Connect with us

Bengaluru City

ಕಾಳನಿಗೂ, ಕಾವೇರಿಗೂ ಎಲ್ಲಿಯ ಎತ್ತಣದ ಸಂಬಂಧ? ಪ್ರಕಾಶ್ ರೈ ಜಸ್ಟ್ ಆಸ್ಕಿಂಗ್!

Published

on

ಬೆಂಗಳೂರು: ತಮಿಳು ನಟ ರಜಿನಿಕಾಂತ್ ಅಭಿನಯನದ ಕಾಳಾ ಚಿತ್ರ ಪ್ರದರ್ಶನಕ್ಕೆ ಕನ್ನಡ ಸಂಘಟನೆಗಳು ನಿರ್ಬಂಧ ಹಾಕಿವೆ. ಈ ಕುರಿತು ನಟ ಪ್ರಕಾಶ್ ರೈ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾವೇರಿ ಮಂಡಳಿ ಸ್ಥಾಪಿಸುವ ಕುರಿತು ನಟ ರಜಿನಿಕಾಂತ್ ತಮಿಳುನಾಡಿನ ಪರವಾಗಿ ಹೇಳಿಕೆ ನೀಡಿದ್ದರು. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಕಾಳಾ ಚಿತ್ರವನ್ನು ಕರ್ನಾಟಕದಲ್ಲಿ ಪ್ರದರ್ಶನ ಮಾಡದಂತೆ ಕನ್ನಡ ಸಂಘಟನೆಗಳು ನಿರ್ಬಂಧ ವಿಧಿಸಿವೆ.

ಈ ಕುರಿತಂತೆ ನಟ ಪ್ರಕಾಶ್ ರೈ ತಮ್ಮ ಟ್ವಿಟ್ಟರ್ ನಲ್ಲಿ, ಕಾಳಾ ಚಿತ್ರ ಏನು? ಕಾವೇರಿ ಗಲಾಟೆಗೂ ಇದಕ್ಕೆ ಏನು ಸಂಬಂಧ? ಕಾಳಾ ಚಿತ್ರವನ್ನೇ ಏಕೆ ಗುರಿಯಾಗಿಸುತ್ತಿದ್ದಾರೆ?. ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರಗಳು ರಾಜ್ಯದಲ್ಲಿ ಕೆಲವರಿಗೆ ಕಾನೂನನ್ನು ಉಲ್ಲಂಘಿಸಲು ಅಧಿಕಾರ ನೀಡುತ್ತಿದೆ. ಪದ್ಮಾವತ್ ಚಿತ್ರ ಬಿಡುಗಡೆಯ ಸಂದರ್ಭದಲ್ಲಿ ಬಿಜೆಪಿ ಇದೆ ರೀತಿ ಮಾಡಿತ್ತು. ಈ ವಿಚಾರವನ್ನು ಜನಸಾಮಾನ್ಯರಿಗೆ ಬಿಡಿ, ಅವರೇ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ನಾವು ಕೇವಲ ನಟನೊಬ್ಬನ ಹೇಳಿಕೆಯನ್ನೇ ತೆಗೆದುಕೊಂಡು ಚಿತ್ರ ನಿರ್ಬಂಧಕ್ಕೆ ಯೋಚಿಸಬಾರದು. ಒಂದು ಚಿತ್ರ ನಿರ್ಮಾಣಕ್ಕೆ ನೂರಾರು ತಂತ್ರಜ್ಞರು, ಸಹಕಲಾವಿದರು, ಸಾವಿರಾರು ಕಾರ್ಮಿಕರು ಶ್ರಮವಹಿಸಿ ಸಿನಿಮಾ ನಿರ್ಮಾಣ ಮಾಡುತ್ತಾರೆ. ಅಲ್ಲದೇ ನಿರ್ಮಾಪಕರು ಚಿತ್ರಕ್ಕೆ ಕೋಟ್ಯಾಂತರ ರೂಪಾಯಿ ಹಣ ಹೂಡಿರುತ್ತಾರೆ. ಪ್ರದರ್ಶನಕ್ಕೆ ತಡೆ ನೀಡಿದಾಗ ನಿರ್ಮಾಪಕರ ಗತಿ ಏನು? ಹಂಚಿಕೆದಾರರು, ಥೀಯೇಟರ್ ಮಾಲೀಕರನ್ನು ನಂಬಿ ದುಡಿಯುವ ಅನೇಕ ಕಾರ್ಮಿಕರ ಗತಿ ಏನು? ನಾವು ಅದರ ಕುರಿತು ಯೋಚನೆ ಮಾಡಬೇಕಾಗುತ್ತದೆ ಎಂದು ಹೇಳಿದರು.

