– ಸಿಡಿಲು ಬಡಿದು ಇಬ್ಬರ ಸಾವು – ಹಲವೆಡೆ ಹಾನಿ
ಬೆಂಗಳೂರು: ಬಿಸಿಲಿನಿಂದ ಕೆಂಗಟ್ಟಿದ್ದ ಜನರು ಮಳೆಯಿಂದಾಗಿ (Rain) ನಿಟ್ಟುಸಿರು ಬಿಟ್ಟಿದ್ದಾರೆ. ಬಿಸಿಲಿನಿಂದ ಕಾದು ಬೆಂಡಾಗಿದ್ದ ಜನರ ಜೀವನಕ್ಕೆ ಮಳೆಯ ಸಿಂಚನವಾಗಿದ್ದು. ಕೊಂಚಮಟ್ಟಿಗೆ ಜನರಿಗೆ ನೆಮ್ಮದಿ ಸಿಕ್ಕಂತಾಗಿದೆ.
ಮಳೆಯಿಂದಾಗಿ ರೈತರ (Farmers) ಮೊಗದಲ್ಲಿ ಮಂದಹಾಸ ಮೂಡಿದೆ. ಮಳೆಯಿಂದಾಗಿ ಕೆಲವು ಅವಾಂತರಗಳು ಸೃಷ್ಟಿಯಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಡಿಲು ಬಡಿದು ನವವಿವಾಹಿತ ಸಾವನ್ನಪ್ಪಿದ್ದಾನೆ. ಕಡಬ ತಾಲೂಕಿನ ಸುಬ್ರಹ್ಮಣ್ಯದ ನಿವಾಸಿ ಸೋಮಶೇಖರ್ 10 ದಿನಗಳ ಹಿಂದಷ್ಟೇ ವಿವಾಹವಾಗಿದ್ದ. ಭಾರೀ ಸಿಡಿಲು ಸಹಿತ ಮಳೆ ವೇಳೆ ಅಂಗಳದಲ್ಲಿದ್ದ ಅಡಿಕೆ ರಾಶಿ ಮಾಡುತ್ತಿದ್ದಾಗ ಸಿಡಿಲು ಬಡಿದಿದೆ. ಆಸ್ಪತ್ರೆಗೆ ರವಾನಿಸುವ ವೇಳೆ ಯುವಕ ಸಾವನ್ನಪ್ಪಿದ್ದಾನೆ. ಅಲ್ಲದೇ ಕೊಡಗು ಜಿಲ್ಲೆಯಲ್ಲಿ ಗುಡುಗು, ಸಿಡಿಲು ಸಹಿತ ಮಳೆಯಿಂದಾಗಿ ಒಡಿಶಾ (Odisha) ಮೂಲದ ಕಾರ್ಮಿಕನೋರ್ವ ಮೃತಪಟ್ಟಿದ್ದಾನೆ.
Advertisement
Advertisement
ಮಂಡ್ಯದಲ್ಲಿ ಅವಾಂತರ:
ಮಂಡ್ಯದಲ್ಲಿ (Mandya Rain) ಗುಡುಗು-ಸಿಡಿಲು, ಬಿರುಗಾಳಿ ಸಹಿತ ಮಳೆಯಿಂದಾಗಿ ಭಾರೀ ಅವಾಂತರಗಳು ಸೃಷ್ಟಿಯಾಗಿವೆ. ಮಂಡ್ಯದ ಬೀಡಿ ಕಾಲೋನಿಯಲ್ಲಿ ಬಿರುಗಾಳಿಗೆ ಅನೇಕ ವಿದ್ಯತ್ ಕಂಬಗಳು ಧರೆಗುರುಳಿವೆ. ಇನ್ನೂ ಮನೆಗಳ ಮೇಲೂ ಕಂಬಗಳು ಮುರಿದು ಬಿದ್ದಿವೆ. ಶುಕ್ರವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ರಾಮನಗರ ತಾಲೂಕಿನ ಕೆಲವೆಡೆ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಅಲ್ಲದೇ ಸಿಡಿಲ ಬಡಿತಕ್ಕೆ ರಾಮನಗರದ ಜಾನಪದ ಲೋಕದಲ್ಲಿ ನಿರ್ಮಿಸಿದ್ದ ಶೆಡ್‌ವೊಂದು ಬೆಂಕಿಗಾಹುತಿಯಾಗಿದೆ.
Advertisement
ಚಿಕ್ಕಬಳ್ಳಾಪುರದಲ್ಲಿ ನೆಲಕಚ್ಚಿದ ಬೆಳೆ:
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದ್ದು, ರೈತರು ಬೆಳೆದಿದ್ದ ಟೊಮೆಟೊ ಬೆಳೆಗಳು ನಾಶವಾಗಿವೆ. ಆಲಿಕಲ್ಲು ರಭಸಕ್ಕೆ ಗಿಡಗಳೆಲ್ಲವೂ ಹಾಳಾಗಿ ನೆಲಕಚ್ಚಿದ್ದು, ಸಾಲಸೋಲ ಮಾಡಿ ರೈತರು ಬೆಳೆ ಮಳೆ ಪಾಲಾಗಿ ಲಕ್ಷಾಂತರ ರೂಪಾಯಿ ನಷ್ಟಕ್ಕೀಡಾಗಿದ್ದಾರೆ.
Advertisement
ಕೊಡಗಿನಲ್ಲಿ ಗುಡುಗು ಸಹಿತ ಮಳೆ:
ಕೊಡಗು ಜಿಲ್ಲೆಯಾದ್ಯಂತ ಗುಡುಗು ಸಹಿತ ಮಳೆಯಾಗಿದ್ದು, ರೈತರಲ್ಲಿ ಹರ್ಷ ಮೂಡಿದೆ. ಕೋಲಾರದ ಬಂಗಾರಪೇಟೆಯಲ್ಲಿ ಗುಡುಗು ಸಿಡಿಲಿಗೆ ಎರಡು ಹಸುಗಳು ಸಾವನ್ನಪ್ಪಿವೆ. ಚಾಮರಾಜನಗರ ಜಿಲ್ಲೆಯಲ್ಲಿ ಮೂರು ಜಾನುವಾರುಗಳು ಸಾವನ್ನಪ್ಪಿವೆ. ಹೈನುಗಾರಿಕೆಯನ್ನು ಕಸುಬಾಗಿಸಿಕೊಂಡಿದ್ದ ರೈತ ಸದ್ಯ ಕಂಗಾಲಾಗಿದ್ದಾನೆ.
ಚಾ.ನಗರದಲ್ಲಿ ನೂರಾರು ಎಕರೆ ಬೆಳೆನಾಶ:
ಚಾಮರಾಜನಗರ ತಾಲೂಕಿನಲ್ಲಿ ಸಿಡಿಲು ಬಡಿದು ತೆಂಗಿನ ಮರ ಹೊತ್ತಿ ಉರಿದಿದೆ. ಗುಂಡ್ಲುಪೇಟೆ ತಾಲೂಕಿನಲ್ಲಿ ಬಿರುಗಾಳಿ ಹೊಡೆತಕ್ಕೆ ನೂರಾರು ಎಕರೆ ಬಾಳೆ ಬೆಳೆ ನೆಲಕಚ್ಚಿದೆ. ಇನ್ನೂ ಹಾಸನ ತಾಲೂಕಿನಲ್ಲೂ ವರಣದೇವ ತಂಪೆರೆದಿದ್ದು, ದಿಢೀರ್ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ.