ತಮ್ಮನ ಸಾವು, ಅಪ್ಪ ಇನ್ನೊಂದು ಮದ್ವೆಯಾಗಿಬಿಡ್ತಾರೆಂದು ನವಜಾತ ಗಂಡುಮಗುವನ್ನ ಅಪಹರಿಸಿದ ಸಹೋದರಿಯರು!

Public TV
2 Min Read
sisters baby

ಲಕ್ನೋ: ರಾಜಸ್ಥಾನದ ಭರತ್‍ಪುರ್‍ನ ಸರ್ಕಾರಿ ಆಸ್ಪತ್ರೆಯಿಂದ ನವಜಾತ ಶಿಶುವನ್ನ ಕಳ್ಳತನ ಮಾಡಿದ ಆರೋಪದ ಮೇಲೆ ಉತ್ತರಪ್ರದೇಶದ ಮಥುರಾ ಜಿಲ್ಲೆಯಲ್ಲಿ ಪೊಲೀಸರು ಇಬ್ಬರು ಮಹಿಳೆಯರನ್ನ ಬಂಧಿಸಿದ್ದಾರೆ.

ಮಹಿಳೆಯರು ಕಳ್ಳತನ ಮಾಡಿ ಮೂರು ದಿನಗಳ ಬಳಿಕ ಫೀಡಿಂಗ್ ಬಾಟಲ್ ಮತ್ತು ಒಂದು ಪತ್ರದ ಜೊತೆಗೆ ಮಗುವನ್ನ ರಸ್ತೆ ಬದಿಯಲ್ಲಿ ಬಿಟ್ಟುಹೋಗಿದ್ದರೆಂದು ವರದಿಯಾಗಿದೆ. ಆರೋಪಿಗಳನ್ನ ಶಿವಾನಿ ದೇವಿ(23) ಹಾಗೂ ಪ್ರಿಯಾಂಕಾ ದೇವಿ(20) ಎಂದು ಗುರುತಿಸಲಾಗಿದೆ. ತಮ್ಮ 12 ವರ್ಷದ ಸಹೋದರ 2 ವರ್ಷಗಳ ಹಿಂದೆ ಮೃತಪಟ್ಟಿದ್ದ. ಹೀಗಾಗಿ ತಂದೆ ಎರಡನೇ ಮದುವೆಯಾಗಲು ಮುಂದಾಗಿದ್ದು, ಇದರಿಂದ ನಮ್ಮ ತಾಯಿ ಖಿನ್ನತೆಗೆ ಒಳಗಾಗಿದ್ದರು. ಹೀಗಾಗಿ ಗಂಡು ಮಗುವೊಂದನ್ನ ಉಡುಗೊರೆಯಾಗಿ ನೀಡಬೇಕೆಂದಿದ್ದೆವು ಎಂದು ಆರೋಪಿಗಳು ಪೊಲೀಸರ ಬಳಿ ಹೇಳಿದ್ದಾರೆ.

baby 4

 

ಜನವರಿ 10ರಂದು ಮಹಿಳೆಯರು ಮಗುವನ್ನ ಕಳ್ಳತನ ಮಾಡಿದ್ದರು. ಆದ್ರೆ ಪೊಲೀಸರು ಆರೋಪಿಗಳಿಗಾಗಿ ಹುಡುಕುತ್ತಿದ್ದಾರೆ ಎಂದು ದಿನಪತ್ರಿಕೆಯಲ್ಲಿ ಓದಿದ ನಂತರ ಭಯಗೊಂಡಿದ್ದರು. ಹೀಗಾಗಿ ಜನವರಿ 13ರಂದು, ಈ ಮಗುವನ್ನ ಪತ್ತೆ ಮಾಡಿದವರು ಜನವರಿ 10ರಂದು ಮಗು ಕಳ್ಳತನವಾಗಿತ್ತು ಎಂದು ಪೊಲೀಸರಿಗೆ ತಿಳಿಸಿ ಎಂದು ಕಾಗದದಲ್ಲಿ ಬರೆದು ರಾರಾಹ್ ಗ್ರಾಮದ ಬಳಿ ಮಗುವನ್ನ ಬಿಟ್ಟುಹೋಗಿದ್ದರು.

ಆಸ್ಪತ್ರೆಯ ಸಿಸಿಟಿವಿ ದೃಶ್ಯವಳಿಗಳ ಆಧಾರದ ಮೇಲೆ ಸಹೋದರಿಯರನ್ನ ಗುರುತಿಸಲಾಯ್ತು. ಇಬ್ಬರೂ ಸಹೋದರಿಯರು ಸ್ಕೂಟರ್‍ನಲ್ಲಿ ಬಂದಿದ್ದರು. ಆಸ್ಪತ್ರೆಯ ಪಾರ್ಕಿಂಗ್ ಸ್ಥಳದಲ್ಲಿ ಇದ್ದ ವ್ಯಕ್ತಿ ವಾಹನದ ನೋಂದಣಿ ಸಂಖ್ಯೆಯನ್ನು ನೆನಪಿಟ್ಟುಕೊಂಡಿದ್ದರು. ನಾವು ಯುವತಿಯರನ್ನ ಅವರ ಸ್ವಗ್ರಾಮವಾದ ಮಥುರಾದ ಸ್ವರೂಪ ನೌಗಾಂವ್‍ನಿಂದ ಬಂಧಿಸಿದ್ದೇವೆ. ಐಪಿಸಿ ಸೆಕ್ಷನ್ 363ರ ಅಡಿ ಪ್ರಕರಣ ದಾಖಲಿಸಿದ್ದೇವೆ ಎಂದು ಭರತ್‍ಪುರ್ ಎಸ್‍ಪಿ ಅನಿಲ್ ಕುಮಾರ್ ಹೇಳಿದ್ದಾರೆ.

