ಶಿವಮೊಗ್ಗ: ಶಿಕ್ಷಣ ತಜ್ಞ ಪ್ರೊ.ಪಿ.ವಿ.ಕೃಷ್ಣಭಟ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಜಿಲ್ಲೆಯ ನಾಲ್ವರು ಸಾಧಕರು ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗಾಗಿ ಪ್ರೊ.ಪಿ.ವಿ.ಕೃಷ್ಣಭಟ್, ಜಾನಪದ ವಿಭಾಗದಲ್ಲಿ ಹಸೆ ಚಿತ್ತಾರ ಕಲಾವಿದೆ ಸಾಗರದ ಗೌರಮ್ಮ ಹುಚ್ಚಪ್ಪ ಮಾಸ್ತರ್, ಯಕ್ಷಗಾನ ವಿಭಾಗದಲ್ಲಿ ಗೋಪಾಲ ಆಚಾರ್ಯ ಹಾಗು ಯೋಗ ವಿಭಾಗದಲ್ಲಿ ಬಾ.ಮ.ಶ್ರೀಕಂಠ ಅವರುಗಳು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪಿ.ವಿ.ಕೃಷ್ಣಭಟ್(ಶಿಕ್ಷಣ ಕ್ಷೇತ್ರ)
ಶಿವಮೊಗ್ಗದ ದೇಶಿಯ ವಿದ್ಯಾಸಂಸ್ಥೆಯಲ್ಲಿ ಉಪನ್ಯಾಸಕರಾಗಿದ್ದ ಕೃಷ್ಣಭಟ್ ಅವರು, ಪ್ರಸ್ತುತ ಒಡಿಸ್ಸಾದ ಕೇಂದ್ರಿಯ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಬಿವಿಪಿಯ ರಾಷ್ಟ್ರೀಯ ಅಧ್ಯಕ್ಷರು ಆಗಿದ್ದ ಪಿ.ವಿ.ಕೃಷ್ಣಭಟ್ ಅವರು ಕರ್ನಾಟಕದ ವಿಧಾನ ಪರಿಷತ್ ಸದಸ್ಯರು ಸಹ ಆಗಿದ್ದರು.
ಗೌರಮ್ಮ ಹುಚ್ಚಪ್ಪ ಮಾಸ್ತರ್(ಜಾನಪದ ಕ್ಷೇತ್ರ)
ಗೌರಮ್ಮ ನಾಡಿನ ಹೆಸರಾಂತ ಜಾನಪದ ವಿದ್ವಾಂಸ ದಿವಂಗತ ಹುಚ್ಚಪ್ಪ ಮಾಸ್ತರ್ ಅವರ ಪತ್ನಿಯಾಗಿದ್ದಾರೆ. ಮಲೆನಾಡಿನ ಆದಿಮ ಕಲೆ ಹಸೆ ಚಿತ್ತಾರ ಕಲೆಯನ್ನು ಬಾಲ್ಯದಿಂದಲೂ ಜೀವನಾಡಿಯಂತೆ ಪೋಷಿಸಿಕೊಂಡು ಬಂದಿರುವ ಗೌರಮ್ಮ ಅವರಿಗೆ ಈ ಕಲೆಗಾಗಿ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ನಿರ್ಲಕ್ಷಿತ ಕಲಾ ಪ್ರಕಾರವೊಂದನ್ನು ಮಲೆನಾಡಿನ ಈಡಿಗ ಸಮುದಾಯ ಅತ್ಯಂತ ಕ್ರಿಯಾಶೀಲತೆಯಿಂದ ತನ್ನ ಅಂತರಂಗದಲ್ಲಿ ಪೋಷಿಸುತ್ತಿದೆ. ವಿಶೇಷವೆಂದರೆ ದಿವಂಗತ ಹುಚ್ಚಪ್ಪ ಮಾಸ್ತರ್ ಅವರಿಗೆ 1992 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಬಂದಿತ್ತು. ಇದೀಗ ಅವರ ಪತ್ನಿಗೂ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು, ಆ ಮೂಲಕ ಪತಿ ಪತ್ನಿ ಇಬ್ಬರಿಗೂ ರಾಜ್ಯೋತ್ಸವ ಪ್ರಶಸ್ತಿ ದೊರೆತಂತಾಗಿದೆ.
ಬಾ.ಮ.ಶ್ರೀಕಂಠ(ಯೋಗ ಕ್ಷೇತ್ರ)
ಹಿರಿಯ ಯೋಗ ಗುರು ಬಾ.ಮ.ಶ್ರೀಕಂಠ ಅವರಿಗೆ ಯೋಗ ವಿಭಾಗದಲ್ಲಿ ಪ್ರಶಸ್ತಿ ಬಂದಿರುವುದು ಮಲೆನಾಡಿಗೆ ಹೆಮ್ಮೆಯ ವಿಷಯವಾಗಿದೆ. ಆರ್‍ಎಸ್‍ಎಸ್ ನಿಷ್ಠಾವಂತ ಕಟ್ಟಾಳು ಶ್ರೀಕಂಠ ಅವರು ಎಲೆಮರೆಯ ಕಾಯಿಯಂತೆ ಜನಸೇವೆ ಮಾಡಿಕೊಂಡವರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆಗಳಲ್ಲಿ ಯೋಗ ಕಲಿಸಿಕೊಡುವ ಅವರು ಸರಳ ಸಜ್ಜನಿಕೆಗೆ ಹೆಸರಾದವರು. ಸರ್ಕಾರ ಅವರನ್ನು ಗುರುತಿಸಿ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ.
ಗೋಪಾಲ ಆಚಾರ್ಯ(ಯಕ್ಷಗಾನ)
ಗೋಪಾಲ ಆಚಾರ್ಯ ಅವರು ಯಕ್ಷಗಾನ ಕಲಾವಿದರಾಗಿದ್ದು, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯವರಾದ ಇವರು ಯಕ್ಷಗಾನ ಮುಮ್ಮೇಳ ಕಲಾವಿದರಾಗಿದ್ದಾರೆ. ಹಲವು ವರ್ಷಗಳಿಂದ ಕಲಾಸೇವೆ ಮಾಡಿಕೊಂಡು ಬಂದಿರುವ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಯಕ್ಷಗಾನ ಪ್ರೇಮಿಗಳಿಗೆ ಸಂತಸ ಮೂಢಿಸಿದೆ.