ಜೈಪುರ: ರಾಜಸ್ಥಾನದ ಎರಡು ಲೋಕಸಭಾ ಕ್ಷೇತ್ರಗಳು ಹಾಗೂ ಒಂದು ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸುವ ಮೂಲಕ ಆಡಳಿತರೂಢ ಬಿಜೆಪಿ ಸರ್ಕಾರಕ್ಕೆ ತೀವ್ರ ಹಿನ್ನೆಡೆಯನ್ನು ಉಂಟುಮಾಡಿದೆ.
ಮುಂದಿನ ಲೋಕಸಭಾ ಚುನಾವಣೆಯಗೆ ಒಂದು ವರ್ಷ ಮಾತ್ರ ಬಾಕಿ ಇದ್ದು, ಕರ್ನಾಟಕ ಸೇರಿದಂತೆ, ತ್ರಿಪುರ, ನಾಗಾಲ್ಯಾಂಡ್ ಮತ್ತು ಮೇಘಾಲಯ ರಾಜ್ಯಗಳ ವಿಧಾನಸಭಾ ಚುನಾವಣೆಗಳು ನಡೆಯುತ್ತಿರುವ ವೇಳೆ ರಾಜಸ್ಥಾನದ ಉಪಚುನಾವಣೆ ಸೋಲು ಬಿಜೆಪಿಗೆ ಮುಖಭಂಗವನ್ನ ಉಂಟು ಮಾಡಿದೆ. ಅಲ್ಲದೇ ವರ್ಷಾಂತ್ಯಕ್ಕೆ ರಾಜಸ್ಥಾನದ ವಿಧಾನಸಭಾ ಚುನಾವಣೆ ನಡೆಯಲಿದ್ದು, ಉಪಚುನಾವಣೆಯನ್ನು ವಿಧಾನಸಭಾ ಚುನಾವಣೆಗೆ ಸೆಮಿಫೈನಲ್ ಎಂದೇ ವಿಶ್ಲೇಷಿಸಲಾಗಿತ್ತು.
Advertisement
Advertisement
ರಾಜಸ್ಥಾನದ ಅಜ್ಮಿರ್, ಅಲ್ವಾರ್ ಲೋಕಸಭಾ ಕ್ಷೇತ್ರದ ಸದಸ್ಯರು ಹಾಗೂ ಮಂಡಲಗಢ ಶಾಸಕರ ಸಾವಿನಿಂದ ತೆರವಾಗಿದ್ದ ಸ್ಥಾನಗಳಿಗೆ ಜನವರಿ 29 ರಂದು ಉಪಚುನಾವಣೆ ನಡೆದಿತ್ತು.
Advertisement
ಚುನಾವಣೆ ಸೋಲಿನ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ಮುಖಂಡ ಕೈಲಾಶ್ ವಿಜಯವರ್ಜಿಯಾ ಚುನಾವಣೆಯಲ್ಲಿ ತಮ್ಮ ಪಕ್ಷ ಸೋಲಿಗೆ ಕಾರಣಗಳ ಕುರಿತು ಅಧ್ಯಯನ ನಡೆಸಲಾಗುವುದು. ಆದರೆ ಉಪಚುನಾವಣೆಗಳು ರಾಜ್ಯದ ಪೂರ್ಣ ಪ್ರಮಾಣದ ಚಿತ್ರಣವನ್ನು ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
Advertisement
ರಾಜಸ್ಥಾನದ ಸಿಎಂ ವಸುಂಧರಾ ರಾಜೇ ಹಾಗೂ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರ ನೇತೃತ್ವದಲ್ಲಿ ಎರಡು ಪಕ್ಷಗಳು ಉಪಚುನಾವಣೆ ಎದುರಿಸಿದ್ದವು. ಕಾಂಗ್ರೆಸ್ ಪಕ್ಷ ಚುನಾವಣೆಯ ವೇಳೆಯಲ್ಲಿ ಗೋಹತ್ಯೆ ಕುರಿತ ನಡೆದ ಹಿಂಸಾಚಾರ ಘಟನೆಗಳನ್ನು ಚುನಾವಣೆಯ ಪ್ರಮುಖ ವಿಷಯವಾಗಿ ಪ್ರಸ್ತಾಪಿಸಿತ್ತು.
