ಚೆನ್ನೈ: ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯಕ್ಕೆ ಬರುತ್ತಾರಾ? ಜಯಲಲಿತಾ ನಿಧನವಾದ ಬಳಿಕ ಎದ್ದ ಈ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಆದರೆ ಸೂಪರ್ ಸ್ಟಾರ್ ಅವರ ಆಪ್ತರ ಮತ್ತು ಜ್ಯೋತಿಷಿಗಳ ಪ್ರಕಾರ ರಜನೀಕಾಂತ್ ರಾಜಕೀಯಕ್ಕೆ ಬರುವುದು ಪಕ್ಕಾ ಅಂತೆ.
ರಾಜಕೀಯಕ್ಕೆ ಸೇರುವ ಬಗ್ಗೆ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಅಭಿಮಾನಿಗಳ ಹೊತೆ ಮಾತನಾಡಿದ ರಜನೀಕಾಂತ್ ಅವರ ಸ್ಪಷ್ಟೀಕರಣದ ಹೊರತಾಗಿಯೂ, ಸೂಪರ್ ಸ್ಟಾರ್ ಶೀಘ್ರದಲ್ಲೇ ರಾಜಕೀಯಕ್ಕೆ ಧುಮುಕುವುದು ಖಚಿತ ಎಂದು ಕೇರಳದ ಖ್ಯಾತ ಜ್ಯೋತಿಷಿ ಶೆಲ್ವಿಯವರು ಭವಿಷ್ಯ ನುಡಿದಿದ್ದಾರೆ.
Advertisement
ಸದ್ಯದಲ್ಲಿ ರಜನೀಕಾಂತ್ ಶನಿ ದಶಾದ ಮೂಲಕ ಹಾದು ಹೋಗುತ್ತಿದೆ. ಹಾಗಾಗಿ ರಾಜಕೀಯ ಪ್ರವೇಶದ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ, ಆದ್ರೆ ಮುಂಬರುವ ವರ್ಷಗಳಲ್ಲಿ ರಾಜಕಾರಣ ಪ್ರವೇಶಕ್ಕಾಗಿ ರಜನಿಯವರು ಚೆನ್ನಾಗಿ ಪ್ರಯತ್ನ ನಡೆಸಿದ್ದಾರೆ. ರಜನಿಕಾಂತ್ ಜಾತಕದಲ್ಲಿ ಶನಿದೆಸೆ ನಡೆಯುತ್ತಿದ್ರೂ ರಾಜಕಳೆ ಇದೆ ಎಂದು ಶೆಲ್ವಿ ಭವಿಷ್ಯ ಹೇಳಿದ್ದಾರೆ.
Advertisement
ಇತ್ತ ತಮಿಳುನಾಡು ರಾಜಕಾರಣಕ್ಕೆ ಸೂಪರ್‍ಸ್ಟಾರ್ ರಜನೀಕಾಂತ್ ಬಂದೇ ಬರ್ತಾರೆ ಅಂತಾ ಮೂಲಗಳು ತಿಳಿಸಿವೆ. ಯಾಕಂದ್ರೆ ತಮಿಳುನಾಡು ರಾಜಕೀಯದಲ್ಲಿ ಬಿಕ್ಕಟ್ಟು ಏರ್ಪಟ್ಟ ಸಮಯದಲ್ಲೇ ರಜನಿ ಅಭಿಮಾನಿಗಳೊಂದಿಗೆ ಸಂವಾದ ನಡೆಸುತ್ತಿದ್ದಾರೆ. ರಾಜಕಾರಣಕ್ಕೆ ಬರುವ ಮುನ್ನ ಅಭಿಮಾನಿಗಳ ಆಶೋತ್ತರವನ್ನ ಹತ್ತಿರದಿಂದ ಅರಿಯಲು ಈ ಸಂವಾದ ಮಾಡ್ತಿದ್ದಾರೆ ಅಂತಾ ಹೇಳ್ತಿದ್ದಾರೆ ರಾಜಕೀಯ ಪಂಡಿತರು.
