ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಬೆಂಗಳೂರು ನಗರ ಸಹಿತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಸುರಿದಿದೆ.
ಬೆಂಗಳೂರು ನಗರದ ವಿಜಯನಗರ, ಸುಂಕದಕಟ್ಟೆ, ಕಾಮಾಕ್ಷಿ ಪಾಳ್ಯ, ಕೆಂಗೇರಿ, ಯಶವಂತಪುರ, ಮೈಸೂರು ರೋಡ್ ಸೇರಿದಂತೆ ಹಲವೆಡೆ ಸಾಧಾರಣ ಮಳೆಯಾಗಿದೆ. ಇತ್ತ ಹಾಸನ, ಹಾವೇರಿ, ಚಿಕ್ಕೋಡಿ, ಮಡಿಕೇರಿ ಸೇರಿದಂತೆ ಕೆಲ ಜಿಲ್ಲೆಗಳಲ್ಲೂ ವರುಣ ತಂಪೆರೆದಿದ್ದಾನೆ. ಇದನ್ನೂ ಓದಿ: ಖಾಸಗಿ ಬಸ್‍ಗಳ ಲೈಸನ್ಸ್ ರದ್ದು ಮಾಡುತ್ತೇವೆ: ಶ್ರೀರಾಮುಲು
ರಾಜ್ಯದಲ್ಲಿ ಮುಂದಿನ ಮೂರ್ನಾಲ್ಕು ದಿನಗಳ ಕಾಲ ಕೆಲವು ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಆಗ್ನೇಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಇದು ಚಂಡಮಾರುತವಾಗಿ ಬದಲಾವಣೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ, ತುಮಕೂರು ಜಿಲ್ಲೆಗಳನ್ನ ಹೊರತುಪಡಿಸಿ ಬಹುತೇಕ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ಇದೆ. ಮಾರ್ಚ್ 20 ರಂದು ದಾವಣಗೆರೆ, ಚಿತ್ರದುರ್ಗ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಮಳೆಯಾಗುವ ನಿರೀಕ್ಷೆ ಇದೆ. 20, 21 ರಂದು ಕರಾವಳಿ ಭಾಗದಲ್ಲಿ, ಉತ್ತರ ಒಳನಾಡಿನ ಕೊಪ್ಪಳ, ರಾಯಚೂರು, ಕಲಬುರಗಿ, ಯಾದಗಿರಿಯಲ್ಲಿ 20, 21 ರಂದು ಸಾಧಾರಣ ಮಳೆಯ ಮುನ್ಸೂಚನೆ ನೀಡಲಾಗಿದೆ. ಇದನ್ನೂ ಓದಿ: ವಾಯುಭಾರ ಕುಸಿತದಿಂದ ಬಂಗಾಳಕೊಲ್ಲಿಯಲ್ಲಿ ‘ಅಸನಿ’ ಚಂಡಮಾರುತ
ಇಂದಿನಿಂದ ಮೂರು ದಿನ ರಾಜ್ಯದ ಬಹುತೇಕ ಕಡೆ ಮಳೆ ಸಾಧ್ಯತೆ ಇದ್ದು, ಇಂದು ಮತ್ತು ನಾಳೆ ದಕ್ಷಿಣ ಒಳನಾಡಿನ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಹಾಸನ, ಕೊಡಗು ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸಾಧ್ಯತೆ ಇದೆ.