ಬಾಲಿವುಡ್ ನಲ್ಲಿ ತಯಾರಾದ ಆದಿ ಪುರುಷ್ (Adipurush) ಸಿನಿಮಾ ಕುರಿತು ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ. ಇದರ ಬೆನ್ನೆಲ್ಲೇ ಸಿನಿಮಾವನ್ನು ಬೈಕಾಟ್ ಮಾಡಬೇಕು ಎಂಬ ಕೂಗು ಎದ್ದಿದೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ಬಿಜೆಪಿ ನಾಯಕರು ದಿನಕ್ಕೊಂದು ಹೇಳಿಕೆ ಕೊಡುತ್ತಿದ್ದಾರೆ. ಬಿಜೆಪಿ ನಾಯಕರ ಹೇಳಿಕೆಗೆ ರಾಜ್ ಠಾಕ್ರೆ (Raj Thackeray) ನೇತೃತ್ವದ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಪ್ರತ್ಯುತ್ತರ ಕೊಟ್ಟಿದೆ. ನಿಜವಾದ ರಾವಣನನ್ನು ಬಿಜೆಪಿಯವರು ನೋಡಿದ್ದಾರಾ ಎಂಬ ಪ್ರಶ್ನೆಯನ್ನು ಕೇಳಿದೆ.
ಸಿನಿಮಾದ ನಿರ್ದೇಶಕ ಓಂ ರಾವತ್ ನಿಜವಾದ ಹಿಂದೂತ್ವವಾದಿ. ಅವರು ಹಿಂದೂ. ಹಾಗಾಗಿ ಹಿಂದೂ ಧರ್ಮವನ್ನು ಹಾಗೂ ಮಹಾಕಾವ್ಯಗಳನ್ನು ಅವಮಾನ ಮಾಡುವಂತಹ ಕೆಲಸಕ್ಕೆ ಅವರು ಮುಂದಾಗಲಾರರು. ಹಿಂದೂ ಹೆಸರಿನಲ್ಲಿ ಬಿಜೆಪಿ (BJP)ಅಹಿತಕರ ವಾತಾವರಣ ಸೃಷ್ಟಿ ಮಾಡುತ್ತಿದೆ. ಟ್ರೇಲರ್ ನೋಡಿಯೇ ಇಷ್ಟೊಂದು ಗಲಾಟೆ ಮಾಡುವುದು ಸರಿಯಲ್ಲ. ಸಿನಿಮಾ ನೋಡಿದ ನಂತರ ಮಾತನಾಡಿ ಎಂದಿದ್ದಾರೆ ಮಹಾರಾಷ್ಟ್ರ (Maharashtra) ನವ ನಿರ್ಮಾಣ ಸೇನೆಯ ನಾಯಕ ಅಮೇಯಾ ಕೋಪ್ಕರ್ (Ameyah Kopkar).