ಚಿತ್ರ ನಿರ್ಬಂಧ ಮಾಡದೇ ಪ್ರದರ್ಶನಕ್ಕೆ ಅವಕಾಶ ಕೊಡಬೇಕು, ಜನರೇ ಚಿತ್ರ ನೋಡದೆ ಇದ್ದಾಗ ಅವರ ವಿರೋಧ ಸ್ಪಷ್ಟವಾಗುತ್ತದೆ. ಈ ರೀತಿ ಹೋರಾಟ ನಡೆಸದೆ ಯಾರೋ ಕೆಲವರು ಕನ್ನಡಿಗರಿಗೆ ಏನು ಬೇಕು, ಬೇಡ ಎಂದು ನಿರ್ಧಾರಕ್ಕೆ ಬರುವುದು ಯಾವ ನ್ಯಾಯ? ಇದು ಜನಸಾಮಾನ್ಯರ ಹೋರಾಟವಾಗಿಲ್ಲ. ಕೇವಲ ತಮ್ಮ ಸ್ವಾರ್ಥಕ್ಕಾಗಿ ಹೋರಾಟಗಳನ್ನು ಮಾಡುತ್ತಾ, ಗಲಾಟೆ, ದೊಂಬಿ, ಆಸ್ತಿ-ಪಾಸ್ತಿಗಳನ್ನು ನಷ್ಟಮಾಡಿ ಜನಸಾಮಾನ್ಯರಿಗೆ ತೊಂದರೆ ಕೊಡುತ್ತಿದ್ದಾರೆಯೇ ಹೊರತು ಸಮಸ್ಯೆಗಳಿಗೆ ಪರಿಹಾರ ಮಾಡುವ ನಿರ್ಧಾರಕ್ಕೆ ಯಾರೂ ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಹಿರಿಯ ಅಧಿಕಾರಿಗಳು, ತಜ್ಞರು ಸಮಸ್ಯೆ ಬಗೆಹರಿಸುವ ಕುರಿತು ನಿರ್ಧಾರ ಕೈಗೊಳ್ಳಬೇಕು, ಆದರೆ ರಾಜಕೀಯ ಕಾರಣಗಳು, ಒತ್ತಡಗಳಿಗೆ ಮಣಿದು ಅವರೇ ಮೌನವಹಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಮ್ಮ ಸ್ವಾರ್ಥಕ್ಕಾಗಿ ಇದನ್ನು ಬಳಸಿಕೊಳ್ಳುತ್ತಿರುವುದು ವಿಷಾದದ ಸಂಗತಿಯಾಗಿದೆ ಅಂತಾ ಹೇಳಿದ್ದಾರೆ.

ಈ ನನ್ನ ಹೇಳಿಕೆಯನ್ನು ಕೆಲವರು ವಿರೋಧಿಸಿ ನನ್ನನ್ನು ಕನ್ನಡ ದ್ರೋಹಿ ಎಂದು ಪಟ್ಟಕಟ್ಟಿದ್ರೂ ಆಶ್ಚರ್ಯಪಡಬೇಕಾಗಿಲ್ಲ. ಇತ್ತೀಚೆಗೆ ಪ್ರಶ್ನಿಸಿದ್ದಕ್ಕೆ ಕೆಲವರು ನನ್ನನ್ನು ದೇಶದ್ರೋಹಿ ಎಂದು ಪಟ್ಟಕಟ್ಟಿದ್ದರು. ಏನೇ ಆದರೂ ನಾನು ಏನು ಹೇಳಬೇಕೋ ಅದನ್ನೇ ಹೇಳಿಯೇ ತಿರುತ್ತೇನೆ. ಉಳಿದದ್ದು ನಿಮ್ಮ ವಿವೇಚನಕೆಗೆ ಬಿಟ್ಟಿದ್ದು ಎಂದು ಬರೆದುಕೊಂಡಿದ್ದಾರೆ.

Click to comment

Leave a Reply

Your email address will not be published. Required fields are marked *