ಜೈಪುರ್: ಹೋಳಿ (Holi) ಹಬ್ಬದಂದು ಬಣ್ಣ ಹಚ್ಚಿಸಿಕೊಳ್ಳಲು ನಿರಾಕರಿಸಿದ ಯುವಕನನ್ನು ಮೂವರು ವ್ಯಕ್ತಿಗಳು ಸೇರಿ ಥಳಿಸಿ ಬಳಿಕ ಕತ್ತು ಹಿಸುಕಿ ಹತ್ಯೆಗೈದ ಘಟನೆ ರಾಜಸ್ಥಾನದಲ್ಲಿ (Rajasthan) ನಡೆದಿದೆ.
ಬುಧವಾರ ಸಂಜೆ ದೌಸಾ ಜಿಲ್ಲೆಯ ರಾಲ್ವಾಸ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹತ್ಯೆಗೀಡಾದ ಯುವಕನನ್ನು ಹಂಸರಾಜ್ ಎಂದು ಗುರುತಿಸಲಾಗಿದೆ. ಹಂಸರಾಜ್ ಸ್ಥಳೀಯ ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ. ಇಲ್ಲಿಗೆ ಬಂದ ಅಶೋಕ್, ಬಬ್ಲು ಮತ್ತು ಕಲುರಾಮ್ ಬಣ್ಣ ಬಳಿಯಲು ಯತ್ನಿಸಿದ್ದರು. ಈ ವೇಳೆ ಯುವಕ ನಿರಾಕರಿಸಿದ್ದಕ್ಕೆ, ಮೂವರು ಆತನಿಗೆ ಬೆಲ್ಟ್‌ನಿಂದ ಹಲ್ಲೆ ನಡೆಸಿದ್ದರು. ಬಳಿಕ ಅದರಲ್ಲಿ ಒಬ್ಬ ಕತ್ತು ಹಿಸುಕಿ ಆತನನ್ನು ಹತ್ಯೆಗೈದಿದ್ದಾನೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ದಿನೇಶ್ ಅಗರ್ವಾಲ್ ತಿಳಿಸಿದ್ದಾರೆ. ಇದನ್ನೂ ಓದಿ: ಮರಾಠಿಯಲ್ಲಿ ಮಾತನಾಡುವಂತೆ ಪಿಡಿಓಗೆ ಧಮ್ಕಿ – ಆರೋಪಿ ಹಿಂಡಲಗಾ ಜೈಲಿಗೆ
ಹತ್ಯೆಯನ್ನು ಖಂಡಿಸಿ ಕುಟುಂಬದ ಸದಸ್ಯರು ಮತ್ತು ಗ್ರಾಮಸ್ಥರು ಹಂಸರಾಜ್ ಅವರ ಶವವನ್ನು ಈ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇರಿಸಿ ಪ್ರತಿಭಟನೆ ನಡೆಸಿದ್ದಾರೆ. ಮೃತನ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ, ಕುಟುಂಬದ ಒಬ್ಬ ಸದಸ್ಯನಿಗೆ ಸರ್ಕಾರಿ ಕೆಲಸ ನೀಡಬೇಕು. ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಆರೋಪಿಗಳನ್ನು ಬಂಧಿಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ಮೃತದೇಹವನ್ನು ಹೆದ್ದಾರಿಯಿಂದ ತೆಗೆದು, ಪ್ರತಿಭಟನೆ ಕೈಬಿಟ್ಟಿದ್ದಾರೆ. ಇದನ್ನೂ ಓದಿ: ರನ್ಯಾ ರಾವ್ ಕೇಸ್‌ನಲ್ಲಿ ಸರ್ಕಾರ ಯಾರನ್ನೋ ರಕ್ಷಣೆ ಮಾಡಲು ಪ್ರಯತ್ನ: ಪ್ರಹ್ಲಾದ್ ಜೋಶಿ