ಇತ್ತೀಚೆಗಷ್ಟೇ ಬಿಡುಗಡೆ ಆಗಿರುವ ಟೀಸರ್ ಕೂಡ ಕಳಪೆ ಮಟ್ಟದ್ದಾಗಿದೆ ಎಂದು ಟ್ರೋಲಿಗರು ಸಿನಿಮಾ ಬೆನ್ನು ಬಿದ್ದಿದ್ದು, ಈ ನಡುವೆ ಮಧ್ಯ ಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಚಿತ್ರತಂಡಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ಆದ ಪ್ರಮಾದಗಳನ್ನು ಪಟ್ಟಿ ಮಾಡಿರುವ ಅವರು, ತಪ್ಪುಗಳನ್ನು ತಿದ್ದಿಕೊಳ್ಳಲು ಸೂಚಿಸಿದ್ದಾರೆ. ಇದನ್ನೂ ಓದಿ:ಪವನ್ ಒಡೆಯರ್ ಬಾಲಿವುಡ್ ಚಿತ್ರಕ್ಕೆ ಕ್ರಿಕೆಟಿಗ ಹರ್ಭಜನ್ ಸಿಂಗ್ ಪತ್ನಿ ನಾಯಕಿ
ಆದಿಪುರುಷ್ ಸಿನಿಮಾದಲ್ಲಿ ಹಿಂದೂಗಳ ಭಾವನೆ ಧಕ್ಕೆ ಮಾಡಲಾಗಿದೆ ಎಂದು ಗೃಹ ಸಚಿವರು ಆರೋಪಿಸಿದ್ದು, ಈಗಾಗಲೇ ಬಿಡುಗಡೆಗೊಂಡ ಟೀಸರ್ ನಲ್ಲಿ ಹನುಮಂತ ಪಾತ್ರಧಾರಿಗೆ ಲೆದರ್ ಬಟ್ಟೆಗಳನ್ನು ತೊಡಿಸಲಾಗಿದೆ. ಹನುಮನ ಸೈನ್ಯಕ್ಕೂ ಲೆದರ್ ಬಟ್ಟೆ ಇದೆ. ಹೀಗಾಗಿ ಹನುಮ ದೇವರಿಗೆ ಅಪಮಾನ ಮಾಡಲಾಗಿದೆ ಎಂದು ಗೃಹ ಸಚಿವ ನರೋತ್ತಮ್ ಮಿಶ್ರಾ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಅದನ್ನು ಸರಿ ಮಾಡದೇ ಇದ್ದರೆ ಪರಿಣಾಮ ಸರಿ ಇರಲ್ಲ ಎಂದು ಚಿತ್ರತಂಡಕ್ಕೆ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಮಿಶ್ರಾ, ಲೆದರ್ ಬಟ್ಟೆಗಳನ್ನು ಹಾಕಿರುವ ಕುರಿತು ನಿರ್ದೇಶಕರಿಗೆ ಮತ್ತು ನಿರ್ಮಾಪಕರಿಗೆ ಪತ್ರ ಬರೆಯುವುದಾಗಿ ತಿಳಿಸಿರುವ ಅವರು, ಒಂದು ವೇಳೆ ಆ ದೃಶ್ಯಗಳನ್ನು ತಗೆದು ಹಾಕದೇ ಇದ್ದರೆ ಕಾನೂನು ಕ್ರಮಕ್ಕೂ ತಾವು ಹಿಂಜರಿಯುವುದಿಲ್ಲ ಎನ್ನುತ್ತಾರೆ. ಇಂತಹ ಅಪಮಾನಗಳನ್ನು ಯಾವತ್ತಿಗೂ ಹಿಂದೂಗಳ ಸಹಿಸುವುದಿಲ್ಲ ಎಂದೂ ಅವರು ಹೇಳಿದ್ದಾರೆ.
ಆದಿ ಪುರುಷ್ ಟೀಸರ್ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ಸ್ವತಃ ಪ್ರಭಾಸ್ ಕೂಡ ಕೋಪ ಮಾಡಿಕೊಂಡಿದ್ದಾರೆ. ಟೀಸರ್ ಬಿಡುಗಡೆ ಸಮಾರಂಭ ಮುಗಿದ ನಂತರ ನಿರ್ದೇಶಕರನ್ನು ತಮ್ಮ ರೂಮ್ ಗೆ ಕರೆದು ಬೈದಿದ್ದಾರೆ ಎಂದು ಹೇಳಲಾಗುತ್ತಿದೆ. ಇದಲ್ಲದೇ ಸೈಫ್ ಅಲಿ ಖಾನ್ ಅವರಿಗೆ ರಾವಣನ ಪಾತ್ರ ಕೊಟ್ಟಿದ್ದಕ್ಕೂ ಹಲವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ರಾವಣನ ರೀತಿಯಲ್ಲಿ ಅವರು ಕಾಣುತ್ತಿಲ್ಲ ಎಂದು ಟ್ರೋಲ್ ಮಾಡುತ್ತಿದ್ದಾರೆ.