ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಗೆ ಮತ್ತೆ ವರುಣ ಎಂಟ್ರಿ ಕೊಟ್ಟಿದೆ. ಒಂದು ತಿಂಗಳಿಂದ ಬಿಡುವು ಕೊಟ್ಟಿದ್ದ ಮಳೆರಾಯ ಈಗ ಮತ್ತೆ ಅಬ್ಬರಿಸುತ್ತಿದ್ದಾನೆ.
ಹೌದು. ಆಗಸ್ಟ್ ಮೊದಲ ವಾರದ ಮಳೆಗೆ ಮಲೆನಾಡು ಅಲ್ಲೋಲ ಕಲ್ಲೋಲವಾಗಿತ್ತು. ತಿಂಗಳಿಂದ ಬಿಡುವು ಕೊಟ್ಟಿದ್ದರಿಂದ ಇನ್ನೇನು ಮಳೆ ನಿಂತೆಂದು ಜನ ನಿಟ್ಟುಸಿರು ಬಿಟ್ಟಿದ್ದರು. ಆದರೆ ಮೂಡಿಗೆರೆಯ ಚಾರ್ಮಾಡಿ ಘಾಟ್, ಆಲೇಖಾನ್ ಹೊರಟ್ಟಿ, ಜಾವಳಿ, ಕೆಳಗೂರು, ಮಧುಗುಂಡಿ, ಸುಂಕಸಾಲೆ, ಕಳಸ, ಕುದುರೆಮುಖ ಸೇರಿದಂತೆ ಹಲವೆಡೆ ಸುರಿದ ಮಳೆ ಅಬ್ಬರಕ್ಕೆ ಜನ ಮತ್ತೆ ಕಂಗಾಲಾಗಿದ್ದಾರೆ.
Advertisement
Advertisement
ಚಾರ್ಮಾಡಿ ಘಾಟಿನ ರಣಭೀಕರ ಮಳೆಗೆ ಅಲ್ಲಲ್ಲಿ ಗುಡ್ಡ ಕುಸಿದಿದ್ದರೆ, ರಸ್ತೆ ಮಧ್ಯೆ ಅರ್ಧ ಅಡಿ ನೀರು ನಿಂತು ಆತಂಕ ಸೃಷ್ಠಿಸಿತ್ತು. ಸದ್ಯ ಲಘು ವಾಹನಗಳಿಗಷ್ಟೇ ಅವಕಾಶ ಕಲ್ಪಿಸಿದ್ದು, ಮತ್ತೆ ಗುಡ್ಡ ಕುಸಿಯೋ ಭೀತಿ ಎದುರಾಗಿದೆ. ಹಾಗಾಗಿ ಮಳೆ ನಿಲ್ಲೋವರೆಗೂ ಚಿಕ್ಕಮಗಳೂರು-ದಕ್ಷಿಣ ಕನ್ನಡದ ಸಂಪರ್ಕ ಸೇತುವೆಯಾಗಿರೋ ಚಾರ್ಮಾಡಿ ಘಾಟ್ ಮಾರ್ಗವನ್ನ ಬಂದ್ ಮಾಡಿದರೆ ಒಳ್ಳೆಯದು ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
Advertisement
Advertisement
ಮಳೆ ಕೇವಲ ಚಾರ್ಮಾಡಿ ಘಾಟಿಗಷ್ಟೆ ಹೊಡೆತ ಕೊಟ್ಟಿಲ್ಲ. ಬದಲಾಗಿ ಚಾರ್ಮಾಡಿ ಘಾಟ್ ತಪ್ಪಲಲ್ಲಿರೋ ಜಿಲ್ಲೆಯ ಗಡಿಗ್ರಾಮ ಆಲೇಖಾನ್ ಹೊರಟ್ಟಿಗೂ ಕೊಟ್ಟಿದೆ. ಆಗಸ್ಟ್ ಮಳೆಗೆ ಗ್ರಾಮದ ರಸ್ತೆಯೇ ಸಂಪೂರ್ಣ ಕೊಚ್ಚಿ ಹೋಗಿತ್ತು. ಇದೇ ಗ್ರಾಮದಲ್ಲಿ ದಾರಿ ಕಾಣದೆ ಕಂಗಾಲಾಗಿದ್ದ ಜನರನ್ನ ಯೋಧರು ರಕ್ಷಿಸಿದ್ದರು. ತಿಂಗಳುಗಳ ಕಾಲ ನಿರಾಶ್ರಿತರ ಕೇಂದ್ರದಲ್ಲಿದ್ದ ಗ್ರಾಮಸ್ಥರು 20 ದಿನಗಳ ಹಿಂದಷ್ಟೇ ಗ್ರಾಮಕ್ಕೆ ತೆರಳಿದ್ದರು. ಕೊಚ್ಚಿ ಹೋಗಿದ್ದ ರಸ್ತೆಯನ್ನ ಇತ್ತೀಚೆಗಷ್ಟೇ ದುರಸ್ತಿ ಮಾಡಿದರು. ಆದರೆ ಇದೀಗ ಮತ್ತೆ ಸುರಿದ ಮಳೆಗೆ ಆಲೇಖಾನ್ ಹೊರಟ್ಟಿ ಗ್ರಾಮದ ರಸ್ತೆ ಪುನಃ ಕೊಚ್ಚಿಕೊಂಡು ಹೋಗಿದೆ. ಇಲ್ಲಿನ ನಿವಾಸಿಗಳಿಗೆ ನಾವು ಇಲ್ಲೇ ಇದ್ದರೆ ಮುಂದೊಂದು ದಿನ ನಾವು ಕೊಚ್ಚಿ ಹೋಗುತ್ತೇವಾ ಎಂಬ ಆತಂಕ ಶುರುವಾಗಿದೆ. ಹಾಗಾಗಿ ಇಲ್ಲಿನ ಜನ ಸರ್ಕಾರ ಕೂಡಲೇ ನಮ್ಮನ್ನ ಸ್ಥಳಾಂತರ ಮಾಡುವಂತೆ ಆಗ್ರಹಿಸಿದ್ದಾರೆ.
ಒಟ್ಟಾರೆ, ಭಾರೀ ಮಳೆಯಿಂದ ನೀರು ಎಲ್ಲೆಂದರಲ್ಲಿ ನುಗ್ಗಿರೋದರಿಂದ ಘಟ್ಟಪ್ರದೇಶದ ಆಸುಪಾಸಿನ ಗ್ರಾಮಗಳಲ್ಲಿ ಮತ್ತೆ ಆತಂಕ ಎದುರಾಗಿದೆ. ಮಧುಗುಂಡಿ, ಮಲೆಮನೆ, ದುರ್ಗದಹಳ್ಳಿ ಜನ ಭಯ ಇಮ್ಮಡಿಗೊಂಡಿದೆ. ಮಧುಗುಂಡಿ ಗ್ರಾಮದ ನೂರಕ್ಕೂ ಹೆಚ್ಚು ಜನ ಇಂದಿಗೂ ನಿರಾಶ್ರಿತ ಕೇಂದ್ರದಲ್ಲಿದ್ದಾರೆ. ಮಳೆ ಹೀಗೆ ಮುಂದುವರಿದರೆ ಮಲೆನಾಡಿನ ಕಥೆ ಏನೋ ಎಂಬ ಆತಂಕ ಮಲೆನಾಡಿಗರಲ್ಲಿ ದಟ್ಟವಾಗಿದೆ.