ಉಡುಪಿ: ನಮ್ಮ ಜಲಜಾಗೃತಿಯ ಕೊರತೆಯಿಂದಾಗಿ ಅತ್ಯಂತ ಹೆಚ್ಚು ಮಳೆಯಾಗುವ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳೂ ಸಹ ನೀರಿನ ಸಮಸ್ಯೆ ಎದುರಿಸುತ್ತಿರುವುದು ಕಳವಳಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಮಳೆನೀರು ಕೊಯ್ಲು ಅಳವಡಿಸಿಕೊಳ್ಳದಿದ್ದರೆ ಭವಿಷ್ಯವಿಲ್ಲ ಎಂದು ಜಲತಜ್ಞ ಜೋಸೆಫ್ ರೆಬೆಲ್ಲೋ ಎಚ್ಚರಿಕೆ ನೀಡಿದ್ದಾರೆ.
Advertisement
ಉಡುಪಿ ಜಿಲ್ಲೆಯ ಮಂದರ್ತಿ ಸಮೀಪದ ಕಾಡೂರು ಗ್ರಾಮ ಪಂಚಾಯತ್ ನಲ್ಲಿ ಜರುಗಿದ ಮಳೆನೀರು ಕೊಯ್ಲು ಕಲಿಕಾ ಭೇಟಿ ಹಾಗೂ ಪ್ರಾತ್ಯಕ್ಷಿಕೆ ಮತ್ತು ಘನ ಸಂಪನ್ಮೂಲ ನಿರ್ವಹಣೆ ಕುರಿತು ಮಾಹಿತಿ ನೀಡಿದ ಜೋಸೆಫ್ ರೆಬೆಲ್ಲೋ ಅವರು, ಪ್ರತಿಯೊಬ್ಬರೂ ಮಳೆನೀರು ಕೊಯ್ಲು ಅಳವಡಿಸಿಕೊಂಡಲ್ಲಿ ಅಂತರ್ಜಲ ಕೊರತೆ ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ. ಇಲ್ಲದೆ ಇದ್ದರೆ ಭವಿಷ್ಯದಲ್ಲಿ ನೀರಿನ ಕೊರತೆ ಎದುರಾಗಲಿದೆ ಎಂದು ಮನವರಿಕೆ ಮಾಡಿಕೊಟ್ಟರು. ಇದನ್ನೂ ಓದಿ: ಮೆಸ್ಕಾಂ ಸಿಬ್ಬಂದಿ ಜೊತೆ ಸಚಿವ ಸುನೀಲ್ ಕುಮಾರ್ ಹುಟ್ಟುಹಬ್ಬದ ಸಿಹಿಯೂಟ
Advertisement
ಕಾಡೂರು ಗ್ರಾಮ ಪಂಚಾಯತ್ ಅಧ್ಯಕ್ಷ ಪಾಂಡುರಂಗ ಶೆಟ್ಟಿ ನಡೂರು ಮಾತನಾಡಿ, ಇಂತಹ ಕಲಿಕಾಭೇಟಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮಗಳಿಂದ ತ್ಯಾಜ್ಯ ವಿಲೇವಾರಿ ಹಾಗೂ ಜಲಸಂರಕ್ಷಣೆ ನಿಟ್ಟಿನಲ್ಲಿ ಮಾಹಿತಿ ವಿನಿಮಯ ಹಾಗೂ ಅನುಷ್ಠಾನಕ್ಕೆ ಸಹಕಾರಿ ಎಂದರು. ಕಾಡೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಕೆ. ಮಾತನಾಡಿ ಗ್ರಾಮ ಪಂಚಾಯತ್ ಮೂಲಕ ನೀರಿನ ಸಂರಕ್ಷಣೆ ಹಾಗೂ ದ್ರವತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಹಲವು ಯೋಜನೆಗಳ ಮೂಲಕ ಅವಕಾಶವಿದ್ದು ಸಾರ್ವಜನಿಕರಿಗೆ ಮಾಹಿತಿ ನೀಡುವುದು ಅಗತ್ಯವಿದೆ ಎಂದರು.
Advertisement
Advertisement
ಜಿಲ್ಲಾ ಪಂಚಾಯತ್ ಉಡುಪಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ,ಪುಣ್ಯ ಕೋಟಿ ಸಂಸ್ಥೆ(ರಿ) ಮತ್ತು ಕಾಡೂರು ಪಂಚಾಯತ್ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಹೆಗ್ಗುಂಜೆ, ಕೊಕ್ಕರ್ಣೆ, ನೀಲಾವರ, ಹನೇಹಳ್ಳಿ ಗ್ರಾಮ ಪಂಚಾಯತ್ ಗಳ ಅಧ್ಯಕ್ಷರು, ಉಪಾಧ್ಯಕ್ಷರು, ಗ್ರಾಮ ಪಂಚಾಯತ್ ಸದಸ್ಯರು, ನೀರು ನೈರ್ಮಲ್ಯ ಸಮಿತಿಯ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. ಪುಣ್ಯಕೋಟಿ ಗ್ರಾಮಾಭಿವೃದ್ಧಿ ಸಂಸ್ಥೆಯ ಪ್ರತಿನಿಧಿಗಳಾದ ನೇತ್ರಾವತಿ, ಪಾಂಡು, ದಿವಾಕರ್ ಮತ್ತು ಎಸ್‍ಎಲ್‍ಆರ್‍ಎಮ್ ಘಟಕದ ಮೇಲ್ವಿಚಾರಕರು ಮತ್ತು ಸಿಬ್ಬಂದಿ ಈ ಸಂದರ್ಭದಲ್ಲಿ ಹಾಜರಿದ್ದರು. ಇದನ್ನೂ ಓದಿ: ಯಡಿಯೂರಪ್ಪನವರ ಆಶೀರ್ವಾದದಿಂದ ಗೃಹಸಚಿವನಾಗಿದ್ದೇನೆ: ಅರಗ ಜ್ಞಾನೇಂದ್ರ