ರಾಯಚೂರು: ಬೆಳೆ ಹಾನಿ ಸರ್ವೆ ವೇಳೆ ಮಾಡಿದ ಎಡವಟ್ಟಿನಿಂದ ನಿಜವಾದ ಫಲನುಭವಿಗಳ ಖಾತೆಗೆ ಪರಿಹಾರ ಬರದೇ ಬೇರೆಯವರು ಬೆಳೆದ ಬೆಳೆಗಳಿಗೆ ಪರಿಹಾರ ಬಂದಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ಈ ಬಾರಿ ವಾಡಿಕೆಗಿಂತಲೂ ಹೆಚ್ಚು ಸಮಯ ಮುಂಗಾರು ಮಳೆ ಸುರಿದಿದ್ದರಿಂದ ಲಕ್ಷಾಂತರ ಎಕರೆಯಲ್ಲಿ ಬೆಳೆದಿದ್ದ ವಿವಿಧ ಬೆಳೆಗಳು ಹಾನಿಗೊಳಗಾಗಿದ್ದವು. ತೊಗರಿ, ಹತ್ತಿ, ಮೆಣಸಿನಕಾಯಿ, ಭತ್ತ, ಟೊಮೆಟೋ ಸೇರಿ ಲಕ್ಷಾಂತರ ಎಕರೆಯಲ್ಲಿ ಬೆಳೆದ ಹಲವಾರು ಬೆಳೆಗಳು ಹಾಳಾಗಿ ರೈತ ಕಂಗಾಲಾಗಿದ್ದ. ಇದರ ಪರಿಹಾರವಾಗಿ ಸಮರ್ಪಕ ಹಣ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಸರ್ವೆ ಕಾರ್ಯ ಸರಿಯಾಗಿ ಮಾಡದೆ, ಹತ್ತಿ ಬೆಳೆದವರಿಗೆ ಭತ್ತ, ಭತ್ತ ಬೆಳೆದವರಿಗೆ ಹತ್ತಿ ಎಂದು ಸರ್ವೆ ಮಾಡಿ ಪರಿಹಾರ ನೀಡಲಾಗಿದೆ. ಅದರಲ್ಲೂ ಕೆಲವರಿಗೆ ಮಾತ್ರ 5 ರಿಂದ 10 ಸಾವಿರ ಪರಿಹಾರ ಹಾಕಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕನಿಷ್ಠ ಕೃಷಿ ವೆಚ್ಚವನ್ನು ಆಧರಿಸಿ ಸರ್ಕಾರ ಪರಿಹಾರ ನೀಡಬೇಕು. ಆದರೆ ಈಗ ಯಾವ ಮಾನದಂಡದ ಮೇಲೆ ಪರಿಹಾರ ನೀಡಲಾಗಿದೆ ಎನ್ನುವುದೇ ತಿಳಿಯದಂತಾಗಿದೆ. ಸರ್ಕಾರ ಇದೇ ರೀತಿ ರೈತರ ಬಗ್ಗೆ ನಿಷ್ಕಾಳಜಿ ಮುಂದುವರಿಸಿದರೆ, ರೈತರು ಯಾವ ರೀತಿ ಕೃಷಿ ಮುಂದುವರಿಸಬೇಕು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಾಜ್ಯಕ್ಕೆ ಮೂರನೇ ಅಲೆ ಬಂದಿದೆ: ಡಾ.ಕೆ.ಸುಧಾಕರ್
ಒಂದೆಡೆ ಮುಕ್ತ ಮಾರುಕಟ್ಟೆಯಲ್ಲಿ ರೈತ ಬೆಳೆದ ಬೆಳೆಗೆ ಬೆಲೆಯಿಲ್ಲ, ಇನ್ನೊಂದೆಡೆ ಬೆಳೆ ಪರಿಹಾರವನ್ನು ಸರಿಯಾಗಿ ನೀಡುತ್ತಿಲ್ಲ ಎಂದು ರಾಜ್ಯ ರೈತ ಸಂಘ ಗೌರವಾಧ್ಯಕ್ಷ ಚಾಮರಸ ಮಾಲೀಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ನಾಯಕ ಮನೋಜ್ ತಿವಾರಿಗೆ ಕೊರೊನಾ ಪಾಸಿಟಿವ್
ಕಳೆದ ಮುಂಗಾರು ವೇಳೆ ಸಿಂಧನೂರು, ಮಸ್ಕಿ, ಮಾನ್ವಿ, ಸಿರವಾರ, ಲಿಂಗಸುಗೂರು ತಾಲೂಕುಗಳಲ್ಲಿ ಹೆಚ್ಚು ಮಳೆ ಹಾನಿ ಸಂಭವಿಸಿದ್ದು, ಸುಮಾರು 1 ಲಕ್ಷ ಹೆಕ್ಟೇರ್‍ಗೂ ಅಧಿಕ ಪ್ರಮಾಣದ ಬೆಳೆ ಹಾನಿಯಾಗಿದೆ. ಈಗಾಗಲೇ ಕೆಲವು ಬೆಳೆಗಳಿಗೆ ಎನ್‍ಡಿಆರ್‍ಎಫ್ ನಿಯಮಗಳ ಪ್ರಕಾರ ಬೆಳೆ ಹಾನಿ ಪರಿಹಾರ ನೀಡಲಾಗಿದೆ. ಜೊತೆಗೆ ಡಬಲ್ ಪರಿಹಾರವನ್ನೂ ಸರ್ಕಾರ ನೀಡಲು ಮುಂದಾಗಿದೆ. ಪರಿಹಾರ ಎಲ್ಲಾ ರೈತರಿಗೆ ಜಮಾ ಆಗಿದೆ. ಆದರೆ ಸರ್ವೆಯಲ್ಲಿ ಬೆಳೆ ಬದಲಾವಣೆ ಆಗಿರುವುದು ಗಮನಕ್ಕೆ ಬಂದಿಲ್ಲ. ಅಂತಹ ಪ್ರಕರಣ ಕಂಡುಬಂದರೆ ಸರಿ ಪಡಿಸುತ್ತೇವೆ ಎಂದು ರಾಯಚೂರು ಸಹಾಯಕ ಆಯುಕ್ತ ಸಂತೋಷ್ ಕಾಮೇಗೌಡ ತಿಳಿಸಿದರು.