ಜೈಪುರ್: ಮಗನ ಮೇಲೆ ಹಲ್ಲೆ ಮಾಡಿ, ಕೊಲೆಗೈದ ಆರೋಪಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲವೆಂದು ಅಂಧ ತಂದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಹರೀಶ್ ಜಾತವ್ (28) ಕೊಲೆ ಆಗಿದ್ದವರು. ಜುಲೈ 16ರಂದು ಹರೀಶ್ ಜಾತವ್ ಕೊಲೆಯಾಗಿತ್ತು. ಆದರೆ ಪೊಲೀಸರು ತನಿಖೆಯನ್ನು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ತಂದೆ ರಟ್ಟಿರಾಮ್ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅಲ್ವಾರ್ ಜಿಲ್ಲೆಯ ಬಿವಾಡಿ-ಚೋಪನ್ಕಿ ರಸ್ತೆಯಲ್ಲಿ ಹರೀಶ್ ಜಾತವ್ ಅವರು ಜುಲೈ 16ರಂದು ರಾತ್ರಿ 7 ಗಂಟೆ ಸುಮಾರಿಗೆ ಬೈಕಿನಲ್ಲಿ ತೆರಳುತ್ತಿದ್ದರು. ಈ ವೇಳೆ ಅಚಾನಕ್ಕಾಗಿ ಅಪರಿಚಿತ ಮಹಿಳೆಗೆ ಡಿಕ್ಕಿ ಹೊಡೆದು ಗಾಯಗೊಳಿಸಿದ್ದರು. ಇದರಿಂದ ಕೋಪಗೊಂಡ ಸ್ಥಳೀಯರು ಹರೀಶ್ ಜಾತವ್ ಅವರನ್ನು ಹಿಗ್ಗಾಮುಗ್ಗ ಥಳಿಸಿದ್ದರು. ಪರಿಣಾಮ ತೀವ್ರ ರಕ್ತಸ್ರಾವಕ್ಕೆ ಒಳಗಾಗಿ ರಸ್ತೆ ಬದಿ ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಎರಡು ದಿನಗಳ ಬಳಿಕ ಹರೀಶ್ ಸಾವನ್ನಪ್ಪಿದ್ದರು.
ಈ ಸಂಬಂಧ ಹರೀಶ್ ತಂದೆ ರಟ್ಟಿರಾಮ್ ಅವರು, ಉಮರ್ ಶೇರ್ ಹಾಗೂ ಆತನ ಸಹಾಯಕ ಹರೀಶ್ ಮೇಲೆ ಹಲ್ಲೆ ಮಾಡಿದ್ದಾರೆ. ಹೀಗಾಗಿ ಮಗ ಸಾವನ್ನಪ್ಪಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸುತ್ತಿಲ್ಲ ಹಾಗೂ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ ಎಂದು ರಟ್ಟಿರಾಮ್ ಆರೋಪಿಸಿದ್ದರು. ಇದೇ ಕಾರಣದಿಂದ ರಟ್ಟಿರಾಮ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿರುವ ಅಲ್ವಾರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರ ಪರೀಶ್ ದೇಶ್ಮುಖ್ ಅವರು, ಹರೀಶ್ ಜಾತವ್ ಸಾಮೂಹಿಕ ಹಲ್ಲೆಯ ಕಾರಣದಿಂದಲೇ ಮೃತಪಟ್ಟಿದ್ದಾರೆ ಎನ್ನುವುದಕ್ಕೆ ಯಾವುದೇ ಸೂಕ್ತ ಪುರಾವೆಗಳಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಕೈ ಸೇರುವವರೆಗೆ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಹರೀಶ್ ಮದ್ಯ ಸೇವಿಸಿ ಬೈಕ್ ಓಡಿಸುತ್ತಿದ್ದ. ನನಗೆ ಡಿಕ್ಕಿಹೊಡೆದು ಗಂಭೀರವಾಗಿ ಗಾಯಗೊಳಿಸಿದ್ದಾನೆ ಅಂತ ಮಹಿಳೆ ದೂರು ನೀಡಿದ್ದಾರೆ. ಹೀಗಾಗಿ ಎಲ್ಲ ರೀತಿಯಲ್ಲಿಯೂ ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.