baby 1 1

ಮಹಿಳೆಯರು ಭರತ್‍ಪುರ್‍ನಲ್ಲಿ ಹುಡುಕಾಡಿ 30 ವರ್ಷದ ಮನೀಷ್ ಎಂಬವರ ಮಗನನ್ನ ಟಾರ್ಗೆಟ್ ಮಾಡಿದ್ದರು. ಮನೀಷ್ ಪತ್ನಿ ಜನವರಿ 10ರಂದು ಮುಂಜಾನೆ ಸುಮಾರು 4 ಗಂಟೆ ವೇಳೆಗೆ ಪಹಾರಿ ಟೌನ್ ಹತ್ತಿರದ ಆರೋಗ್ಯ ಕೇಂದ್ರದಲ್ಲಿ ಮಗುವಿಗೆ ಜನ್ಮ ನೀಡಿದ್ದರು. ಹೆಚ್ಚಿನ ಆರೈಕೆಗೆ ತಾಯಿ-ಮಗುವನ್ನ ಮಥುರಾ ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಮಧ್ಯಾಹ್ನ 2.30ರ ವೇಳೆಯಲ್ಲಿ ತಾಯಿ ಮಲಗಿದ್ದ ವೇಳೆ ಮಹಿಳೆಯರು ಮಗುವನ್ನ ಕಳ್ಳತನ ಮಾಡಿದ್ದರು. ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿತ್ತು. ಮನೀಷ್ ಅವರ ಮಾವ ಸಾಧಿಕ್ ಮೇವ್ ಈ ಬಗ್ಗೆ ದೂರು ದಾಕಲಿಸಿದ್ದರು.

Indian wedding Delhi

ಮಹಿಳೆಯರು ಮೊದಲಿಗೆ ಮಗುವನ್ನ ದತ್ತು ತೆಗೆದುಕೊಳ್ಳಬೇಕು ಎಂದುಕೊಂಡಿದ್ದರು. ಆ ಮೂಲಕ ತನ್ನ ತಂದೆ ಲಕ್ಷ್ಮಣ್ ಸಿಂಗ್ ಗಂಡು ಮಗುವಿಗಾಗಿ ಮತ್ತೊಂದು ಮದುವೆಯಾಗೋದನ್ನ ತಡೆಯಬಹುದು ಎಂದುಕೊಂಡಿದ್ದರು. ಇದಕ್ಕಾಗಿ ಬಡವರಿಂದ ಯಾವುದಾದ್ರೂ ಮಗುವನ್ನ ಕೊಂಡುಕೊಳ್ಳಬಹುದಾ ಎಂದು ಹಲವು ಅಸ್ಪತ್ರೆಗಳಲ್ಲಿ ನರ್ಸ್‍ಗಳನ್ನ ವಿಚಾರಿಸಿದ್ದರು. ಆದ್ರೆ ದತ್ತು ಪಡೆಯಲು ದೀರ್ಘವಾದ ಕಾನೂನು ಪ್ರಕ್ರಿಯೆ, ಕಠಿಣವಾದ ನಿಯಮಗಳು ಹಾಗೂ ಮಗು ಮಾರಾಟಕ್ಕೆ ಶಿಕ್ಷೆ ಈ ಎಲ್ಲವನ್ನೂ ಮನಗಂಡು ದತ್ತು ತೆಗೆದುಕೊಳ್ಳೋ ಯೋಚನೆಯನ್ನ ಕೈಬಿಟ್ಟಿದ್ದರು ಎಂದು ಅನಿಲ್ ಕುಮಾರ್ ಹೇಳಿದ್ದಾರೆ.

ಆರೋಪಿ ಶಿವಾನಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ತನ್ನ ಪತಿಯೊಂದಿಗೆ ವಾಸವಿದ್ದಾಳೆ. ಮತ್ತೋರ್ವ ಆರೋಪಿ ಪ್ರಿಯಾಂಕಾ ಕೂಡ ಮದುವೆಯಾಗಿದ್ದು, ಆಗ್ರಾದಲ್ಲಿ ವಾಸವಿದ್ದಾಳೆ. ಪದವಿ ವ್ಯಾಸಂಗ ಮಾಡುತ್ತಿದ್ದಾಳೆ ಎಂದು ವರದಿಯಾಗಿದೆ.

babyfeet

Share This Article
Leave a Comment

Leave a Reply

Your email address will not be published. Required fields are marked *