– ಮೈತ್ರಿಯ 4ನೇ ಅಭ್ಯರ್ಥಿಗೆ ಸೋಲು
– ಬಿಜೆಪಿಯ ಕೈ ಹಿಡಿದ ಪಕ್ಷೇತರ ಶಾಸಕರು
ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರಕ್ಕೆ ಬಿಜೆಪಿ ಬಿಗ್ ಶಾಕ್ ನೀಡಿದೆ. ರಾಜ್ಯಸಭಾ ಚುನಾವಣೆಯ ಮತ ಎಣಿಕೆಯ ವೇಳೆ ಭಾರೀ ಹೈಡ್ರಾಮಾ ನಡೆದು ಇಂದು ಬೆಳಗ್ಗೆ ಫಲಿತಾಂಶ ಪ್ರಕಟವಾಗಿದೆ. ಅಗತ್ಯ ಮತಗಳು ಇಲ್ಲದೇ ಇದ್ದರೂ ಬಿಜೆಪಿ ತನ್ನ ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡಿದೆ. ಬಿಜೆಪಿ ಮೂರು ಸ್ಥಾನ ಗೆದ್ದರೆ, ಮೈತ್ರಿ ಸರ್ಕಾರದ ಮೂರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಕೇಂದ್ರ ಸಚಿವ ಪಿಯೂಷ್ ಗೋಯಲ್, ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್, ಶಿವಸೇನೆಯ ಸಂಜಯ್ ರಾವತ್, ಕಾಂಗ್ರೆಸ್ ನಾಯಕ ಇಮ್ರಾನ್ ಪ್ರತಾಪ್‌ಗರ್ಹಿ, ಬಿಜೆಪಿಯ ಅನಿಲ್ ಬೋಂಡೆ ಮತ್ತು ಧನಂಜಯ್ ಮಹಾದಿಕ್ ಆಯ್ಕೆ ಆಗಿದ್ದಾರೆ.
Advertisement
Advertisement
ಮೈತ್ರಿಯ ಮೂರು ಮತ್ತು ಬಿಜೆಪಿ ಇಬ್ಬರು ಅಭ್ಯರ್ಥಿಗಳ ಜಯ ಸುಲಭವಾಗಿತ್ತು. ಆದರೆ ಮೈತ್ರಿ ಸರ್ಕಾರ 4ನೇ ಅಭ್ಯರ್ಥಿಯನ್ನು ಇಳಿಸಿದ್ದರೆ ಬಿಜೆಪಿ ಮೂರನೇ ಅಭ್ಯರ್ಥಿಯನ್ನು ಇಳಿಸಿತ್ತು. ಇದರಿಂದಾಗಿ ಚುನಾವಣೆ ರೋಚಕ ಘಟ್ಟಕ್ಕೆ ತಿರುಗಿತ್ತು. ಮತ ಎಣಿಕೆಯ ವೇಳೆ ರಾತ್ರಿ ಭಾರೀ ಹೈಡ್ರಾಮವೇ ನಡೆದು ಬೆಳಗ್ಗೆ ಫಲಿತಾಂಶ ಪ್ರಕಟವಾಗಿದೆ. ಇದನ್ನೂ ಓದಿ: ಭಾರತದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚು?
Advertisement
Advertisement
ನಡೆದಿದ್ದು ಏನು?
ಒಟ್ಟು 285 ಮಂದಿ ಮತ ಚಲಾವಣೆ ಮಾಡಿದ್ದರು. ಆದರೆ ಶಿವಸೇನೆಯ ಶಾಸಕ ಸುಹಾಸ್ ಕಾಂಡೆ ಮತದಾನದ ವೇಳೆ ಚುನಾವಣಾ ನಿಯಮವನ್ನು ಉಲ್ಲಂಘಿಸಿದ್ದ ಹಿನ್ನೆಲೆಯಲ್ಲಿ ಆ ಒಂದು ಮತವನ್ನು ತಿರಸ್ಕರಿಸಲಾಯಿತು. ಮಧ್ಯರಾತ್ರಿ 1 ಗಂಟೆಯ ವೇಳೆ ಆಯೋಗ ಈ ನಿರ್ಧಾರವನ್ನು ತೆಗೆದುಕೊಂಡಿದ್ದರಿಂದ ಮತ ಎಣಿಕೆ ತಡವಾಗಿ ಆರಂಭವಾಗಿತ್ತು. ಕಾಂಡೆ ಅವರ ಮತವನ್ನು ತಿರಸ್ಕರಿಸಿದ ನಂತರ 284 ಮತಗಳನ್ನು ಮಾನ್ಯವೆಂದು ಪರಿಗಣಿಸಲಾಯಿತು.
