ಜೈಪುರ: ತನ್ನ ಪತ್ನಿಯನ್ನು ಕೊಲೆ ಮಾಡಲು ವೈದ್ಯರನ್ನು ನೇಮಿಸಿಕೊಳ್ಳಲು ಯತ್ನಿಸಿದ ಆರೋಪದಡಿ ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಾಗಿರುವ ಘಟನೆ ರಾಜಸ್ಥಾನ್‌ನಲ್ಲಿ ನಡೆದಿದೆ.
ಆರೋಪಿಯು ಪೆಡವಾ ಪ್ರದೇಶದ ಮಂಗಲ್ ಸಿಂಗ್ ಎಂದು ಗುರುತಿಸಲಾಗಿದೆ. ಆತನನ್ನು ಇನ್ನೂ ಬಂಧಿಸಿಲ್ಲ ಎಂದು ಜಲವಾರ್ ನಗರ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಆಪರೇಷನ್ ವೇಳೆ ಮಹಿಳೆಯ ಹೊಟ್ಟೆಯಲ್ಲೇ ಉಳೀತು ಹತ್ತಿ – ಶಸ್ತ್ರಚಿಕಿತ್ಸಕರ ಮೇಲೆ ಕೇಸ್
ನಗರದ ಎಸ್‌ಆರ್‌ಜಿ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಅಖಿಲೇಶ್ ಮೀನಾ ಅವರ ದೂರಿನ ಮೇರೆಗೆ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಿಂಗ್ ಅವರು ತಮ್ಮ ನಿವಾಸಕ್ಕೆ ಬಂದು, ಪತ್ನಿಯನ್ನು ಕೊಲ್ಲಲು ವಿನಂತಿಸಿದ್ದರು. ಅದಕ್ಕಾಗಿ ಹಣವನ್ನೂ ನೀಡಿದ್ದರು ಎಂದು ವೈದ್ಯರು ಆರೋಪಿಸಿದ್ದಾರೆ.
ತನ್ನ ಗರ್ಭಿಣಿ ಪತ್ನಿಯ ಚಿಕಿತ್ಸೆಗಾಗಿ ವ್ಯಕ್ತಿ ನಾಲ್ಕೈದು ದಿನಗಳಿಂದ ನನ್ನನ್ನು ಸಂಪರ್ಕಿಸಿದ್ದ. ಚಿಕಿತ್ಸೆಯ ಉದ್ದೇಶದಿಂದ ಬಂದಿದ್ದ ಆತ ನಂತರ, ತನ್ನ ಪತ್ನಿಯನ್ನು ಕೊಲ್ಲಬೇಕು ಎಂದು ಮನವಿ ಮಾಡಿದ್ದ. ಈತ ಮನೋರೋಗಿ ಇರಬೇಕು ಎಂದು ಭಾವಿಸಿ ಬುದ್ದಿ ಹೇಳಿ ಕಳುಹಿಸಿದ್ದೆ ಎಂದು ವೈದ್ಯರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಪ್ರವಾದಿಯ ವ್ಯಂಗ್ಯಚಿತ್ರ ಕಳುಹಿಸಿದ್ದಕ್ಕೆ ಮಹಿಳೆಗೆ ಗಲ್ಲು ಶಿಕ್ಷೆ
ಗರ್ಭಿಣಿ ಪತ್ನಿಯನ್ನು ಕೊಲ್ಲಲು ವೈದ್ಯರನ್ನು ನೇಮಿಸಿಕೊಳ್ಳಲು ಪ್ರಯತ್ನಿಸಿದ ಆರೋಪದಡಿ ಮಂಗಲ್ ಸಿಂಗ್ ವಿರುದ್ಧ ಐಪಿಸಿ ಸೆಕ್ಷನ್ 302 ಮತ್ತು 115ರಡಿ ಪ್ರಕರಣ ದಾಖಲಿಸಲಾಗಿದೆ ಎಂದು ಜಲವಾರ್ ನಗರ ಠಾಣೆಯ ಸರ್ಕಲ್ ಇನ್‌ಸ್ಪೆಕ್ಟರ್ ಬಲ್ವಿರ್ ಸಿಂಗ್ ತಿಳಿಸಿದ್ದಾರೆ.