ಬೆಂಗಳೂರು: ಸತತ 11 ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಿ ಸೋಲಿಲ್ಲದ ಸರದಾರ ಎನ್ನಿಸಿಕೊಂಡಿದ್ದ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತು ಮೊದಲ ಸೋಲು ಕಂಡಿದ್ದರು. ಕಳೆದ 8 ತಿಂಗಳಿನಿಂದ ರಾಜಕೀಯ ವನವಾಸದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆ ಸದಸ್ಯರಾಗಲು ಆಸಕ್ತರಾಗಿದ್ದಾರೆ ಎನ್ನಲಾಗುತ್ತಿದೆ. ಜೂನ್ ತಿಂಗಳಿಗೆ ರಾಜ್ಯದ ನಾಲ್ಕು ರಾಜ್ಯಸಭಾ ಸದಸ್ಯರ ಅವಧಿ ಮುಗಿಯಲಿದ್ದು ಅದರಲ್ಲಿ ಒಂದು ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆಯವರು ಸ್ಪರ್ಧೆ ಮಾಡುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆಯವರು, ರಾಜ್ಯಸಭೆಗೆ ಆಯ್ಕೆ ಮಾಡುವ ತೀರ್ಮಾನ ಹೈಕಮಾಂಡ್ ಗೆ ಬಿಟ್ಟಿದ್ದು. ಹೈಕಮಾಂಡ್ ತೆಗೆದುಕೊಂಡ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ ಎಂದಿದ್ದಾರೆ. ಹಾಗಂತ ಆಯ್ಕೆ ಮಾಡ್ತಾರೆ, ಬಿಡ್ತಾರೆ ಅನ್ನೋದನ್ನ ಅಲ್ಲಿ ಇಲ್ಲಿ ಹೇಳಿಕೊಂಡು ಓಡಾಡಲ್ಲ ಎಂದಿದ್ದಾರೆ. ಆ ಮೂಲಕ ತಾವು ರಾಜ್ಯಸಭಾ ಸದಸ್ಯರಾಗಲು ರೆಡಿ ಎಂದು ಹೇಳಿದ್ದಾರೆ.
ಪರೋಕ್ಷವಾಗಿ ಹೈಕಮಾಂಡ್ ರಾಜ್ಯಸಭೆ ಸದಸ್ಯನನ್ನಾಗಿ ಮಾಡಿದರೆ ಒಪ್ಪಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನ ಪ್ರೊ.ರಾಜೀವ್ ಗೌಡ ಹಾಗೂ ಬಿ.ಕೆ.ಹರಿಪ್ರಸಾದ್, ಜೆಡಿಎಸ್ ನ ಕುಪೇಂದ್ರ ರೆಡ್ಡಿ ಹಾಗೂ ಬಿಜೆಪಿಯ ಪ್ರಭಾಕರ ಕೋರೆಯವರಿಂದ ರಾಜ್ಯ ಸಭಾ ಸದಸ್ಯ ಸ್ಥಾನ ಜೂನ್ ನಲ್ಲಿ ತೆರವಾಗಲಿದೆ.