ಬಿಜೆಪಿಯು ತನ್ನದೇ 106 ಶಾಸಕರನ್ನು ಹೊಂದಿದ್ದರೂ ತನ್ನ ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸಲು ಇನ್ನೂ 17 ಮತಗಳ ಅಗತ್ಯವಿತ್ತು. ಆಡಳಿತ ಪಕ್ಷದ 150 ಸದಸ್ಯರು(ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲಿನಲ್ಲಿರುವ ಎನ್‌ಸಿಪಿಯ ಶಾಸಕರಾದ ಅನಿಲ್ ದೇಶಮುಖ್, ನವಾಬ್ ಮಲಿಕ್ ಹೊರತು ಪಡಿಸಿ) ಇದ್ದರೂ ನಾಲ್ಕನೇಯ ಅಭ್ಯರ್ಥಿಯನ್ನು ಗೆಲ್ಲಿಸಲು ಕನಿಷ್ಠ 14 ಮತಗಳ ಅಗತ್ಯವಿತ್ತು. ಆದರೆ ಅಂತಿಮ ಮತ ಎಣಿಕೆಯ ವೇಳೆ ಸಣ್ಣ ಪಕ್ಷಗಳು ಮತ್ತು ಪಕ್ಷೇತರರಿಂದ ಕೇವಲ 12 ಮತಗಳನ್ನು ಮಾತ್ರ ಪಡೆಯಲು ಯಶಸ್ವಿಯಾಗಿತ್ತು.
ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಹೆಣೆದ ರಣತಂತ್ರ ಯಶಸ್ವಿಯಾಗಿದ್ದು, ಪಕ್ಷೇತರ ಶಾಸಕರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಈ ಫಲಿತಾಂಶ ಮಹಾರಾಷ್ಟ್ರ ಸರ್ಕಾರಕ್ಕೆ ಭಾರೀ ಹಿನ್ನಡೆಯಾಗಿದ್ದು ಬಿಜೆಪಿಗೆ ಸಿಕ್ಕಿದ ಬೂಸ್ಟರ್ ಡೋಸ್ ಎಂದು ವಿಶ್ಲೇಷಿಸಲಾಗುತ್ತಿದೆ.
Paid floral tributes to our great leader & inspiration Pt. Deendayal ji Upadhyaya at @BJP4Maharashtra office after victory in #RajyaSabhaElection2022 pic.twitter.com/AKWypN1AO9
— Devendra Fadnavis (@Dev_Fadnavis) June 11, 2022
ವಿಜಯದ ಬಳಿಕ ಪ್ರತಿಕ್ರಿಯಿಸಿದ ದೇವೇಂದ್ರ ಫಡ್ನಾವೀಸ್, ನಮ್ಮ ಗೆಲುವಿನ ಸರಣಿ ಪ್ರಾರಂಭವಾಗಿದೆ ಮತ್ತು ಅದು ಮುಂದುವರಿಯುತ್ತದೆ. ಇಬ್ಬರು ಶಾಸಕರಾದ ಲಕ್ಷ್ಮಣ್ ಜಗತಾಪ್ ಮತ್ತು ಮುಕ್ತಾ ತಿಲಕ್ ಅವರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರೂ ಅಂಬುಲೆನ್ಸ್‌ನಲ್ಲಿ ಬಂದು ಮತ ಹಾಕಿದ್ದಾರೆ. ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ತಿಳಿಸಿದರು.
ಚುನಾವಣಾ ಆಯೋಗ ನಮ್ಮ ಒಂದು ಮತವನ್ನು ಅಸಿಂಧುಗೊಳಿಸಿದೆ. ಎರಡು ಮತಗಳಿಗೆ ಆಕ್ಷೇಪಣೆ ಸಲ್ಲಿಸಿದರೂ ಆ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಚುನಾವಣಾ ಆಯೋಗವು ಬಿಜೆಪಿಗೆ ಒಲವು ತೋರಿದೆ ಎಂದು ರಾಜ್ಯಸಭಾ ಚುನಾವಣೆಯಲ್ಲಿ ಗೆದ್ದ ನಂತರ ಶಿವಸೇನೆಯ ಸಂಜಯ್ ರಾವತ್ ಪ್ರತಿಕ್ರಿಯಿಸಿದ್ದಾರೆ.