ಶಿವಮೊಗ್ಗ: ಇತಿಹಾಸ ಪ್ರಸಿದ್ಧ ಸಾಗರದ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ ಕಳೆದ ಒಂದು ವಾರದಿಂದ ಅದ್ಧೂರಿಯಾಗಿ ನಡೆಯುತ್ತಿದ್ದು, ಇದೇ ಮೊದಲ ಬಾರಿಗೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ದೇವಿಯ ದರ್ಶನ ಪಡೆದರು.
ಜಾತ್ರಾ ಮಹೋತ್ಸವದ ಕೊನೆಯ ದಿನವಾದ ಇಂದು ಮೈಸೂರು ರಾಜವಂಶಸ್ಥೆ ಪ್ರಮೋದದೇವಿ ಒಡೆಯರ್ ಸಾಗರಕ್ಕೆ ಭೇಟಿ ನೀಡಿ ಮಾರಿಕಾಂಬಾ ದೇವಿಯ ದರ್ಶನ ಪಡೆದು, ದೇವಿಗೆ ಬಾಗಿನ ಅರ್ಪಿಸಿದರು. ಅದೇ ರೀತಿ ಕಳೆದ ಒಂದು ವಾರದಿಂದ ಪ್ರತಿನಿತ್ಯ ನೂರಾರು ಭಕ್ತರು ಆಗಮಿಸಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆಯುತ್ತಿದ್ದಾರೆ.
ಮೂರು ವರ್ಷಕ್ಕೊಮ್ಮೆ ನಡೆಯುವ ಸಾಗರದ ಮಾರಿಕಾಂಬಾ ದೇವಿ ಜಾತ್ರೆಗೆ ಈ ಹಿಂದೆ ಮೈಸೂರು ಒಡೆಯರ್ ವಂಶಸ್ಥರು ಆಗಮಿಸಿ ದೇವಿ ದರ್ಶನ ಪಡೆದು ಬಾಗಿನ ಅರ್ಪಿಸುತ್ತಿದ್ದರು ಎಂಬ ಇತಿಹಾಸವಿದೆ. ಆದರೆ ಕಳೆದ ಹಲವು ವರ್ಷಗಳಿಂದ ಒಡೆಯರ್ ವಂಶಸ್ಥರು ಭೇಟಿ ನೀಡಿರಲಿಲ್ಲ. ಕಳೆದ ಬಾರಿ ಯುವರಾಜ ಯದುವೀರ್ ಒಡೆಯರ್ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ದೇವಿ ದರ್ಶನ ಪಡೆದಿದ್ದರಂತೆ.
ಇದೀಗ ಇದೇ ಮೊದಲ ಬಾರಿಗೆ ರಾಜಮಾತೆ ಪ್ರಮೋದದೇವಿ ಒಡೆಯರ್ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ದೇವಿ ದರ್ಶನ ಪಡೆದಿದ್ದಾರೆ. ದೇವಿಗೆ ನಮಿಸಿ, ದೇಶ ಹಾಗೂ ರಾಜ್ಯ ಸುಭೀಕ್ಷವಾಗಿರಲಿ, ಉತ್ತಮ ಮಳೆ, ಬೆಳೆ ಬರಲಿ ಎಂದು ದೇವಿಯಲ್ಲಿ ಪ್ರಾರ್ಥನೆ ಮಾಡಿರುವುದಾಗಿ ತಿಳಿಸಿದರು.
ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಪ್ರತಿನಿತ್ಯ ಮುಂಜಾನೆಯಿಂದ ರಾತ್ರಿಯವರೆಗೂ ಪ್ರಸಾದ ವಿನಿಯೋಗದ ವ್ಯವಸ್ಥೆಯನ್ನು ಮಾಡಲಗಿದ್ದು, ನೂರಾರು ಭಕ್ತರು ದೇವಿಯ ದರ್ಶನಕ್ಕೆ ಆಗಮಿಸುತ್ತಿದ್ದಾರೆ.