RRR ಚಿತ್ರದ ಬಳಿಕ ಖ್ಯಾತ ನಿರ್ದೇಶಕ ಎಸ್‌ಎಸ್ ರಾಜಮೌಳಿಯ (SS Rajamouli) ಮಹತ್ವದ ಪ್ರಾಜೆಕ್ಟ್ ಎಸ್‌ಎಸ್‌ಎಂಬಿ29. ಸುಮಾರು ಒಂದು ಸಾವಿರ ಕೋಟಿಯಲ್ಲಿ ತಯಾರಾಗ್ತಿರುವ ಚಿತ್ರ ಎನ್ನಲಾಗುತ್ತಿದ್ದು ಈ ಚಿತ್ರದಲ್ಲಿ ಪ್ರಿನ್ಸ್ ಮಹೇಶ್ ಬಾಬು ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈಗಾಗ್ಲೇ ಚಿತ್ರೀಕರಣ ಪ್ರಾರಂಭವಾಗಿದ್ದು ಕೀನ್ಯಾದಲ್ಲಿ ನಡೆದ ರಹಸ್ಯದ ಚಿತ್ರೀಕರಣವನ್ನ ಅಲ್ಲಿನ ಸರ್ಕಾರವೇ ಬಹಿರಂಗಪಡಿಸಿದೆ. ಕೀನ್ಯಾದ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಮುಸಾಲಿಯ ಮುದವಾಡಿ ರಾಜಮೌಳಿಯವರೊಂದಿಗೆ ಸಮಯ ಕಳೆದಿರುವ ಫೋಟೋ ಪೋಸ್ಟ್ ಮಾಡಿ ಸಿನಿಮಾದ ಕುರಿತು, ರಾಜಮೌಳಿಯವರ ಸಾಧನೆ ಕುರಿತು ಮಹತ್ವದ ವಿಚಾರಗಳನ್ನ ಎಕ್ಸ್ ಮೂಲಕ ಹಂಚಿಕೊಂಡಿದ್ದಾರೆ.
ರಾಜಮೌಳಿಯವರ ಕೀನ್ಯಾ ಭೇಟಿಯನ್ನು ಸಚಿವ ಮುಸಾಲಿಯ ಮುದವಾಡಿ ಸುದೀರ್ಘ ಬರಹಗಳಿಂದ ವಿವರಿಸಿದ್ದಾರೆ. ಅವರ ಪ್ರಕಾರ ರಾಜಮೌಳಿ ಇಡೀ ಆಫ್ರಿಕಾ ಸುತ್ತಾಡಿ ಕೊನೆಗೆ ಚಿತ್ರೀಕರಣಕ್ಕಾಗಿ ಕೀನ್ಯಾವನ್ನ ಆರಿಸಿಕೊಂಡಿದೆ. ವಿಶ್ವದ 129 ದೇಶಗಳಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದ್ದು ಶತಕೋಟಿಗೂ ಹೆಚ್ಚು ವೀಕ್ಷಕರನ್ನು ಈ ಚಿತ್ರ ತಲುಪುತ್ತದೆ ಎಂದಿದ್ದಾರೆ. ಕಳೆದ ಹದಿನೈದು ದಿನಗಳಲ್ಲಿ ಕೀನ್ಯಾ ದೇಶವು ಭಾರತದ ಶ್ರೇಷ್ಟ ನಿರ್ದೇಶಕರಲ್ಲಿ ಒಬ್ಬರಾದ ರಾಜಮೌಳಿಯವರಿಗೆ ವೇದಿಕೆಯಾಯಿತು ಎಂದಿದ್ದಾರೆ. ವಿಶ್ವದ ಪ್ರೇಕ್ಷಕರ ಕಲ್ಪನೆಯನ್ನು ಸೆರೆಹಿಡಿಯುವ ದಾರ್ಶನಿಕ ನಿರ್ದೇಶಕ ಎಸ್‌ಎಸ್ ರಾಜಮೌಳಿ ಎಂದು ಬಣ್ಣಿಸಿದ್ದಾರೆ.
ರಾಜಮೌಳಿ ಬಗ್ಗೆ ಕೀನ್ಯಾ ಸಚಿವರ ನುಡಿ
ಎರಡು ದಶಕಗಳಿಗೂ ಹೆಚ್ಚು ಕಾಲದ ವೃತ್ತಿಜೀವನವನ್ನು ಹೊಂದಿರುವ ರಾಜಮೌಳಿ, ಪ್ರಬಲ ನಿರೂಪಣೆ, ನವೀನ ದೃಶ್ಯ, ಆಳವಾದ ಸಾಂಸ್ಕೃತಿಕ ಅನುಕರಣೆಯನ್ನು ಒಟ್ಟಿಗೆ ಹೆಣೆಯುವುದಕ್ಕೆ ಹೆಸರುವಾಸಿಯಾಗಿದ್ದಾರೆ. ಪೂರ್ವ ಆಫ್ರಿಕಾದಾದ್ಯಂತ ವ್ಯಾಪಕವಾದ ಪ್ರವಾಸದ ನಂತರ ಅವರ 120 ಸಿಬ್ಬಂದಿ ಸದಸ್ಯರ ತಂಡವು ಕೀನ್ಯಾವನ್ನು ಆಯ್ಕೆ ಮಾಡಿಕೊಂಡಿತು. ಸುಮಾರು 95% ಆಫ್ರಿಕನ್ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿರುವ ಪ್ರಾಥಮಿಕ ಚಿತ್ರೀಕರಣ ತಾಣವಾಗಿ ನಮ್ಮ ದೇಶವನ್ನು ಆಯ್ಕೆ ಮಾಡಿಕೊಂಡಿತು. ಮಹೇಶ್ ಬಾಬು ಅಭಿನಯದ ಈ ಚಿತ್ರವು 120 ದೇಶಗಳಲ್ಲಿ ಬಿಡುಗಡೆಯಾಗಲಿದೆ ಮತ್ತು ವಿಶ್ವಾದ್ಯಂತ ಒಂದು ಶತಕೋಟಿಗೂ ಹೆಚ್ಚು ವೀಕ್ಷಕರನ್ನು ತಲುಪಲಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.