ಉಗ್ರರನ್ನು ಮಟ್ಟ ಹಾಕಲು ಸ್ಮಾರ್ಟ್ ಬೇಲಿ: ಏನಿದು ಸ್ಮಾರ್ಟ್ ಬೇಲಿ? ಹೇಗೆ ಕಾರ್ಯನಿರ್ವಹಿಸುತ್ತೆ?

Public TV
2 Min Read
SMART FENCE

ನವದೆಹಲಿ: ಪಾಕಿಸ್ತಾನ ಗಡಿಯಲ್ಲಿ ಉಗ್ರರ ಒಳನುಸುಳುವಿಕೆಗೆ ಸಂಪೂರ್ಣವಾಗಿ ಬ್ರೇಕ್ ಹಾಕುವ ಉದ್ದೇಶದೊಂದಿಗೆ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸುತ್ತಿರುವ ದೇಶದ ಮೊದಲ ಸ್ಮಾರ್ಟ್ ಬೇಲಿಯನ್ನು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದ್ದಾರೆ.

ಕಾಂಪ್ರಹೆನ್ಸೀವ್ ಇಂಟಗ್ರೇಟೆಡ್ ಬಾರ್ಡರ್ ಮ್ಯಾನೇಜ್‍ಮೆಂಟ್ ಸಿಸ್ಟಂ (ಸಿಐಬಿಎಂಎಸ್) ಹೆಸರಿನ ಈ ಪ್ರಾಯೋಗಿಕ ವ್ಯವಸ್ಥೆ ಭಾರತ ಮತ್ತು ಪಾಕಿಸ್ತಾನದ ಗಡಿಗಳಲ್ಲಿನ ತಲಾ 5 ಕಿಲೋ ಮೀಟರ್ ಉದ್ದದ 2 ಬೇಲಿಗಳು ಸೋಮವಾರ ಲೋಕಾರ್ಪಣೆಯಾಗಿದೆ. ಸುಮಾರು 5 ಕಿ.ಮೀ.ನ ಎರಡು ಸ್ಮಾರ್ಟ್ ಬೇಲಿಗಳನ್ನು ಸ್ಲೊವೇನಿಯಾದ ಕಂಪೆನಿ ಹಾಗೂ ಭಾರತದ ಕಂಪೆನಿಗಳು ಅಭಿವೃದ್ಧಿ ಪಡಿಸಿದೆ.

ಏನಿದು ಸ್ಮಾರ್ಟ್ ಬೇಲಿ?
ಸ್ಮಾರ್ಟ್ ಬೇಲಿ ಎಂದರೆ ತಂತ್ರಜ್ಞಾನ ಆಧಾರಿತ ಕಣ್ಗಾವಲು ವ್ಯವಸ್ಥೆಯಾಗಿದೆ. ಸದ್ಯ ಭಾರತವು ಪಾಕಿಸ್ತಾನ ನಡುವಿನ ನೂರಾರು ಕಿ.ಮೀ. ವ್ಯಾಪ್ತಿಯಲ್ಲಿ ಗಡಿಪ್ರದೇಶಗಳಲ್ಲಿ ತಂತಿ ಬೇಲಿಯನ್ನು ಬಳಸುತ್ತಿದೆ. ಅಲ್ಲದೇ ಇವುಗಳು ನೈಸರ್ಗಿಕ ವಿಕೋಪ ಹಾಗೂ ಇತರೆ ಕಾರಣಗಳಿಂದ ಹಾಳಾಗುತ್ತಲೇ ಇರುತ್ತವೆ. ಇದಲ್ಲದೇ ಇವುಗಳನ್ನು ಪದೇ ಪದೇ ನಿರ್ವಹಣೆ ಮಾಡಲೇಬೇಕಾಗುತ್ತದೆ. ಹೀಗಾಗಿ ಇಂತಹ ಪ್ರದೇಶಗಳಲ್ಲಿ ಮಳೆ-ಗಾಳಿ, ಬಿರುಗಾಳಿ, ಚಳಿ, ಹಿಮಪಾತ ಎನ್ನದೇ ಎಲ್ಲಾ ಋತುಮಾನಗಳಲ್ಲಿಯೂ ಎಚ್ಚರದಿಂದ ಕಣ್ಗಾವಲು ಇಡಲು ಭಾರತ ಕಂಡುಕೊಂಡಿರುವ ಮಾರ್ಗವೇ ಸ್ಮಾರ್ಟ್ ಫೆನ್ಸ್ ಅಥವಾ ತಂತ್ರಜ್ಞಾನ ಬೇಲಿ.

ಹೇಗೆ ಕಾರ್ಯನಿರ್ವಹಿಸುತ್ತದೆ?
ಈ ತಂತ್ರಜ್ಞಾನದಲ್ಲಿ ಸರ್ವೇಕ್ಷಣೆ, ಸಂಪರ್ಕ ಹಾಗೂ ದತ್ತಾಂಶ ಸಂಗ್ರಹಕ್ಕೆ ಬೇಕಾಗುವ ಎಲ್ಲಾ ಅಂಶಗಳನ್ನು ಈ ಸ್ಮಾರ್ಟ್ ಬೇಲಿಗಳು ಅಳವಡಿಸಿಕೊಂಡಿರುತ್ತದೆ. ಇದರ ಜೊತೆ ಎಂಟು ದಿಕ್ಕುಗಳಲ್ಲಿಯೂ ವ್ಯಕ್ತಿಗಳ ಚಲನೆ ಗ್ರಹಿಸುವ ವಿಕಿರಣ ಸಾಧನಗಳು, ಭೂಗತ ಸೆನ್ಸರ್ ಗಳು, ಫೈಬರ್ ಆಪ್ಟಿಕಲ್ ಸೆನ್ಸರ್, ರಾಡಾರ್, ಸೋನಾರ್, ಅಲಾರಾಂ ವ್ಯವಸ್ಥೆಯಂತಹ ಉಪಕರಣಗಳನ್ನು ಕಂಬಗಳಲ್ಲಿ ಅಳವಡಿಸಲಾಗುತ್ತದೆ. ಇದಲ್ಲದೇ ಸಿಸಿಟಿವಿ ಮೂಲಕ ಗಡಿ ಪ್ರದೇಶಗಳಲ್ಲಿನ ಚಲನವಲನವನ್ನು ಪತ್ತೆಮಾಡಬಹುದಾಗಿದೆ.

