ಜೈಪುರ್: ಉಗ್ರರೊಂದಿಗೆ ಸಂಪರ್ಕ ಹೊಂದಿದ್ದ ಶಂಕಿತ ಆರೋಪಿಯನ್ನು ರಾಜಸ್ಥಾನದ ಭಯೋತ್ಪಾದನಾ ನಿಗ್ರಹ ದಳ (Anti Terrorism Squad) ಅಧಿಕಾರಿಗಳು ಬಂಧಿಸಿದ್ದಾರೆ.
ರಾಜಸ್ಥಾನದ (Rajasthan) ಬಾರ್ಮರ್ ಮೂಲದ ಮೌಲಾನಾ ಒಸಾಮಾ ಉಮರ್ ಬಂಧಿತ ಆರೋಪಿಯಾಗಿದ್ದಾನೆ. ಈತ ಸಂಚೋರ್‌ನಲ್ಲಿ ಕೆಲಸ ಮಾಡುತ್ತಿದ್ದ. ಈತನ ಜೊತೆ ಇತರ ನಾಲ್ವರನ್ನು ಶನಿವಾರ ರಾಜಸ್ಥಾನದ ನಾಲ್ಕು ಜಿಲ್ಲೆಗಳಿಂದ ವಶಕ್ಕೆ ಪಡೆಯಲಾಗಿತ್ತು. ಐದು ದಿನಗಳ ವಿಚಾರಣೆಯ ನಂತರ, ಆರೋಪಿ ನಾಲ್ಕು ವರ್ಷಗಳಿಂದ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಸಂಪರ್ಕದಲ್ಲಿದ್ದಾನೆ ಎಂದು ತಿಳಿದು ಬಂದಿದೆ. ಆತನನ್ನು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಬಂಧಿಸಲಾಗಿದೆ. ಇದನ್ನೂ ಓದಿ: ರಾಜಸ್ಥಾನದಲ್ಲಿ 3 ಮೌಲ್ವಿಗಳು ಸೇರಿ ಐವರು ಶಂಕಿತ ಭಯೋತ್ಪಾದಕರು ಅರೆಸ್ಟ್ – ತೀವ್ರ ವಿಚಾರಣೆ
ವಿಚಾರಣೆ ವೇಳೆ ಉಮರ್ ಇತರರನ್ನು ಮೂಲಭೂತವಾದಿಗಳನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದ. ಅಲ್ಲದೇ ನಾಲ್ಕು ಶಂಕಿತರನ್ನು ಭಯೋತ್ಪಾದಕರ ಗುಂಪಿಗೆ ಸೇರಲು ಒತ್ತಡ ಹೇರುತ್ತಿದ್ದ ಎಂಬುದು ಬಯಲಾಗಿದೆ. ಈತ ಉನ್ನತ ಭಯೋತ್ಪಾದಕ ಕಮಾಂಡರ್‌ಗಳೊಂದಿಗೆ ಸಂವಹನ ನಡೆಸಲು ಇಂಟರ್ನೆಟ್ ಕರೆ ಮಾಡುತ್ತಿದ್ದ. ಈತನಿಂದ ಎರಡು ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ಸಮಯದಲ್ಲಿ ಎಟಿಎಸ್‌ಗೆ ಹಣ ಅಥವಾ ಹಣಕಾಸಿನ ವಹಿವಾಟಿನ ಯಾವುದೇ ಪುರಾವೆಗಳು ಸಿಕ್ಕಿಲ್ಲ. ಉಮರ್ ಅಫ್ಘಾನಿಸ್ತಾನಕ್ಕೆ ಪರಾರಿಯಾಗುವ ಯೋಜನೆಯನ್ನೂ ಹೊಂದಿದ್ದ. ಆತನನ್ನು ಸರಿಯಾದ ಸಮಯಕ್ಕೆ ಬಂಧಿಸಲಾಗಿದೆ. ಯಾವುದೇ ಭಯೋತ್ಪಾದಕ ಕೃತ್ಯದಲ್ಲಿ ಉಮರ್ ಭಾಗಿಯಾಗಿದ್ದಾನೆಯೇ ಎಂಬುದರ ಬಗ್ಗೆ ಹೆಚ್ಚಿನ ವಿಚಾರಣೆಯ ನಂತರ ದೃಢಪಡಿಸಲಾಗುವುದು. ಆತ ʻಜಿಹಾದಿ ಮನಸ್ಥಿತಿಯಿಂದʼ ಪ್ರೇರೇಪಿತನಾಗಿದ್ದಾನೆ ಎಂದು ಎಟಿಎಸ್ ಇನ್ಸ್‌ಪೆಕ್ಟರ್ ಜನರಲ್ ವಿಕಾಸ್ ಕುಮಾರ್ ಹೇಳಿದ್ದಾರೆ.
ಬಂಧಿತರಾದ ಇತರರಲ್ಲಿ ಮಸೂದ್, ಮೊಹಮ್ಮದ್ ಅಯೂಬ್, ಮೊಹಮ್ಮದ್ ಜುನೈದ್ ಮತ್ತು ಬಸೀರ್ ಸೇರಿದ್ದಾರೆ. ಉಮರ್ ಹೊರತುಪಡಿಸಿ, ಇತರರು ಭಾರತದ ಹೊರಗಿನ ಯಾವುದೇ ಭಯೋತ್ಪಾದಕ ಜಾಲಗಳೊಂದಿಗೆ ಸಂಪರ್ಕದಲ್ಲಿರಲಿಲ್ಲ. ಇದನ್ನೂ ಓದಿ: Mumbai Hostage | 17 ಮಕ್ಕಳನ್ನ ಒತ್ತೆಯಾಳಾಗಿ ಇರಿಸಿಕೊಂಡಿದ್ದ ಆರೋಪಿ ಪೊಲೀಸರ ಗುಂಡಿಗೆ ಬಲಿ

