ಜೈಪುರ: ಟ್ರೈನಿಂಗ್ ವೇಳೆ ನಾಗಿಣಿ ಡ್ಯಾನ್ಸ್ ಮಾಡಿದ ಟೀಚರ್ ಒಬ್ಬರನ್ನು ಅಲ್ಲಿನ ಜಿಲ್ಲಾಡಳಿತ ಅಮಾನತು ಮಾಡಿರುವ ಘಟನೆ ರಾಜಸ್ಥಾನದ ಜಲೋರೆಯಲ್ಲಿ ನಡೆದಿದೆ.
ಈ ಘಟನೆ ನಡೆದಿರುವುದು 10 ದಿನಗಳ ಹಿಂದೆ. ಮೂವರು ಶಿಕ್ಷಕರು ನಾಗಿಣಿ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಎಚ್ಚೆತ್ತ ಜಿಲ್ಲಾಡಳಿತ ಆ ಮೂವರಲ್ಲಿ ಒಬ್ಬರನ್ನು ಅಮಾನತು ಮಾಡಿ ಉಳಿದ ಇಬ್ಬರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ತರಬೇತಿ ಎಂದು ಬಂದಿರುವ ಶಿಕ್ಷಕರು ಊಟದ ಬಿಡುವಿನ ವೇಳೆ ಒಂದು ಕೊಠಡಿಯಲ್ಲಿ ಕುಳಿತುಕೊಂಡು ನಾಗಿಣಿ ಸಾಂಗ್ ಹಾಕಿಕೊಂಡು ಡ್ಯಾನ್ಸ್ ಮಾಡಿದ್ದಾರೆ. ಒಬ್ಬರು ಮಹಿಳಾ ಶಿಕ್ಷಕಿ ಮತ್ತು ಇಬ್ಬರು ಶಿಕ್ಷಕರು ಸೇರಿ ಕರ್ಚಿಫ್ ಹಿಡಿದು ಮಾಡಿರುವ ನೃತ್ಯವನ್ನು ಅಲ್ಲಿ ಕುಳಿತ ಉಳಿದ ಶಿಕ್ಷಕರು ತಮ್ಮ ಮೊಬೈಲ್ ಫೋನಿನಲ್ಲಿ ವಿಡಿಯೋ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಈ ವಿಚಾರದ ಬಗ್ಗೆ ಮಾತನಾಡಿರುವ ಜಲೋರೆ ಜಿಲ್ಲೆಯ ಶಿಕ್ಷಣ ಅಧಿಕಾರಿ ಅಶೋಕ್ ರೋಶ್ವಾಲ್, ಡ್ಯಾನ್ಸ್ ಪಾರ್ಟಿ ಆಯೋಜನೆ ಮಾಡಿದ ಒಬ್ಬರು ಶಿಕ್ಷಕರನ್ನು ನಾವು ಅಮಾನತು ಮಾಡಿದ್ದೇವೆ. ಇನ್ನುಳಿದ ಇಬ್ಬರು ಶಿಕ್ಷಕರು ಹೊಸಬರು ಆದ ಕಾರಣ ಅವರಿಗೆ ನಿಯಮದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದ ಕಾರಣ ಅವರಿಗೆ ಕೇವಲ ಶೋಕಾಸ್ ನೋಟಿಸ್ ನೀಡಿ ಎಚ್ಚರಿಕೆ ನೀಡಲಾಗಿದೆ. ಅವರು ಮಾಡಿದ್ದು ತಪ್ಪಲ್ಲ ಆದರೆ ನೀತೆ ಸಂಹಿತೆಯನ್ನು ಕಾಪಾಡಿಲ್ಲದ ಕಾರಣ ಅವರ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಜಿಲ್ಲಾಡಳಿತದ ಈ ಕ್ರಮವನ್ನು ಕೆಲ ಶಿಕ್ಷಕರು ಖಂಡಿಸಿದ್ದು, ವಿರಾಮದ ಸಮಯದಲ್ಲಿ ನಾವು ಎಂಜಾಯ್ ಮಾಡಿದರೆ ಏನು ತಪ್ಪು? ಆ ವಿಡಿಯೋದಲ್ಲಿ ಅಶ್ಲೀಲ ಅಥವಾ ಕೆಟ್ಟದ್ದು ಏನಿದೆ? ಸರ್ಕಾರಿ ನೌಕರರು ಬಿಡುವಿನ ಸಮಯದಲ್ಲೂ ಸಹೋದ್ಯೋಗಿಗಳ ಜೊತೆ ಎಂಜಾಯ್ ಮಾಡಬಾರದೇ? ಜಿಲ್ಲಾಡಳಿತ ತೆಗೆದುಕೊಂಡಿರುವ ನಿರ್ಧಾರ ನ್ಯಾಯವಾಗಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.