Capture 4

ಒಂದು ವೇಳೆ ಯಾರಾದರೂ ಬೇಲಿ ಬಳಿ ಅನುಮಾನಾಸ್ಪದ ಚಟುವಟಿಕೆಯಲ್ಲಿ ಕಂಡು ಬಂದರೆ, ಕೂಡಲೇ ಜಾಗೃತಗೊಳ್ಳುವ ಸೆನ್ಸರ್ ಗಳು ಸಿಸಿಟಿವಿಯ ಮೂಲಕ ಸಂಪೂರ್ಣ ಚಿತ್ರಣವನ್ನು ನಿರ್ದಿಷ್ಟ ಪಡಿಸಿರುವ ಬಿಎಸ್‍ಎಫ್ ಸೇನಾ ನೆಲೆಗಳಿಗೆ ರವಾನಿಸುತ್ತದೆ. ತಕ್ಷಣವೇ ಎಚ್ಚೆತ್ತುಕೊಳ್ಳುವ ಸೈನಿಕರು ನಿರ್ದಿಷ್ಟ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿ, ಉಗ್ರರ ಒಳನುಸುಳುವಿಕೆಯನ್ನು ತಡೆಯುತ್ತಾರೆ.

ಕೇಂದ್ರದ ಉದ್ದೇಶ ಏನು?
ಅಕ್ರಮ ನುಸುಳುಕೋರರು, ಮಾದಕ ವಸ್ತು ಸಾಗಾಣಿಕೆದಾರರು, ನಕಲಿ ನೋಟು ಜಾಲಗಳನ್ನು ನಡೆಸುವವರು ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಗಡಿಯನ್ನು ದಾಟಿ ಭಾರತವನ್ನು ಪ್ರವೇಶುತ್ತಿದ್ದಾರೆ. ಇವರನ್ನು ತಡೆಯಲು ಸಾಕಷ್ಟು ಕಠಿಣ ಕ್ರಮಗಳನ್ನು ಕೈಗೊಂಡರೂ ಪೂರ್ಣವಾಗಿ ಯಶಸ್ವಿಯಾಗಿಲ್ಲ. ಗಡಿ ಬೇಲಿ ಹಾಕಿದ್ದರೂ ಉಗ್ರರು ಭೂಮಿಯ ಅಡಿಯಲ್ಲೇ ಭೂಗತ ಸುರಂಗಗಳನ್ನು ಕೊರೆದು ಭಾರತವನ್ನು ಪ್ರವೇಶಿಸುತ್ತಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ಅಷ್ಟೇ ಅಲ್ಲದೇ ನದಿ ಹರಿವು ಹೆಚ್ಚಾಗಿರುವ ಪ್ರದೇಶಗಳಲ್ಲಿ ತಂತಿ ಬೇಲಿಯನ್ನು ನಿರ್ಮಿಸಲು ಸಾಧ್ಯವಿಲ್ಲ. ಈ ಪ್ರದೇಶಗಳಲ್ಲಿ ಯೋಧರು ದೋಣಿಗಳಲ್ಲಿ ಗಸ್ತು ತಿರುಗುವ ಮೂಲಕ ನಿಗಾ ವಹಿಸುತ್ತಿದ್ದಾರೆ. ಹೀಗಾಗಿ ಕುಳಿತ ಸ್ಥಳದಿಂದಲೇ ಆ ಪ್ರದೇಶದ ಮೇಲೆ ನಿಗಾ ಇಡಲು ಕೇಂದ್ರ ಸರ್ಕಾರ ಸ್ಮಾರ್ಟ್ ಬೇಲಿಯ ನಿರ್ಮಾಣಕ್ಕೆ ಕೈ ಹಾಕಿದೆ.

ಅಕ್ರಮ ನುಸುಳುಕೋರರನ್ನು ಮತ್ತು ಗಡಿ ದಾಟಿ ಬರುವ ಉಗ್ರರನ್ನು ಸಂಪೂರ್ಣ ಮಟ್ಟ ಹಾಕುತ್ತೇವೆ ಎಂದಿರುವ ಕೇಂದ್ರ ಸರ್ಕಾರ ಭಾರತ ಮತ್ತು ಬಾಂಗ್ಲಾ ಗಡಿಯಲ್ಲಿ ಒಟ್ಟು 2,400 ಕಿ.ಮೀ ಉದ್ದದ ಈ ಸ್ಮಾರ್ಟ್ ಬೇಲಿ ಅಳವಡಿಸುವುದಾಗಿ ಹೇಳಿಕೊಂಡಿದೆ. ಸಿಐಬಿಎಂಎಸ್ ಹೆಸರಿನ ಈ ಪ್ರಾಯೋಗಿಕ ವ್ಯವಸ್ಥೆ ಬ್ರಹ್ಮಪುತ್ರ ನದಿ ತೀರದ ಧುಬ್ರಿಯಲ್ಲಿನ ಗಡಿಭಾಗದ ಅಳವಡಿಸಲಾಗಿದೆ ಎಂದು ಗಡಿ ಭದ್ರತಾ ಪಡೆ ತಿಳಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *