ನಾನಿಂದು ಅಸಹಾಯಕಳಾಗಿದ್ದೇನೆ. ಕಣ್ಣೆದುರೇ ನನ್ನ ಕರುಳ ಬಳ್ಳಿಗಳು ನರಕಯಾತನೆ ಅನುಭವಿಸ್ತಾ ಇದ್ರೂ ಏನೂ ಮಾಡಲಾಗದಂತಹಾ ಸ್ಥಿತಿಯಲ್ಲಿ ನಾನಿದ್ದೇನೆ. ನನ್ನನ್ನ ನೀವು ಕರುನಾಡ ಕಾಶ್ಮೀರ ಅಂದ್ರಿ. ಚುಮು ಚುಮು ಚಳಿ, ಕಾಫೀ ಘಮಲು, ಕರಿ ಮೆಣಸಿನ ಘಾಟು, ಕೊಡವರ ವೀರಗಾಥೆ, ಅಬ್ಬಿ, ರಾಜಾಸೀಟ್, ಓಂಕಾರೇಶ್ವರನ ಸಾನಿಧ್ಯ, ಬ್ರಹ್ಮಗಿರಿ ಬೆಟ್ಟ ಹೀಗೆ ನನ್ನನ್ನ ನೀವು ಮನಸಾರೆ ಹೊಗಳಿದ್ರಿ. ಆದ್ರೆ.ಆದ್ರೆ, ಇಂದು ನನಗೇನಾಗಿದೆ? ಇಂದಿನ ನನ್ನ ದುಸ್ಥಿತಿ ಯಾರಿಗೂ ಬರೋದು ಬೇಡ. ನನ್ನ ಮಕ್ಕಳನ್ನು ನಾನೇ ರಕ್ಷಿಸಿಕೊಳ್ಳಲಾಗದಷ್ಟು ಸೋತು ಹೋಗಿದ್ದೇನೆ. ಯಾಕೋ ನನ್ನ ಮೇಲೆ ಮಳೆರಾಯ ಮುನಿಸಿಕೊಂಡಿದ್ದಾನೆ. ನನ್ನವರ ಆರ್ತನಾದ, ನರಳಾಟ, ದುಃಖಕ್ಕೆ ಅರಣ್ಯರೋದನೆ ಮಾಡೋದಷ್ಟೇ ನನಗುಳಿದಿರೋದು.
Advertisement
ಮಳೆಗೆ ಹತ್ತಾರು ಮನೆಗಳು ಕುಸೀತಂತೆ. ಸಾಕಷ್ಟು ಜನ ಮನೆ ಮಠ ಕಳೆದುಕೊಂಡು ಬೀದಿಗೆ ಬಂದ್ರಂತೆ. ರಕ್ಷಣೆಗೆ ನಿಂತಿದ್ದ ಬೆಟ್ಟ ಗುಡ್ಡಗಳೇ ನಾಮಾವಶೇಷವಾದ್ವು. ನೂರಾರು ವರ್ಷಗಳಿಂದ ತಲೆ ಎತ್ತಿ ಆಕಾಶ ನೋಡಿ ಬೆಳೆದಿದ್ದ ಮರಗಳು ನೆಲಕ್ಕುರುಳಿದಾಗ ಹೆತ್ತ ಕರುಳು ನನಗೆ ಅದೆಷ್ಟು ಸಂಕಟವಾಗಿದ್ದಿರಬೇಡ. ತಾಯಿ ಯಾವತ್ತಿಗೂ ಕೆಟ್ಟವಳಾಗಿರೋಕೆ ಸಾಧ್ಯವೇ ಇಲ್ವಂತೆ. ಆದ್ರೆ, ಕಾವೇರಿ ತಾಯಿಯ ಮಡಿಲಲ್ಲಿ ಆಡಿ ಕುಣಿದ ಮಕ್ಕಳಿಗೆ ಅದೆಂಥಾ ಶಿಕ್ಷೆ? ಮನೆಯಲ್ಲಿ ಇರೋಣ ಅಂದ್ರೆ ಅಲ್ಲೂ ಪ್ರವಾಹ. ಇದನ್ನು ಓದಿ: ಕೊಡಗು ಸಂತ್ರಸ್ತರಿಗೆ ಸಹಾಯ ಮಾಡಿ- ಏನು ಕೊಡಬಹುದು? ಯಾರನ್ನು ಸಂಪರ್ಕಿಸಬಹುದು? ಇಲ್ಲಿದೆ ವಿವರ
Advertisement
ಹೊರಗೆ ಹೋಗೋಣ ಅಂದ್ರೂ ಮತ್ತೆ ವಾಪಾಸ್ ಬರೋ ಗ್ಯಾರಂಟಿ ಇಲ್ಲ. ಪುಟ್ಟ ಪುಟ್ಟ ಕಂದಮ್ಮಗಳು, ವೃದ್ಧರು, ಜನಸಾಮಾನ್ಯರು ತಮ್ಮ ಜೀವ ಉಳಿದ್ರೆ ಸಾಕಪ್ಪಾ ಅನ್ನೋ ಸ್ಥಿತಿಯಲ್ಲಿದ್ದಾರೆ. ಇದು ಯಾರು ಮಾಡಿದ ತಪ್ಪಿಗೆ ಶಿಕ್ಷೆ? ನನ್ನ ಮಕ್ಕಳು ಮಾಡಿದ ಮಹಾಪರಾಧವಾದ್ರೂ ಏನು? ಹೇಳಿ ನಾನು ಯಾರಲ್ಲಿ ನ್ಯಾಯ ಕೇಳಲಿ? ಹೆಲಿಕಾಪ್ಟರ್ ಗಳ ಮೂಲಕ ರಕ್ಷಣೆ ಮಾಡ್ತಾರಂತೆ. ಸಂತ್ರಸ್ತರಿಗೆ ಗಂಜಿ ಕೇಂದ್ರ ತೆರೆದಿದ್ದಾರಂತೆ. ಪುನರ್ವಸತಿಗೆ ತಾತ್ಕಾಲಿಕ ವ್ಯವಸ್ಥೆಯಾಗಿದೆಯಂತೆ. ಈ ಸುದ್ದಿಗಳನ್ನು ಕೇಳುವಾಗ ಬಹುಶಃ ನೀವು ದಿಗ್ಭ್ರಾಂತರಾಗಿರ್ತೀರೇನೋ. ಆದ್ರೆ, ನಾನೋ ಹೆತ್ತಬ್ಬೆ. ನನ್ನ ಕರುಳಿಗೇ ಕೊಡಲಿ ಏಟು ಹಾಕಿದಂತಾಗಿದೆ. ಅಯ್ಯೋ.ಅಮ್ಮಾ ಅನ್ನೋ ಆರ್ತನಾದ ಕೇಳಿದಾಗ ನನ್ನ ಕರುಳ ಕುಡಿಗಳನ್ನು ತಬ್ಬಿಕೊಂಡು ಅಳಲಾ? ಅಥ್ವಾ ದೂರದಲ್ಲೆಲ್ಲೋ ಕುಳಿತ ನಿಮ್ಮ ಸಹಾಯಕ್ಕಾಗಿ ತುಂಬಿದ ಕಣ್ಣಾಲಿಗಳಲ್ಲಿ ನಿರೀಕ್ಷೆ ಇಟ್ಟುಕೊಂಡು ಕಾಯಲಾ..? ಒಂದೂ ಅರ್ಥವಾಗುತ್ತಿಲ್ಲ. ಸೂರಿಲ್ಲ, ಸಾರಿಗೆ ಇಲ್ಲ,ಸಂಚಾರ ಇಲ್ಲ,ವಿದ್ಯುತ್ ಇಲ್ಲ, ಹೊಟ್ಟೆಗೆ ಕೂಳಿಲ್ಲ,ಯಾವುದೋ ಅಜ್ಞಾತ ಸ್ಥಳದಲ್ಲಿ ಜೀವವನ್ನ ಒತ್ತೆ ಇಟ್ಟು ಬದುಕೋ ಅನಿವಾರ್ಯತೆ ಯಾಕೆ ಸೃಷ್ಟಿಸಿಬಿಟ್ಟೆ ದೇವ್ರೇ?
Advertisement
Advertisement
ನನಗೀಗ ನಿಮ್ಮ ಸಹಾಯ ಬೇಕಿದೆ. ಅಂದು ಪುಣ್ಯ ಕೋಟಿ ತನ್ನ ಕಂದಮ್ಮನನ್ನ ಉಳಿಸೋಕೆ ತನ್ನ ಓರಗೆಯವ್ರ ಮಡಿಲಿಗೆ ಹಾಕಿ ವ್ರಾಘ್ರನ ಹಸಿವನ್ನು ತಣಿಸೋಕೆ ಹೋದಳಂತೆ. ಇಂದು ನಾನು ಅದೇ ಪುಣ್ಯಕೋಟಿಯ ಸ್ಥಾನದಲ್ಲಿದ್ದೇನೆ. ಮಳೆ ಅನ್ನೋ ವ್ಯಾಘ್ರ ಹಸಿದಿದ್ದಾನೆ ಅನ್ಸುತ್ತೆ. ನನ್ನ ಕಥೆ ಏನೋ ಗೊತ್ತಿಲ್ಲ. ಆದ್ರೆ, ನನ್ನ ಸೆರಗಿನಲ್ಲಿ ಅಡಗಿರೋ ನನ್ನ ಮಕ್ಕಳ ಕೈ ಬಿಡಬೇಡಿ. ನಿಮಗೆ ತೋಚಿದಷ್ಟು ಸಹಾಯ ಮಾಡಿ. ಕೊಡಗಿನ ಮಕ್ಕಳು ಮಾತ್ರವೇ ಅಲ್ಲ. ಇಡೀ ರಾಜ್ಯದ ಜನರಿಗೆ ಸ್ಪಂದಿಸಿ. ಪಕ್ಕದ ಕೇರಳದ ಪರಿಸ್ಥಿತಿಯೂ ನಿಮಗೆ ಗೊತ್ತೇ ಇದೆ. ಮಾನವೀಯತೆಗಿಂತ ದೊಡ್ಡದು ಈ ಪ್ರಪಂಚದಲ್ಲಿ ಬೇರೆ ಏನಿರೋದಕ್ಕೆ ಸಾದ್ಯ ಹೇಳಿ. ನನ್ನನ್ನ ಮತ್ತಷ್ಟು ಕಮರಿಸಬೇಡಿ..ಕೈ ಜೋಡಿಸಿ..ನೆರವಾಗಿ.. ಇಂತೀ ನಿಮ್ಮ ಕೊಡಗು.
ಕ್ಷಮಾ ಭಾರದ್ವಾಜ್
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv