ಚೆನ್ನೈ: ಬಹುಮತ ಸಾಬೀತು ಪಡಿಸದೇ ಬಿ.ಎಸ್.ಯಡಿಯೂರಪ್ಪ ಅವರು ರಾಜೀನಾಮೆ ನೀಡಿರುವುದು ಪ್ರಜಾಪ್ರಭುತ್ವಕ್ಕೆ ಸಿಕ್ಕ ವಿಜಯವಾಗಿದೆ ಎಂದು ಚಿತ್ರನಟ ರಜನಿಕಾಂತ್ ಹೇಳಿದ್ದಾರೆ.
ಮಕ್ಕಳಂ ಮದ್ರಂ ಸಂಘಟನೆಯ ಮಹಿಳಾ ಘಟಕದ ಸಭೆಯಲ್ಲಿ ಭಾಗವಹಿಸಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ಬಹುಮತ ಸಾಬೀತುಪಡಿಸಲು ಬಿಜೆಪಿಗೆ 15 ದಿನ ಕಾಲಾವಕಾಶ ನೀಡಿದ್ದು ಸೂಕ್ತ ಕ್ರಮವಲ್ಲ. ಕರ್ನಾಟಕ ರಾಜಕೀಯದಲ್ಲಿ ಮಧ್ಯ ಪ್ರವೇಶಿಸಿದ ಸುಪ್ರೀಂ ಕೋರ್ಟ್ ರಾಜ್ಯಪಾಲರ ನಡೆಯನ್ನು ಬದಿಗಿಟ್ಟು, ನ್ಯಾಯ ದೊರಕಿಸಿಕೊಟ್ಟಿದ್ದಕ್ಕೆ ಧನ್ಯವಾದ ಎಂದು ತಿಳಿಸಿದರು.
What happened in #Karnataka yesterday was a win for democracy. BJP asking for some more time & Governor giving 15 days time was a mockery of democracy. I would like to thank Supreme Court for its order, which upheld the democracy: Rajinikanth in Chennai. pic.twitter.com/n7TEHIsGtJ
— ANI (@ANI) May 20, 2018
ಕಾವೇರಿ ನೀರು ಹರಿಸಿ:
ಕರ್ನಾಟಕದಲ್ಲಿ ಯಾವುದೇ ಪಕ್ಷ ಆಡಳಿತಕ್ಕೆ ಬಂದರೂ ಸರಿ, ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ ನಿರ್ದೇಶನವನ್ನು ಅನುಷ್ಟಾನಕ್ಕೆ ತರಬೇಕು. ಕೋರ್ಟ್ ಸ್ಪಷ್ಟ ಆದೇಶ ನೀಡಿದ್ದು, ನಿರ್ವಹಣಾ ಮಂಡಳಿ ಅಥವಾ ಪ್ರಾಧಿಕಾರವೆಂಬ ತಾಂತ್ರಿಕ ಚೌಕಟ್ಟನ್ನು ಪ್ರದರ್ಶಿಸಬಾರದು ಎಂದು ಅವರು ಹೇಳಿದರು.
ಮಹಿಳೆಯರು ಇರುವ ಕಡೆಗೆ ಗೆಲುವು ಇರುತ್ತದೆ ಎಂದ ಹೇಳಿದರು. ಈ ವೇಳೆ ಪತ್ರಕರ್ತರೊಬ್ಬರು, ನೀವು ಕಮಲ್ ಹಾಸನ್ ಅವರ ಮಕ್ಕಳ ನೀದಿ ಮಯ್ಯಂ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳುತ್ತಿರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.
ಕಳೆದ ಎರಡು ವಾರಗಳಿಂದ ರಜನಿಕಾಂತ್ ಅವರು ಮಕ್ಕಳಂ ಮದ್ರಂ ಮಹಿಳಾ ಘಟಕದ ಜಿಲ್ಲಾ ಕಾರ್ಯದರ್ಶಿಗಳು ಹಾಗೂ ಯುವಜನರೊಂದಿಕೆ ಸಭೆ ನಡೆಸಿದ್ದಾರೆ.