ಈ ಹಿಂದೆ ಫಸ್ಟ್ ರ‍್ಯಾಂಕ್ ರಾಜು ಎಂಬ ಚಿತ್ರದ ಮೂಲಕ ದೊಡ್ಡ ಮಟ್ಟದಲ್ಲಿ ಗೆದ್ದು ಬೀಗಿದ್ದವರು ನಟ ಗುರುನಂದನ್. ಅದರಲ್ಲಿ ಅವರು ನಿರ್ವಹಿಸಿದ್ದ ಪಾತ್ರ ಈ ಕ್ಷಣಕ್ಕೂ ಪ್ರೇಕ್ಷಕರನ್ನು ಆವರಿಸಿಕೊಂಡಿದೆ. ಇದೀಗ ಅದೇ ಗುರುನಂದನ್ `ರಾಜು ಜೇಮ್ಸ್ ಬಾಂಡ್’ ಚಿತ್ರದ ಮೂಲಕ ಮತ್ತೊಂದು ಭಿನ್ನ ಪಾತ್ರದಲ್ಲಿ ಪ್ರೇಕ್ಷಕರನ್ನು ಮುಖಾಮುಖಿಯಾಗಲು ತಯಾರಾಗಿದ್ದಾರೆ. ಈಗಾಗಲೇ ಹಾಡು ಮತ್ತು ಟ್ರೈಲರ್ ಮೂಲಕ ದೊಡ್ಡ ಮಟ್ಟದಲ್ಲಿಯೇ ನಿರೀಕ್ಷೆ ಮೂಡಿಸಿರುವ ಈ ಸಿನಿಮಾ ಶುಕ್ರವಾರ ಅಂದರೆ, ಫೆಬ್ರವರಿ 14ರಂದು ಅದ್ದೂರಿಯಾಗಿ ತೆರೆಗಾಣಲಿದೆ.
ಯುವ ನಿರ್ದೇಶಕ ದೀಪಕ್ ಮಧುವನಹಳ್ಳಿ ನಿರ್ದೇಶನದಲ್ಲಿ `ರಾಜು ಜೇಮ್ಸ್ ಬಾಂಡ್’ ಚಿತ್ರ ಮೂಡಿಬಂದಿದೆ. ಬೇರೆ ದೇಶದಲ್ಲಿ ನೆಲೆ ಕಂಡುಕೊಂಡಿದ್ದರೂ ಕನ್ನಡದ ಬಗ್ಗೆ ಕನ್ನಡ ಸಿನಿಮಾಗಳ ಬಗ್ಗೆ ಅತೀವ ಪ್ರೀತಿ ಹೊಂದಿರುವ ಕಿರಣ್ ಭರ್ತೂರ್ ಮತ್ತು ಮಂಜುನಾಥ್ ವಿಶ್ವಕರ್ಮ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕಥೆಯ ಹಂತದಿಂದ ಹಿಡಿದು, ಚಿತ್ರೀಕರಣದವರೆಗೆ ಎಲ್ಲವನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿ ಒಂದೊಳ್ಳೆ ಸಿನಿಮಾ ನಿರ್ಮಾಣ ಮಾಡಿದ ಖುಷಿ ನಿರ್ಮಾಪಕರಲ್ಲಿದೆ.ಇದನ್ನೂ ಓದಿ: ಪಿಎಲ್‍ಡಿ ಬ್ಯಾಂಕ್ ಚುನಾವಣೆ – ಪ್ರತಿಷ್ಠೆಯ ಕಣದಲ್ಲಿ ಸಂಸದ ಸುಧಾಕರ್ ಬೆಂಬಲಿಗರ ಜಯಭೇರಿ
Advertisement
Advertisement
