ರಾಯ್ಪುರ್: ತೆಂಗಿನಕಾಯಿಯ ಸಹಾಯದಿಂದ ವ್ಯಕ್ತಿಯ ಬ್ಲಡ್ ಗ್ರೂಪ್ ಯಾವುದು ಎಂದು ಪತ್ತೆ ಮಾಡುವುದಾಗಿ ಛತ್ತೀಸ್‍ಗಢದ ರಾಯ್ಪುರ ಮೂಲದ ವ್ಯಕ್ತಿಯೊಬ್ಬರು ಹೇಳಿದ್ದಾರೆ.
ರಾಜ್ಯ ಕೃಷಿ ಇಲಾಖೆಯ ನೌಕರರಾಗಿರುವ ಬಿ.ಡಿ. ಗುಹಾ, ತೆಂಗಿನಕಾಯಿಯನ್ನು ತನ್ನ ಕೈ ಮೇಲೆ ಇಟ್ಟುಕೊಂಡು ವ್ಯಕ್ತಿಯ ತಲೆ ಮೇಲೆ ಹಿಡಿದು ಅವರ ರಕ್ತದ ಗುಂಪು ಯಾವುದು ಎಂಬುದನ್ನ ನಿಖರವಾಗಿ ಹೇಳ್ತಾರಂತೆ. ಈ ರೀತಿ ತೆಂಗಿನಕಾಯಿಯ ಸಹಾಯದಿಂದಲೇ ಸಾಕಷ್ಟು ಜನರ ಬ್ಲಡ್ ಗ್ರೂಪ್ ಯಾವುದು ಎಂಬುದನ್ನ ಪತ್ತೆ ಮಾಡಿದ್ದಾರಂತೆ. ಗುಹಾ ಅವರು ಹೇಳಿದ್ದು ಸರಿಯೇ ಎಂದು ತಿಳಿದುಕೊಳ್ಳಲು ಗ್ರಾಹಕರು ಲ್ಯಾಬ್‍ನಲ್ಲೂ ಪರೀಕ್ಷೆ ಮಾಡಿಸಿದ್ದಾರೆ.
ಪರೀಕ್ಷೆಗೆ ಒಳಪಡುವ ವ್ಯಕ್ತಿ ನಿಂತ ಸ್ಥಳದ ಕೆಳಗೆ ನೀರು ಇದ್ದಾಗ ಮಾತ್ರ ತನ್ನ ಊಹೆ ತಪ್ಪಾಗುತ್ತದೆ ಎಂದು ಗುಹಾ ಹೇಳಿದ್ದಾರೆ. ಈ ರೀತಿ ಬ್ಲಡ್‍ಗ್ರೂಪ್ ಪರೀಕ್ಷೆ ಮಾಡೋದಕ್ಕೆ ತುಂಬಾ ಕಡಿಮೆ ಸಮಯ ಬೇಕಾಗೋದ್ರಿಂದ ಗುಹಾ ಅವರ ಗ್ರಾಹಕರೂ ಕೂಡ ಇದನ್ನ ಮೆಚ್ಚಿದ್ದಾರೆ.
ಆದ್ರೆ ಪ್ಯಾಥೋಲೋಜಿಸ್ಟ್ ದರ್ಶನ್ ಜೈನ್ ಎಂಬವರು ಈ ವಿಧಾನವನ್ನ ತಿರಸ್ಕರಿಸಿದ್ದಾರೆ. ಇದು ಅವೈಜ್ಞಾನಿಕವಾಗಿದ್ದು, ರಕ್ತ ನೀಡುವ ಮತ್ತು ಪಡೆಯುವ ಇಬ್ಬರಿಗೂ ಇದರಿಂದ ಸಮಸ್ಯೆಯಾಗುತ್ತದೆ ಎಂದಿದ್ದಾರೆ.
ಗುಹಾ ಅವರು 2005ರಿಂದ ಈ ವಿಧಾನದ ಬಗ್ಗೆ ಅಭ್ಯಾಸ ಮಾಡುತ್ತಾ ಬಂದಿದ್ದಾರೆ. ತೆಂಗಿನಕಾಯಿ ಯಾವ ದಿಕ್ಕನಲ್ಲಿ ಅಲುಗಾಡುತ್ತದೆ ಎಂಬುದನ್ನ ಆಧರಿಸಿ ಈವರೆಗೆ 5 ರೀತಿಯ ಬ್ಲಡ್‍ಗ್ರೂಪ್‍ಗಳನ್ನ ಕಂಡುಹಿಡಿಯುವಲ್ಲಿ ಸಮರ್ಥನಾಗಿದ್ದೇನೆ ಎಂದು ಹೇಳಿದ್ದಾರೆ.