ನುಡಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಕನ್ನಡ ಭಾಷೆ ಕಡ್ಡಾಯವಾಗಿ ಶಾಲೆಗಳಲ್ಲಿ ಕಲಿಯಬೇಕು ಅನ್ನೋ ಆದೇಶವನ್ನು ಸರ್ಕಾರ ಹೊರಡಿಸಿದೆ. ಗುರು ಚೇತನದ ಮೂಲಕ ಶಿಕ್ಷಕರಿಗೆ ತರಬೇತಿ ನೀಡುವ ಮೂಲಕ ಗುಣಮಟ್ಟದ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಲಾಗಿದೆ. ವಿಶ್ವಾಸ ಕಿರಣ ಕಾರ್ಯಕ್ರಮದ ಮೂಲಕ ರಜಾ ದಿನಗಳಲ್ಲಿ ಮಕ್ಕಳಿಗೆ ತರಬೇತಿ ನೀಡುವ ಕೆಲಸ ಮಾಡಿದ್ದೇವೆ. ಶಿಕ್ಷಣ ಇಲಾಖೆಗೆ ಸಿದ್ದರಾಮಯ್ಯ ಅವರು ಹೆಚ್ಚಿನ ಅನುದಾನ ನೀಡಿದ್ದಾರೆ. ಜನವರಿ ಫೆಬ್ರವರಿಯಲ್ಲಿ 10 ಸಾವಿರ ಶಿಕ್ಷಕರ ನೇಮಕಾತಿ ಮುಕ್ತಾಯವಾಗಲಿದೆ. ಅಷ್ಟೇ ಅಲ್ಲದೇ ಕನ್ನಡ ಶಾಲೆಗಳ ಸಬಲೀಕರಣಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಮಿತಿ ಶಿಫಾರಸ್ಸು ಅನುಷ್ಠಾನಕ್ಕೆ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಬೆಂಗಳೂರು ನಾಗರೀಕರು ಬಂದಿರಲಿಲ್ಲ. ಕಾರ್ಯಕ್ರಮಕ್ಕೆ ಬಿಜೆಪಿ ನಾಯಕರಿಗೆ ಆಹ್ವಾನವಿದ್ದರೂ ಗೈರು ಹಾಜರಾಗಿದ್ದರು. ಇದರಿಂದ ಬಹುತೇಕ ಕ್ರೀಡಾಂಗಣ ಖಾಲಿ ಖಾಲಿ ಇತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿರುವ ಶಾಲಾ ಮಕ್ಕಳು ಮತ್ತು ಶಾಲಾ ಶಿಕ್ಷಕರು ಮಾತ್ರ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಇಂದು ನಿಧನರಾದ ಶಾಸಕ ಚಿಕ್ಕಮಾದು ಅವರಿಗೆ ಮಕ್ಕಳು ಮತ್ತು ಅಧಿಕಾರಿಗಳು ಎಲ್ಲರು ಎದ್ದು ನಿಂತು ಒಂದು ನಿಮಿಷ ಶ್ರದ್ಧಾಂಜಲಿ ಸಲ್ಲಿಸಿದರು.

     

Click to comment

Leave a Reply

Your email address will not be published. Required fields are marked *