ಇನ್ನುಳಿದಂತೆ ದೀಪಕ್ ಮಧುವನಹಳ್ಳಿ ಈ ಮೂಲಕ ಭಿನ್ನ ಬಗೆಯ, ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗಬಲ್ಲ ಸಿನಿಮಾ ಸಾರಥ್ಯ ವಹಿಸಿಕೊಂಡ ತೃಪ್ತ ಭಾವದಲ್ಲಿದ್ದಾರೆ. ನಾಯಕ ಗುರುನಂದನ್ ಪಾಲಿಗೂ ಚೆಂದದ ಪಾತ್ರ ಸಿಕ್ಕ ಖುಷಿ ಇದೆ. ಬ್ಯಾಂಕ್ ಮ್ಯಾನೇಜರ್ ಆಗೋ ಕನಸಿನ ಚುಂಗು ಹಿಡಿದು ಹೊರಡೋ ಸಾಮಾನ್ಯ ಹುಡುಗನೊಬ್ಬ ಆ ದಾರಿಯಲ್ಲಿ ಎದುರಿಸೋ ವಿಶಿಷ್ಟ ಸವಾಲುಗಳು, ಅದನ್ನೆಲ್ಲ ಮೀರಿಕೊಂಡು ಊರ ಮಂದಿಯ ಪಾಲಿಗೆ ಆತ ಹೇಗೆ ಜೇಮ್ಸ್ ಬಾಂಡ್ ಆಗುತ್ತಾನೆಂಬುದರ ಸುತ್ತಾ ಪಕ್ಕಾ ಮನೋರಂಜನೆಯ ಧಾಟಿಯಲ್ಲಿ ಈ ಸಿನಿಮಾ ಮೂಡಿ ಬಂದಿದೆಯಂತೆ.
Advertisement
Advertisement
ಈ ಹಿಂದೆ ಫಸ್ಟ್ ರ‍್ಯಾಂಕ್ ರಾಜು ಚಿತ್ರ ನೋಡಿ ಪರವಶಗೊಂಡವರೆಲ್ಲ ರಾಜು ಜೇಮ್ಸ್ ಬಾಂಡ್ ಚಿತ್ರಕ್ಕಾಗಿ ಸಹಜವಾಗಿಯೇ ಕಾತುರರಾಗಿದ್ದಾರೆ. ಬಹುತೇಕ ಎಲ್ಲ ವರ್ಗದ ಪ್ರೇಕ್ಷಕರೊಳಗೂ ಅಂಥಾದ್ದೊಂದು ಕೌತುಕ ಬೆರೆತ ಕಾತುರ ಇದ್ದೇ ಇದೆ.
ಈ ಸಿನಿಮಾದಲ್ಲಿ ಘಟಾನುಘಟಿ ಕಲಾವಿದರದ್ದೊಂದು ದಂಡೇ ಇದೆ. ಹುಬ್ಬಳ್ಳಿ ಹುಡುಗಿ ಮೃದುಲಾ ಪಟ್ಟಣಶೆಟ್ಟಿ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಸಾಧು ಕೋಕಿಲಾ, ಅಚ್ಯುತ್ ಕುಮಾರ್, ರವಿಶಂಕರ್, ಜೈಜಗದೀಶ್ ಮುಂತಾದವರಿಲ್ಲಿ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮನೋಹರ್ ಜೋಶಿ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ಅಮಿತ್ ಚವಳ್ಕರ್ ಸಂಕಲನ ಈ ಚಿತ್ರಕ್ಕಿದೆ. ಈಗಾಗಲೇ ಎಲ್ಲ ದಿಕ್ಕುಗಳಲ್ಲಿಯೂ ಕುತೂಹಲ ಮೂಡಿಸಿರುವ ರಾಜು ಜೇಮ್ಸ್ ಬಾಂಡ್ ಪ್ರೇಕ್ಷಕರ ಮುಂದೆ ಬರಲು ಕ್ಷಣಗಣನೆ ಶುರುವಾಗಿದೆ.ಇದನ್ನೂ ಓದಿ: ಸಿಮೆಂಟ್ ಲಾರಿ, ಬುಲೆರೋ ಮುಖಾಮುಖಿ ಡಿಕ್ಕಿ – ಬೆಂಕಿ ಹೊತ್ತಿಕೊಂಡು ಇಬ್ಬರು ಸಜೀವ ದಹನ