– ಚರ್ಚೆಗೆ ಗ್ರಾಸವಾದ ರಾಜಸ್ಥಾನ ಜಿಲ್ಲಾಸ್ಪತ್ರೆ ನಡೆ
– ಗಾಯತ್ರಿ ಮಂತ್ರವನ್ನು ನಿಲ್ಲಿಸುವಂತೆ ಮುಸ್ಲಿಮರಿಂದ ಆಗ್ರಹ
ಜೈಪುರ: ಹೆರಿಗೆ ನೋವು ಕಡಿಮೆಯಾಗಲು ರಾಜಸ್ಥಾನದ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯತ್ರಿ ಮಂತ್ರದ ಆಡಿಯೋ ಪ್ಲೇ ಮಾಡುತ್ತಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.
ಮಹಿಳೆಯು ಗಾಯತ್ರಿ ಮಂತ್ರವನ್ನು ಆಲಿಸಿದರೆ ಆಕೆಯ ಹೆರಿಗೆ ನೋವು ಕಡಿಮೆಯಾಗುತ್ತದೆ ಎಂಬ ನಂಬಿಕೆಯನ್ನು ಆಸ್ಪತ್ರೆಯ ಸಿಬ್ಬಂದಿ ಇಟ್ಟುಕೊಂಡಿದ್ದಾರೆ. ಆದ್ದರಿಂದ ಸಿರೋಹಿ ಜಿಲ್ಲಾಸ್ಪತ್ರೆಯ ಹೆರಿಗೆ ಕೋಣೆಯಲ್ಲಿ ಕಳೆದ ಒಂದು ವರ್ಷದಿಂದಲೂ ಗಾಯತ್ರಿ ಮಂತ್ರವನ್ನು ಪ್ಲೇ ಮಾಡಲಾಗುತ್ತಿದೆ.
Advertisement
Advertisement
ಸರ್ಕಾರಿ ಆಸ್ಪತ್ರೆಗೆ ಕೇವಲ ಹಿಂದೂ ರೋಗಿಗಳು ಮಾತ್ರ ಬರುವುದಿಲ್ಲ. ಮುಸ್ಲಿಂ ಹಾಗೂ ಇತರೇ ಧರ್ಮದವರು ಕೂಡ ಬರುತ್ತಾರೆ. ಹೀಗೆ ಗಾಯತ್ರಿ ಮಂತ್ರವನ್ನು ಮಾತ್ರ ಪ್ಲೇ ಮಾಡುವುದು ಸರಿಯಲ್ಲ ಎಂದು ಆಕ್ಷೇಪ ಕೇಳಿಬಂದಿದೆ.
Advertisement
ಮುಸ್ಲಿಂ ಸಮುದಾಯದ ಕೆಲವು ಮಂದಿ ಆಸ್ಪತ್ರೆಯ ನಿರ್ಧಾರದ ವಿರುದ್ಧ ಪ್ರತಿಭಟನೆಗೆ ನಿಂತಿದ್ದಾರೆ. ಇಸ್ಲಾಂ ಧರ್ಮದ ಪ್ರಕಾರ, ಹುಟ್ಟುವ ಮಗುವಿನ ಕಿವಿಗೆ ಮೊದಲು ಆಜಾನ್ ಎಂಬ ಪದ ಬೀಳಬೇಕು ಎಂದು ಪ್ರತಿಭಟನಾಕಾರ ಆಶ್ಫಾಕ್ ಕಾಯಂಖಾನಿ ಹೇಳಿದ್ದಾರೆ.
Advertisement
ಜಿಲ್ಲಾಸ್ಪತ್ರೆಗಳ ಹೆರಿಗೆ ಕೊಠಡಿಗಳಲ್ಲಿ ನಾವು ಗಾಯತ್ರಿ ಮಂತ್ರವನ್ನು ಪ್ಲೇ ಮಾಡುತ್ತೇವೆ. ಜಿಲ್ಲೆಯ ಇತರ 20 ಆರೋಗ್ಯ ಕೇಂದ್ರಗಳ ಹೆರಿಗೆ ಕೊಠಡಿಗಳಿಗೂ ಈ ವ್ಯವಸ್ಥೆಯನ್ನು ವಿಸ್ತರಿಸುತ್ತೇವೆ ಎಂದು ಸವಾಯ್ ಮಾಧೋಪುರದ ಮುಖ್ಯ ವೈದ್ಯಾಧಿಕಾರಿ ಡಾ.ತೇಜರಾಮ್ ಮೀನಾ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಜಿಲ್ಲಾ ಶಿಶು ಆರೋಗ್ಯಾಧಿಕಾರಿ ಡಾ.ಅಶೋಕ್ ಆದಿತ್ಯ ಅವರು ಉದಯಪುರದ ಸರ್ಕಾರಿ ಆಸ್ಪತ್ರೆಯಲ್ಲಿಯೂ ಈ ವ್ಯವಸ್ಥೆ ತರಲು ಸಿದ್ಧತೆಗಳು ನಡೆದಿದೆ ಎಂದು ತಿಳಿಸಿದ್ದಾರೆ.
ಜಿಲ್ಲಾ ವೈದ್ಯಾಧಿಕಾರಿಗಳಿಗೆ ಆಸ್ಪತ್ರೆಗಳಲ್ಲಿ ಈ ರೀತಿ ಹಾಡನ್ನು ಪ್ಲೇ ಮಾಡಿ ಎಂಬ ಯಾವುದೇ ಸೂಚನೆ ನೀಡಿಲ್ಲ ಎಂದು ರಾಜ್ಯದ ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ಆದರೆ ಹೆರಿಗೆ ಕೊಠಡಿಗಳಲ್ಲಿ ನೋವು ಕಡಿಮೆ ಮಾಡುವುದಕ್ಕೆ ಪೂರಕವಾದ ಹಾಡನ್ನು ಅಥವಾ ಆಡಿಯೋವನ್ನು ಮಾತ್ರವೇ ಪ್ಲೇ ಮಾಡುವಂತೆ ರಾಜ್ಯ ಸರ್ಕಾರ ಸೂಚಿಸಿರುವುದಾಗಿ ಆರೋಗ್ಯ ಇಲಾಖೆ ವಿಶೇಷ ಕಾರ್ಯದರ್ಶಿ ಡಾ.ಸಮಿತ್ ಶರ್ಮಾ ಹೇಳಿದ್ದಾರೆ.
ಈ ನಿಟ್ಟಿನಲ್ಲಿ ಕೆಲವೊಂದು ಆಡಿಯೋಗಳನ್ನು ನಾವೇ ಕಳುಹಿಸಿದ್ದೇವೆ. ಅದನ್ನು ಬಳಸುವುದು ಅಥವಾ ಬಿಡುವುದು ಆಸ್ಪತ್ರೆ ಸಿಬ್ಬಂದಿಗೆ ಬಿಟ್ಟ ವಿಷಯ. ಆದರೆ, ಗಾಯತ್ರಿ ಮಂತ್ರ ಪ್ಲೇ ಮಾಡಿರುವ ವಿಷಯದ ಕುರಿತು ಪರಿಶೀಲನೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.