Advertisement
ರಜನಿ ಆಪ್ತ ಗೆಳೆಯ ರಾಜ್‍ಬಹದ್ದೂರ್ ಕೂಡ ರಜನಿ ರಾಜಕೀಯಕ್ಕೆ ಬರ್ತಾರೆ ಅಂತಾ ಹೇಳಿದ್ದಾರೆ. ಆದ್ರೆ ಇದುವರೆಗೂ ರಜನಿ ಈ ಬಗ್ಗೆ ಸ್ಪಷ್ಟ ಹೇಳಿಕೆ ನೀಡಿಲ್ಲ.
Advertisement
ಇತ್ತೀಚೆಗಷ್ಟೇ ರಾಜಕೀಯ ಎಂಟ್ರಿ ಕೊಡೋ ಬಗ್ಗೆ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ್ದ ರಜನಿ, ಭವಿಷ್ಯದಲ್ಲಿ ದೇವರು ಬಯಸಿದ್ರೆ ರಾಜಕೀಯಕ್ಕೆ ಕಾಲಿಡುವ ಇಂಗಿತವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದರು. ಸದ್ಯಕ್ಕೆ ದೇವರು ನಟನಾಗಲು ಸೂಚಿಸಿದ್ದಾರೆ. ಮುಂದೇನಾಗುತ್ತದೆ ಎನ್ನುವುದು ಗೊತ್ತಿಲ್ಲ ಎಂದ ಅವರು ರಾಜಕೀಯ ಪಕ್ಷಗಳಿಗೆ ಸೇರ್ಪಡೆ ವದಂತಿಗಳನ್ನ ಅಲ್ಲಗೆಳೆದು, ಪಕ್ಷಗಳು ತಮ್ಮ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಆರೋಪಿಸಿದ್ದರು. ಅಷ್ಟೇ ಅಲ್ಲದೇ ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.
1996ರಲ್ಲಿ ತಮಿಳುನಾಡಿನಲ್ಲಿ ಜಯಲಲಿತಾ ವಿರುದ್ಧ ಪ್ರಚಾರ ನಡೆಸಿದ್ದನ್ನು ರಾಜಕೀಯ ಅಪಘಾತಕ್ಕೆ ಹೋಲಿಸಿದ ಅವರು, 21 ವರ್ಷಗಳ ಹಿಂದೆ ನಾನು ಮೈತ್ರಿಕೂಟಕ್ಕೆ ಬೆಂಬಲ ಸೂಚಿಸಿದ್ದು ನನ್ನ ದೊಡ್ಡ ತಪ್ಪು ನಿರ್ಧಾರ. ಈ ಘಟನೆಯಿಂದ ರಾಜಕೀಯ ಪಕ್ಷಗಳನ್ನು ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡವು. ಆದರೆ ಈಗ ರಾಜಕೀಯಕ್ಕೆ ಸೇರುವುದಿಲ್ಲ ಎಂದು ಸ್ಪಷ್ಟನೆ ನೀಡುತ್ತೇನೆ ಎಂದು ಅಭಿಮಾನಿಗಳಿಗೆ ತಿಳಿಸಿದ್ದರು.
ರಾಜಕೀಯಕ್ಕೆ ಸೇರುವ ಉದ್ದೇಶದಿಂದಲೇ ಬರೋಬ್ಬರಿ 9 ವರ್ಷಗಳ ಬಳಿಕ ರಜನಿಕಾಂತ್ ಅಭಿಮಾನಿಗಳ ಜೊತೆ ಸಂವಾದ ನಡೆಸಿದ್ದಾರೆ ಎನ್ನುವ ಮಾತುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹೀಗಾಗಿ ರಜನೀಕಾಂತ್ ರಾಜಕೀಯಕ್ಕೆ ಬರುತ್ತಾರಾ ಇಲ್ಲವೋ ಎನ್ನುವ ಪ್ರಶ್ನೆಗೆ ಮುಂದಿನ ಕೆಲ ದಿನಗಳಲ್ಲಿ ಸ್ಪಷ್ಟ ಉತ್ತರ ಸಿಗುವ ಸಾಧ್ಯತೆ ಇದೆ.