ಅಜ್ಮಿರ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಘು ಶರ್ಮಾ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ರಾಮ್ ಸ್ವರೂಪ್ ಲಂಬಾ ವಿರುದ್ಧ 90 ಸಾವಿರ ಮತಗಳ ಅಂತರದಲ್ಲಿ ಜಯ ಪಡೆದಿದ್ದಾರೆ. ಅಲ್ವಾರ್ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಡಾ. ಕರಣ್ ಸಿಂಗ್ ಯಾದವ್ 48,288 ಮತಗಳ ಅಂತರದಿಂದ ಬಿಜೆಪಿಯ ಡಾ. ಜಶ್ವಂತ್ ಸಿಂಗ್ ಯಾದವ್ ಅವರನ್ನು ಸೋಲಿಸಿದ್ದಾರೆ. ಮಂಡಲ್‍ಗರ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ವಿವೇಕ್ ಢಾಕಡ್ 45,011 ಮತ ಪಡೆದಿದ್ದಾರೆ, ಪ್ರತಿಸ್ಪರ್ಧಿ ಬಿಜೆಪಿಯ ಶಕ್ತಿಸಿಂಗ್ 42,999 ಮತ ಪಡೆದಿದ್ದಾರೆ. ಈ ಮೂಲಕ 2,012 ಮತಗಳ ಅಂತರದಲ್ಲಿ ಜಯ ಗಳಿಸಿದ್ದಾರೆ.
ರಾಜ್ಯದ ಜನರು ವಸುಂಧರಾ ರಾಜೇ ನೇತೃತ್ವದ ಬಿಜೆಪಿ ಪಕ್ಷದ ಆಡಳಿತವನ್ನು ತಿರಸ್ಕರಿಸಿದ್ದು, ಅದರಲ್ಲೂ ಯುವ ಮತದಾರರು ರಾಜಕೀಯ ಧ್ರುವೀಕರಣ ಮಾಡುವುದನ್ನು ತಿರಸ್ಕರಿಸಿದ್ದಾರೆ ಎಂದು ಸಚಿನ್ ಪೈಲಟ್ ಅಭಿಪ್ರಾಯ ಪಟ್ಟಿದ್ದಾರೆ.
Well done Rajasthan Congress! Proud of each and every one of you. This is a rejection of the BJP by the people of Rajasthan.#RajasthanByPolls
— Rahul Gandhi (@RahulGandhi) February 1, 2018
ರಾಜಸ್ತಾನದಲ್ಲಿ ಪಕ್ಷ ಗೆಲುವಿಗೆ ಸಂತಸ ವ್ಯಕ್ತಪಡಿಸಿರುವ ರಾಹುಲ್ ಗಾಂಧಿ, ಗೆಲುವು ಪಡೆದ ಪಕ್ಷದ ಅಭ್ಯರ್ಥಿಗಳನ್ನು ಅಭಿನಂದಿಸಿದ್ದಾರೆ.
2014 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷ ಒಂದು ಸ್ಥಾನವನ್ನು ಗೆಲ್ಲಲು ವಿಫಲವಾಗಿತ್ತು. ಅಜ್ಮಿರ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಸಾನ್ವರ್ ಲಾಲ್ ಜಾಟ್ ಸಚಿನ್ ಪೈಲಟ್‍ರನ್ನು ಸೋಲಿಸಿದ್ದರು. ಆ ಚುನಾವಣೆಯಲ್ಲಿ ಸಾನ್ವರ್ ಲಾಲ್ 6,37,874 ಮತ ಪಡೆದಿದ್ದಾರೆ, ಸಚಿನ್ ಪೈಲೆಟ್ 4,65,891 ಮತ ಪಡೆದಿದ್ದರು. ಅಲ್ವಾರ್ ನ ಬಿಜೆಪಿಯ ಚಂದ್ ನಾಥ್ 6,42,278 ಮತ ಪಡೆದು ಗೆಲುವು ಪಡೆದಿದ್ದರೆ ಪ್ರತಿಸ್ಪರ್ಧಿ ಭನ್ವಾರ್ ಜೀತೇಂದ್ರ ಸಿಂಗ್ 3,58,383 ಮತ ಪಡೆದಿದ್ದರು.