ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೋಮವಾರ ಸಾಯಂಕಾಲದಿಂದ ಭಾರೀ ಮಳೆಯಾಗಿದೆ. ರಾತ್ರಿಯಿಡಿ ಹಲವೆಡೆ ಧಾರಾಕಾರ ಮಳೆ ಸುರಿದಿದೆ. ಇದರಿಂದ ರಸ್ತೆಗಳು ಜಲಾವೃತಗೊಂಡಿದ್ದು, ಅನೇಕ ಕಡೆ ಮಳೆಗೆ ಮರಗಳು ಧರೆಗುರುಳಿವೆ.
ಬೆಂಗಳೂರಲ್ಲಿ ಮಳೆ ಅವಾಂತರಕ್ಕೆ ರಸ್ತೆಯಲ್ಲಿ ಡ್ರೈನೇಜ್ ನೀರು ತುಂಬಿಕೊಂಡಿತ್ತು. ಇದರಿಂದ ವಾಹನ ಸವಾರರು ಪರದಾಡಿದರು. ನಗರದ 7 ವಲಯಗಳ ಪೈಕಿ 18 ಕಡೆ ಡ್ರೈನೇಜ್ ನೀರು ರಸ್ತೆಗೆ ಹರಿದಿದೆ. ಬೆಂಗಳೂರು ಪೂರ್ವ ವಲಯ, ಮಹದೇವಪುರ ವಲಯ, ಬೆಂಗಳೂರು ದಕ್ಷಿಣದಲ್ಲಿ ಮರಗಳು ಬಿದ್ದಿವೆ.
ಜಕ್ಕೂರ್, ಹಂಪಿನಗರ, ನಾಗಪುರ, ನಂದಿನಿ ಲೇಔಟ್, ವಿಶ್ವನಾಥ್ ನಾಗೇನಹಳ್ಳಿ, ರಾಜಮಹಲ್ ಗುಟ್ಟಹಳ್ಳಿ, ಗಾಳಿ ಆಂಜನೇಯ ದೇವಸ್ಥಾನ ಬಳಿ, ಕೊಟ್ಟಿಗೆಪಾಳ್ಯ, ಅಗ್ರಹಾರ ದಾಸರಹಳ್ಳಿ ಸೇರಿದಂತೆ ಅನೇಕ ಕಡೆಗಳಲ್ಲಿ ಭಾರೀ ಮಳೆಯಾಗಿದೆ.
ಯಲಹಂಕ ಬಳಿಯ ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್‌ಗೆ ಮಳೆ ನೀರು ನುಗ್ಗಿದೆ. ಕಾರು, ಬೈಕ್‌ಗಳು ಮುಳುಗುವ ಆತಂಕದಲ್ಲಿ ಅಪಾರ್ಟ್ಮೆಂಟ್ ನಿವಾಸಿಗಳಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ನೀರು ತೆರವು ಮಾಡಿದರು.
ಮಳೆಯಿಂದ ಕುರುಬರಹಳ್ಳಿಯಲ್ಲೂ ಹಾನಿಯಾಗಿದೆ. ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಸಿಲಿಂಡರ್, ಚೇರ್, ಪಾತ್ರೆಗಳು, ಹಾಸಿಗೆ ನೀರಿನಲ್ಲಿ ತೇಲಾಡುತ್ತಿದ್ದವು. ಜಿ.ಟಿ. ಮಾಲ್ ಹಿಂಭಾಗದ ರಸ್ತೆಯಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದೆ. ಮಳೆ ನೀರಿನೊಂದಿಗೆ ರಾಜಕಾಲುವೆಯ ನೀರು ಸಹ ಮನೆಗೆ ನುಗ್ಗಿದೆ. ಜನ ನೀರನ್ನು ತೆರವು ತೆರವುಗೊಳಿಸಿ ಮನೆ ಶುಚಿಗೊಳಿಸುತ್ತಿದ್ದಾರೆ.