ಬೆಂಗಳೂರು: ಅಮೆರಿಕದಿಂದ ಬಂದ ಟೆಕ್ಕಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಐಸೋಲೇಷನ್ ವಾರ್ಡ್‍ನಲ್ಲಿ ಕೆಲಸ ಮಾಡುತ್ತಿರುವ ವೈದ್ಯರ ತಂಡ ಆತಂಕದಲ್ಲಿದೆ.
ಇಷ್ಟು ದಿನ ಟ್ರಿಪಲ್ ಲೇಯರ್ ಮಾಸ್ಕ್ ಹಾಕಿಕೊಂಡು ಪ್ರಾಥಮಿಕ ಪರೀಕ್ಷೆ ಮಾಡುತ್ತಿದ್ದ ವೈದ್ಯರ ತಂಡ ಎನ್ 95 ಮಾಸ್ಕ್ ಬಳಸುತ್ತಿದ್ದಾರೆ. ಜೊತೆಗೆ ಐಸೋಲೇಷನ್ ವಾರ್ಡಿನಲ್ಲಿ ಕೆಲಸ ಮಾಡುವ ಎಲ್ಲರಿಗೂ ಎನ್ 95 ಮಾಸ್ಕ್ ಬಳಸುವಂತೆ ತಿಳಿಸಿದ್ದಾರೆ.
ಪ್ರತಿ ಒಂದು ಗಂಟೆಗೆ ಐಸೋಲೇಷನ್ ವಾರ್ಡ್‍ಗೆ ಕ್ರಿಮಿನಾಶಕ ಬಳಸಿ ಸ್ವಚ್ಚತೆ ಮಾಡುವಂತೆ ಸೂಚಿಸಿದ್ದಾರೆ. ಐಸೋಲೇಷನ್ ವಾರ್ಡ್‍ನಲ್ಲಿ 5 ಜನ ಸೋಂಕು ಶಂಕಿತರು ಇದ್ದು ಇದರಲ್ಲಿ ಈಗಾಗಲೇ ಒಬ್ಬರಿಗೆ ಪಾಸಿಟಿವ್ ಇರುವುದು ದೃಢವಾಗಿತ್ತು. ಟೆಕ್ಕಿಯ ಸ್ನೇಹಿತನಿಗೂ ಪಾಸಿಟಿವ್ ಇರುವುದು ಪಕ್ಕಾ ಆಗಿದ್ದು, ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಈ ಇಬ್ಬರು ಸೋಂಕಿತರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಉಳಿದ ಮೂವರನ್ನು ಬೇರೆ ಬೇರೆ ವಾರ್ಡ್‍ಗಳಲ್ಲಿ ದಾಖಲು ಮಾಡಿಕೊಂಡಿದ್ದಾರೆ. ಕೊರೊನಾ ಈಗ ವೈದ್ಯರಿಗೂ ಆತಂಕ ಉಂಟು ಮಾಡಿದೆ.
ಕರ್ನಾಟಕದಲ್ಲಿ ಇದುವರೆಗೆ 4 ವ್ಯಕ್ತಿಗಳಲ್ಲಿ #COVID19 ಸೋಂಕು ದೃಢಪಟ್ಟಿದ್ದು, ಅವರನ್ನು ಹಾಗೂ ಅವರ ಕುಟುಂಬ ಸದಸ್ಯರನ್ನು ಪ್ರತ್ಯೇಕವಾಗಿರಿಸಿ ಅವರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ. ನಾಗರಿಕರು ಮುಂಜಾಗೃತ ಕ್ರಮ ವಹಿಸಿ ಸೋಂಕು ಹರಡದಂತೆ ಸಹಕರಿಸಬೇಕು ಎಂದು ಕೋರುತ್ತೇನೆ #CoronavirusOutbreak
— B Sriramulu (@sriramulubjp) March 10, 2020
ಮಹಾಮಾರಿ ಕೊರೊನಾ ವೈರಸ್ ದಿನೇ ದಿನೇ ಜನರಲ್ಲಿ ಭಯವನ್ನ ಹೆಚ್ಚು ಮಾಡ್ತಿದೆ. ಈಗಾಗಲೇ ಕರ್ನಾಟಕದಲ್ಲಿ 4 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅವರು ಟ್ವೀಟ್ ಮಾಡಿ ಸ್ಪಷ್ಟಪಡಿಸಿದರು. ಹಾಗೆಯೇ ಬೆಂಗಳೂರಿನಲ್ಲಿ ಮೂರು ಕೊರೊನಾ ಪಾಸಿಟಿವ್ ಕೇಸ್‍ಗಳು ವರದಿಯಾಗಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.