– ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ
– ಬೆಂಗಳೂರಿನಲ್ಲಿ ಓದಿದ್ದ ಸೋಫಿಯಾ ಫಿರ್ದೌಸ್
ಭುವನೇಶ್ವರ: ರಾಜ್ಯಸಭಾ ಚುನಾವಣೆಯಲ್ಲಿ (Rajya Sabha Election) ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಮತ ಚಲಾಯಿಸಿದ್ದಕ್ಕೆ ಶಾಸಕಿ ಸೋಫಿಯಾ ಫಿರ್ದೌಸ್ (Sofia Firdous) ಅವರನ್ನು ಪಕ್ಷದಿಂದಲೇ ಕಾಂಗ್ರೆಸ್ (Congress) ಉಚ್ಚಾಟನೆ ಮಾಡಿದೆ.
ವಿಪ್ ಜಾರಿ ಮಾಡಿದ್ದರೂ ಅಡ್ಡ ಮತದಾನ ಮಾಡಿದ್ದಕ್ಕೆ ಸೋಫಿಯಾ ಫಿರ್ದೌಸ್ ಜೊತೆ ಸನಾ ಖೇಮುಂಡಿ ಶಾಸಕ ರಮೇಶ್ ಜೆನಾ, ಮೊಹನ್ನಾ ಶಾಸಕ ದಶರತ್ ಗಮಾಂಗೊ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಪಕ್ಷಕ್ಕೆ ದ್ರೋಹ ಮಾಡಿದವರು ರಾಷ್ಟ್ರಕ್ಕೆ ದ್ರೋಹ ಮಾಡಿದ್ದಾರೆ ಎಂದು ಕಾಂಗ್ರೆಸ್ ಆಕ್ರೋಶ ಹೊರಹಾಕಿದ್ದಾರೆ.
ಚುನಾವಣೆಗೆ ಮೊದಲೇ ಸೋಫಿಯಾ ಅವರು ಕಾಂಗ್ರೆಸ್ ಪಕ್ಷದ ವಿರುದ್ಧವೇ ಮಾತನಾಡಿದ್ದರು. ಶಾಸಕರನ್ನು ಸಂಪರ್ಕಿಸದೇ ಬಿಜೆಡಿ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಪಕ್ಷ ಹೇಳಿದ್ದಕ್ಕೆ ಸಿಟ್ಟು ಹೊರಹಾಕಿದ್ದರು. ಬಿಜೆಡಿ ಬಿಜೆಪಿಯ ಬಿ ತಂಡವಾಗಿರುವಾಗ ಕಾಂಗ್ರೆಸ್ ಬೆಂಬಲ ನೀಡಿದ್ದು ಹೇಗೆ ಎಂದು ಪ್ರಶ್ನಿಸಿದ್ದರು. ಅಷ್ಟೇ ಅಲ್ಲದೇ ರಾಜ್ಯ ಸಭಾ ಚುನಾವಣಾ ಪ್ರಕ್ರಿಯೆಯಲ್ಲಿ ತನ್ನನ್ನು ಹೊರಗಡೆ ಇರಿಸಿದ್ದಕ್ಕೆ ಸಿಟ್ಟು ಹೊರಹಾಕಿದೆ.

ಸೋಫಿಯಾ ಫಿರ್ದೌಸ್ ಯಾರು?
ಬೆಂಗಳೂರಿನಲ್ಲಿ ಓದಿದ ಸೋಫಿಯಾ ಫಿರ್ದೌಸ್ ಒಡಿಶಾ ವಿಧಾನಸಭೆಗೆ ಆಯ್ಕೆಯಾದ ಮೊದಲ ಮುಸ್ಲಿಂ ಶಾಸಕಿ (Muslim MLA) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು.
32 ವರ್ಷದ ಸೋಫಿಯಾ ಫಿರ್ದೌಸ್ ರಾಜಕೀಯ ಕುಟುಂಬದಿಂದ ಬಂದಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕ ಮೊಹಮ್ಮದ್ ಮೊಕ್ವಿಮ್ ಅವರ ಪುತ್ರಿಯಗಿರುವ ಇವರು ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿಯಿಂದ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಅವರು 2022 ರಲ್ಲಿ ಬೆಂಗಳೂರಿನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಿಂದ (IIMB) ಎಕ್ಸುಕ್ಯೂಟಿವ್ ಜನರಲ್ ಮ್ಯಾನೆಜ್‌ಮೆಂಟ್ ಪ್ರೋಗ್ರಾಂ ಓದಿದ್ದಾರೆ. ಇದನ್ನೂ ಓದಿ: ಒಡಿಶಾದಲ್ಲಿ ಬಿಜೆಡಿ, ಕಾಂಗ್ರೆಸ್‌ನಿಂದ ಕ್ರಾಸ್ ವೋಟ್ – ಬಿಜೆಪಿ ಅಭ್ಯರ್ಥಿಗೆ 10 ಶಾಸಕರ ಮತ

2023 ರಲ್ಲಿ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ಸ್ ಆಫ್ ಇಂಡಿಯಾದ (CREDAI) ಒಕ್ಕೂಟದ ಭುವನೇಶ್ವರ ಚಾಪ್ಟರ್ ಅಧ್ಯಕ್ಷರಾಗಿ ಫಿರ್ದೌಸ್ ಆಯ್ಕೆಯಾಗಿದ್ದರು. ಅಷ್ಟೇ ಅಲ್ಲದೇ CREDAI ಮಹಿಳಾ ವಿಭಾಗದ ಪೂರ್ವ ವಲಯ ಸಂಯೋಜಕಿಯಾಗಿಯೂ ಸೇವೆ ಸಲ್ಲಿಸಿದ್ದರು.
ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್‌ನ (IGBC) ಭುವನೇಶ್ವರ ವಿಭಾಗದ ಸಹ-ಅಧ್ಯಕ್ಷರಾಗಿದ್ದಾರೆ. ಸೋಫಿಯಾ ಫಿರ್ದೌಸ್ ಅವರು ಉದ್ಯಮಿ ಶೇಖ್ ಮೆರಾಜ್ ಉಲ್ ಹಕ್ ಅವರನ್ನು ವಿವಾಹವಾಗಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಬಾರಾಬತಿ-ಕಟಕ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸೋಫಿಯಾ ಬಿಜೆಪಿಯ ಪೂರ್ಣಚಂದ್ರ ಮಹಾಪಾತ್ರ ಅವರನ್ನು 8,001 ಮತಗಳ ಅಂತರದಿಂದ ಸೋಲಿಸಿದ್ದರು. ಸೋಫಿಯಾ ಅವರಿಗೆ 53,339 ಮತಗಳು ಬಿದ್ದರೆ ಪೂರ್ಣಚಂದ್ರ ಮಹಾಪಾತ್ರ ಅವರಿಗೆ 45,338 ಮತಗಳು ಬಿದ್ದಿದ್ದವು.

