ಜೈಪುರ: ಶೌಚಾಲಯ ಕಟ್ಟಿಸದ್ದಕ್ಕೆ ಪತಿ ವಿರುದ್ಧ ಕೋರ್ಟ್ ಮೊರೆ ಹೋಗಿದ್ದ ರಾಜಸ್ಥಾನದ ಮಹಿಳೆಯೊಬ್ಬರು ವಿಚ್ಛೇಧನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜಸ್ಥಾನದ ಭಿಲಿವಾಡಾ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ರಾಜೇಂದ್ರ ಕುಮಾರ್ ಶರ್ಮಾ ಮಹಿಳೆಯೊಬ್ಬರಿಗೆ ಶೌಚಾಲಯ ಕಟ್ಟಿಸದ ಪತಿಯಿಂದ ವಿಚ್ಛೇಧನ ನೀಡಿ ಐತಿಹಾಸಿಕ ತೀರ್ಪನ್ನು ನೀಡಿದ್ದಾರೆ.
Advertisement
ಭಿಲಿವಾಡಾ ಜಿಲ್ಲೆಯ ಪುರ ಗ್ರಾಮದ ನಿವಾಸಿಯಾಗಿರುವ ಮಹಿಳೆಯೊಬ್ಬರು 2015ರಲ್ಲಿ ಪತಿಯಿಂದ ಡೈವೋರ್ಸ್ ಕೇಳಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ಮಹಿಳೆಗೆ ಪುರ ಗ್ರಾಮದ ನಿವಾಸಿಯೊಂದಿಗೆ 2011ರಲ್ಲಿ ಮದುವೆಯಾಗಿತ್ತು. ಮದುವೆಯ ನಂತರ ಮಹಿಳೆಗೆ ಮನೆಯಲ್ಲಿ ಒಂದು ಪ್ರತ್ಯೇಕ ಕೊಠಡಿ ಮತ್ತು ಶೌಚಾಲಯದ ವ್ಯವಸ್ಥೆಯನ್ನು ಒದಗಿಸಿರಲಿಲ್ಲ. ಹೀಗಾಗಿ ಮಹಿಳೆ ಶೌಚಕ್ಕಾಗಿ ಬಯಲನ್ನು ಅವಲಂಬಿಸಬೇಕಾಗಿತ್ತು. ಗ್ರಾಮದಲ್ಲಿ ಶೌಚಕ್ಕಾಗಿ ಮಹಿಳೆಯರು ರಾತ್ರಿಯಾಗುವರೆಗೂ ಕಾಯುವ ಪರಿಸ್ಥಿತಿಯಿತ್ತು.
Advertisement
Advertisement
ಮಹಿಳೆ ಕುಟುಂಬಸ್ಥರ ಮುಂದೆ ಶೌಚಾಲಯ ನಿರ್ಮಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಇಷ್ಟು ದಿನ ನಮ್ಮ ತಾಯಿ ಮತ್ತು ಸಹೋದರಿಯರು ಶೌಚಕ್ಕಾಗಿ ಬಯಲಿಗೆ ಹೋಗ್ತಾರೆ. ಹೀಗಾಗಿ ನೀನು ಬಯಲಿಗೆ ಹೋಗು ಎಂದು ಮನೆಯ ಪುರುಷರು ಮಹಿಳೆಯನ್ನೇ ದಬಾಯಿಸಿದ್ದಾರೆ. ಮನೆಯವರಿಂದ ನೊಂದ ಮಹಿಳೆ 2015ರಲ್ಲಿ ಪತಿಯಿಂದ ಡೈವೋರ್ಸ್ ಪಡೆಯಲು ನ್ಯಾಯಾಲಯದ ಮೊರೆ ಹೋಗಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಭಿಲಿವಾಡ ಕೌಟುಂಬಿಕ ನ್ಯಾಯಾಲಯ ಮಹತ್ವದ ತೀರ್ಪನ್ನು ನೀಡುವ ಮೂಲಕ ಮಹಿಳೆಯ ಸ್ಥಾನಮಾನವನ್ನು ಎತ್ತಿ ಹಿಡಿದಿದೆ. 2015ರಿಂದಲೂ ಮಹಿಳೆ ಪತಿ ಮನೆಯಿಂದ ಹೊರಬಂದು ತವರು ಮನೆಯಲ್ಲಿ ವಾಸವಾಗಿದ್ದರು.
Advertisement
ನಿಮಗೆ ನೋವು ಆಗುವದಿಲ್ಲವೆ?
ನ್ಯಾಯಾಧೀಶರಾದ ಶರ್ಮಾ ಅವರು ತೀರ್ಪನ್ನು ಪ್ರಕಟಿಸುವಾಗ ಮನೆಯ ಪುರಷರಿಗೆ ನಿಮ್ಮ ಸಹೋದರಿ, ತಾಯಿ, ಪತ್ನಿ ಮತ್ತು ಹೆಣ್ಣು ಮಕ್ಕಳನ್ನು ಶೌಚಕ್ಕಾಗಿ ಬಯಲಿಗೆ ಕಳಿಸುವಾಗ ನಿಮಗೆ ನೋವು ಆಗುವುದಿಲ್ಲವೇ? ಇದರಿಂದಾಗಿ ಮಹಿಳೆ ದೈಹಿಕವಾಗಿ ಮತ್ತು ಮಾನಸಿಕವಾಗಿ ನೋವನ್ನು ಅನುಭವಿಸುತ್ತಾಳೆ. ಯಾಕೆ ನಾವು ನಮ್ಮ ಮನೆಯ ಮಹಿಳೆಯರಿಗಾಗಿ ಒಂದು ಶೌಚಾಲಯ ಕಟ್ಟಿಸಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು.
ಕುಟುಂಬದಲ್ಲಿ ಮಹಿಳೆ ಸ್ಥಾನಮಾನ ನೀಡುವದರಲ್ಲಿ ಶೌಚಾಲಯ ಕಟ್ಟಿಸುವುದು ಒಂದು ಪ್ರಮುಖ ಕರ್ತವ್ಯ. 21ನೇ ಶತಮಾನದಲ್ಲೂ ಮಹಿಳೆ ಶೌಚಕ್ಕಾಗಿ ಬಯಲನ್ನು ಅವಲಂಬಿಸುವುದು ಸಮಾಜಕ್ಕೆ ಕಳಂಕ ತರುವಂತಹ ಕೆಲಸವಾಗುತ್ತದೆ. ಸಾರಾಯಿ, ಸಿಗರೇಟ್, ಮೊಬೈಲ್ ಇನ್ನೀತರ ಚಟಗಳಿಗೆ ಹಣವನ್ನು ವ್ಯಯ ಮಾಡುವರು ನಿಮ್ಮ ಮನೆಯಲ್ಲೊಂದು ಶೌಚಾಲಯ ಕಟ್ಟಿಸಿಕೊಳ್ಳಿ ಎಂದು ನ್ಯಾ.ಶರ್ಮಾ ತೀರ್ಪುನಲ್ಲಿ ಉಲ್ಲೇಖಿಸಿದರು.